Advertisement

Bangalore: ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ನೂತನ ಆ್ಯಪ್‌

11:27 AM Dec 10, 2023 | Team Udayavani |

ಬೆಂಗಳೂರು: ನಗರದಲ್ಲಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ನೂತನ ಆ್ಯಪ್‌ ಸಿದ್ಧಪಡಿಸ ಲಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಎಂ.ಎನ್‌.ಅನುಚೇತ್‌ ತಿಳಿಸಿದರು.

Advertisement

ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದ ಅಂಗವಾಗಿ ಅಶೋಕನಗರದ ಬಾಲ್ಡ್‌ವಿನ್‌ ಶಾಲೆಯ ಆಡಿಟೋರಿಯಂನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನೂರಾರು ಸಾರ್ವಜನಿಕರು, ನಗರದ ರಸ್ತೆಗಳಲ್ಲಿ ಸಾಕಷ್ಟು ಬಾರಿ ಆ್ಯಂಬುಲೆನ್ಸ್‌ ಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದಕ್ಕೆ ಸಂಚಾರ ವಿಭಾಗದ ಅಧಿಕಾರಿಗಳು ಕ್ರಮಕೈಗೊಳ್ಳ ಬೇಕು ಎಂದು ಮನವಿ ಮಾಡಿದರು.

ಆ್ಯಪ್‌ ಡೆವಲಪರ್‌ಗಳ ಜತೆ ಚರ್ಚೆ: ಅದಕ್ಕೆ ಉತ್ತರಿಸಿದ ಅನುಚೇತ್‌, ನಗರದಲ್ಲಿ 3 ಸಾವಿರ ಆ್ಯಂಬುಲೆನ್ಸ್‌ಗಳು ಸಂಚರಿಸುತ್ತಿವೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅವುಗಳ ಸುಗಮ ಸಂಚಾರಕ್ಕೆ ಪೂರಕ ವಾಗಿ ಹೊಸ ಆ್ಯಪ್‌ ಸಿದ್ಧಪಡಿಸಲು ಸಂಚಾರ ವಿಭಾಗ ಮುಂದಾಗಿದೆ. ಈ ಬಗ್ಗೆ ಆ್ಯಪ್‌ ಡೆವಲಪರ್‌ಗಳ ಜತೆಯೂ ಒಂದು ಸುತ್ತಿನ ಚರ್ಚೆ ನಡೆದಿದೆ ಎಂದು ಹೇಳಿದರು.

ಪ್ರಾಥಮಿಕವಾಗಿ ಆ್ಯಂಬುಲೆನ್ಸ್‌ಗಳು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ಆ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿದರೆ, ಅದನ್ನು ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲಿಸಿ, ಸೂಕ್ತ ರಸ್ತೆಯನ್ನು ಸೂಚಿಸುವ ವ್ಯವಸ್ಥೆ ಮಾಡಲಾಗುತ್ತದೆ. ಹಾಗೆಯೇ ಒಂದೇ ಸಿಗ್ನಲ್‌ನಲ್ಲಿ 60 ಸೆಕೆಂಡ್‌ಗೂ ಹೆಚ್ಚು ಕಾಲ ನಿಂತಿದ್ದರೆ ಹಾಗೂ ಆ್ಯಂಬುಲೆನ್ಸ್‌ ಸಂಚರಿಸುವ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಿ ಸಂಚಾರ ದಟ್ಟಣೆ ಕಡಿಮೆ ಅಥವಾ ಸಿಗ್ನಲ್‌ ಫ್ರೀ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಶಾಲೆಗಳ ಬಳಿ ಸಂಚಾರ ಪೊಲೀಸರ ನಿಯೋಜನೆ :

Advertisement

ನಗರದ ಶಾಲೆಗಳ ಬಳಿ ಸಂಚಾರ ಪೊಲೀಸರನ್ನು ನಿಯೋಜಿಸಿ ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ತಿಳಿಸಿದರು. ಸಂಚಾರ ಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೂರಾರು ಸಾರ್ವಜನಿಕರು, ಶಾಲೆಗಳಿರುವ ರಸ್ತೆಯಲ್ಲಿ ಮಕ್ಕಳನ್ನು ಶಾಲೆಗೆ ಬಿಡುವಾಗ ಮತ್ತು ಕರೆದೊಯ್ಯುವಾಗ ಪೋಷಕರು ರಸ್ತೆ ಬದಿಯೇ ವಾಹನ ನಿಲುಗಡೆ ಮಾಡುತ್ತಾರೆ. ಅದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಬಗ್ಗೆ ಸಂಚಾರ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆದರೂ, ಸಮಸ್ಯೆಗೆ ಪರಿಹಾರ ದೊರೆಯುತ್ತಿಲ್ಲ ಎಂದು ಕಾರ್ಯಕ್ರಮದಲ್ಲಿದ್ದ ಸಾರ್ವಜನಿಕರು ದೂರು ನೀಡಿದರು.

ಅದಕ್ಕೆ ಉತ್ತರ ನೀಡಿದ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ, ಅಂತಹ ಶಾಲೆಗಳ ಮಾಹಿತಿ ನೀಡಿದರೆ, ಅವುಗಳ ಬಳಿ ಸಂಚಾರ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ, ಸುಗಮ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಜತೆಗೆ ಶಾಲೆಗಳ ಆಡಳಿತ ಮಂಡಳಿಗೂ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗುತ್ತದೆ ಎಂದರು.

ಇನ್ನು ಶಾಂತಿನಗರ, ಲಾಲ್‌ಬಾಗ್‌ ರಸ್ತೆಗಳಲ್ಲಿ ಹೊಸೂರು ಕಡೆ ತೆರಳುವ ತಮಿಳುನಾಡು ಬಸ್‌ಗಳು ರಸ್ತೆ ಬದಿಯೇ ನಿಲ್ಲಿಸುತ್ತಾರೆ. ಬೇಗನೇ ಪೂರ್ಣಗೊಳ್ಳದ ಕಾಮಗಾರಿಗಳಿಂದಲೂ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ ಎಂದು ಕೆಲ ಸಾರ್ವಜನಿಕರು ಆರೋಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್‌ ಆಯುಕ್ತರು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನಿತಾ, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next