ಚಿಕ್ಕಮಗಳೂರು: ನಾನು ಯಾವುದರಲ್ಲೂ ಸಾಫ್ಟ್ ಕಾರ್ನರ್ ತೋರಿಲ್ಲ. ಖಡಕ್ ಎಂದರೆ ಏನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಪಕ್ಷಗಳಿಗೆ ಪ್ರಶ್ನಿಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಕೇಸ್ ತಕ್ಷಣವೇ ಎಫ್ಐಆರ್ ಮಾಡಿ ಕೆಲಸ ಮಾಡುತ್ತಿದ್ದೇವೆ. ಹುಬ್ಬಳ್ಳಿ ಘಟನೆಗೂ ಕ್ರಮ ತೆಗೆದುಕೊಂಡಿದ್ದೇವೆ. ಶಿವಮೊಗ್ಗ ಕೇಸಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಹಣ್ಣಿನ ಅಂಗಡಿ ವಿಚಾರದಲ್ಲೂ ಕ್ರಮ ತೆಗೆದುಕೊಂಡಿದ್ದೇವೆ. ಯಾವುದೂ ವಿಳಂಬ ಮಾಡಿಲ್ಲ. ಇದಕ್ಕಿಂತ ಬೇರೆ ಇನೇನು ಬೇಕು ನಿಮಗೆ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ ಪ್ರಕರಣದಲ್ಲಿ ಯಾವ ಅಮಾಯಕನ ಬಂಧನ ಆಗಿಲ್ಲ. ಸಾಕ್ಷಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ವಿರೋಧಪಕ್ಷಗಳು ಟೀಕೆ ಮಾಡುವುದು ಸಾಮಾನ್ಯ. ಆದರೆ ಜನರು ಏನು ಹೇಳುತ್ತಾರೆ ಮುಖ್ಯವಾಗುತ್ತದೆ ಎಂದರು.
ಇದನ್ನೂ ಓದಿ:‘ನಿಧಾನವಾಗಿ ಚಲಿಸಿ, ಇದು ಆಸ್ಪತ್ರೆ ಇಲ್ಲದ ಊರು’: ಶೃಂಗೇರಿಯಲ್ಲಿ ಸಿಎಂಗೆ ವ್ಯಂಗ್ಯದ ಸ್ವಾಗತ
ಮುಖ್ಯಮಂತ್ರಿಯಾದ ಮೇಲೆ ಚಿಕ್ಕಮಗಳೂರಿಗೆ ಮೊದಲ ಬಾರಿ ಭೇಟಿ ನೀಡುತ್ತಿದ್ದೇನೆ. ಈ ಹಿಂದೆ ಎರಡು ಬಾರಿ ಕಾರ್ಯಕ್ರಮ ನಿಗದಿಯಾಗಿದ್ದರೂ, ಬರಲಾಗಿರಲಿಲ್ಲ. ಈ ಬಾರಿ ಶಾರದಾಂಬೆಯ ದರ್ಶನ ಮಾಡಲು ಶೃಂಗೇರಿಗೆ ಬಂದಿದ್ದೇನೆ. ನಾಡಿನ ಸುಭಿಕ್ಷೆಗಾಗಿ ಆಗಿ ಶಾರದಾಂಬೆಯ ಪ್ರಾರ್ಥನೆ ಮಾಡುತ್ತೇನೆ ಎಂದರು.