“ನ್ಯೂರಾನ್’… ಇದು ವಿಜ್ಞಾನಕ್ಕೆ ಸಂಬಂಧಿಸಿದ ಪದ. ಈಗ “ನ್ಯೂರಾನ್’ ಹೆಸರಲ್ಲೇ ಚಿತ್ರವೊಂದು ಮೂಡಿಬರುತ್ತಿರುವುದು ಗೊತ್ತೇ ಇದೆ. ಅಂದಹಾಗೆ, ಕೆಲವರನ್ನು ಹೊರತುಪಡಿಸಿದರೆ ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ವಿಕಾಸ್ ಪುಷ್ಪಗಿರಿ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಸದ್ಯಕ್ಕೆ ಬಿಡುಗಡೆಗೆ ರೆಡಿಯಾಗುತ್ತಿರುವ ಈ ಚಿತ್ರ ಹಾಡಿನ ಮೂಲಕ ಸದ್ದು ಮಾಡುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಎರಡು ಹಾಡುಗಳಿಗೆ ಮೆಚ್ಚುಗೆ ಸಿಕ್ಕಿದ್ದು, ಶುಕ್ರವಾರ ಚಿತ್ರದ ಮತ್ತೊಂದು ಹೊಸ ಹಾಡು ಬಿಡುಗಡೆಯಾಗಿದೆ.
ಸಕಲೇಶಪುರ ಬಳಿ ಇರುವ ಹುಚ್ಚಂಗಿ ಬೆಟ್ಟದಲ್ಲಿ ಚಿತ್ರೀಕರಣಗೊಂಡಿರುವ “ಒಂದೆ ಒಂದು ಬಾರಿ ಬಂದು ನನ್ನ ಮುಂದೆ ನಿಲ್ಲೆ…’ ಎಂದು ಶುರುವಾಗುವ ಈ ಹಾಡು ಸದ್ಯಕ್ಕೆ ಸುದ್ದಿಯಲ್ಲಿದೆ. ಈ ಹಾಡಿನ ವಿಶೇವೆಂದರೆ, “ಎಡಕಲ್ಲು ಗುಡ್ಡದ ಮೇಲೆ’ ಚಿತ್ರದ ಚಿತ್ರೀಕರಣ ನಡೆಸಿದ ಸ್ಥಳದಲ್ಲೇ ಚಿತ್ರೀಕರಿಸಿರುವುದು. ಗುರುಕಿರಣ್ ಸಂಗೀತವಿರುವ ಚಿತ್ರದ ಈ ಹಾಡಿಗೆ ಕವಿರಾಜ್ ಅವರ ಸಾಹಿತ್ಯವಿದೆ. ಸಂಚಿತ್ ಹೆಗ್ಡೆ ಹಾಡಿಗೆ ಧ್ವನಿಯಾಗಿದ್ದಾರೆ. ಕಲೈ ಮತ್ತು ರಾಮು ಚಿತ್ರದ ನೃತ್ಯ ನಿರ್ದೇಶಕರು.
ಚಿತ್ರವನ್ನು ವಿನಯ್‌ಕುಮಾರ್ ನಿರ್ಮಾಣ ಮಾಡಿದ್ದಾರೆ. ಇನ್ನು, “ನ್ಯೂರಾನ್’ ಚಿತ್ರದ ಬಗ್ಗೆ ಹೇಳುವುದಾದರೆ, “ಮನುಷ್ಯ ನ್ಯೂರಾನ್ಸ್ ಇಲ್ಲದೆ ಬದುಕಲು ಸಾಧ್ಯವಿಲ್ಲ. ಬ್ರೈನ್ಸ್‌ಗೆ ಸಂದೇಶ ರವಾನಿಸೋದೇ ಈ ನ್ಯೂರಾನ್. ಇದರಿಂದಲೇ ಮೆದುಳು ಸಕ್ರಿಯವಾಗಿ ಕೆಲಸ ಮಾಡುತ್ತದೆ. ಇವತ್ತಿನ ಜನರೇಷನ್‌ಗೆ ಬೇಕಾದ ಅಂಶಗಳೊಂದಿಗೆ ಈ ಚಿತ್ರ ಮಾಡಲಾಗಿದೆ. ಸಕಲೇಶಪುರ, ಮಡಿಕೇರಿ, ಬೆಂಗಳೂರು, ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ.
ಚಿತ್ರಕ್ಕೆ ಯುವ ಹೀರೋ ಆಗಿದ್ದಾರೆ. ನೇಹಾ ಪಾಟೀಲ್, ವೈಷ್ಣವಿ ಹಾಗು ಹೊಸ ಪ್ರತಿಭೆ ಶಿಲ್ಪಾಶೆಟ್ಟಿ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಅರವಿಂದ್ ಸೇರಿದಂತೆ ಹಲವರು ನಟಿಸಿದ್ದಾರೆ. ಶೋಯೆಬ್ ಅಹ್ಮದ್ ಛಾಯಾಗ್ರಹಣ ಮಾಡಿದ್ದಾರೆ. ನಿರ್ದೇಶಕ ವಿಕಾಸ್ ಪುಷ್ಪಗಿರಿ ಜೊತೆಗೆ ರವಿ ಅವರು ಕಥೆಗೆ ಸಾಥ್ ಕೊಟ್ಟಿದ್ದಾರೆ. ಶ್ರೀಧರ್ ಅವರ ಸಂಕಲನವಿದೆ. ಶ್ರೀಹರ್ಷ ಅವರು ಮಾತುಗಳನ್ನು ಪೋಣಿಸಿದ್ದಾರೆ. ಥ್ರಿಲ್ಲರ್ ಮಂಜು ಅವರು ಸಾಹಸ ನಿರ್ದೇಶಕರು. ಜಾಕ್ ಮಂಜು ಅವರು ಚಿತ್ರದ ವಿತರಣೆ ಹಕ್ಕು ಪಡೆದಿದ್ದಾರೆ.