ಶಿವಮೊಗ್ಗ : ಅನ್ಲೈನ್ ಕ್ಲಾಸ್ ಗಾಗಿ ನೆಟ್ವರ್ಕ್ ಹುಡುಕಿಕೊಂಡು ಮನೆಯಿಂದ ಅನತಿ ದೂರದ ಎತ್ತರದ ಪ್ರದೇಶಕ್ಕೆ ಹೋಗಿದ್ದ ವಿದ್ಯಾರ್ಥಿನಿಗೆ ಕಿಡಿಗೇಡಿಯೊಬ್ಬ ಕಿರುಕುಳ ನೀಡಿದ ಘಟನೆ ನಡೆದಿದೆ.
ಸಾಗರ ತಾಲೂಕಿನ ತುಮರಿ ಗ್ರಾ.ಪಂ ವ್ಯಾಪ್ತಿಯ ಮಾರಲಗೋಡು ಸಮೀಪ ಕಿಡಿಗೇಡಿ ಯುವಕ ದಾರಿಯಲ್ಲಿ ಅಡ್ಡಹಾಕಿ ಮೊಬೈಲ್ ಕಿತ್ತುಕೊಂಡು ಯುವತಿಗೆ ಕಿರುಕುಳ ನೀಡಿದ್ದಾನೆ.
ಮಾಹಿತಿ ತಿಳಿದು ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದು, ಗ್ರಾಮದ ಸುತ್ತಲೂ ಹುಡುಕಾಟ ನಡೆಸಿದ್ದಾರೆ. ಮೊಬೈಲ್ ಹಾಗೂ ಬೈಕ್ ಬಿಟ್ಟು ಕಿಡಿಗೇಡಿ ಯುವಕ ಪರಾರಿಯಾಗಿದ್ದಾನೆ.
ಸಾಗರ ತಾಲೂಕಿನ ಅರಳಗೋಡು ಗ್ರಾಮದ ಯುವಕ ಎನ್ನಲಾಗಿದ್ದು, ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಮಲೆನಾಡು ಭಾಗದ ನೆಟ್ವರ್ಕ್ ಸಮಸ್ಯೆಯಿಂದಾಗಿಯೇ ಘಟನೆ ನಡೆದಿದೆ ಎಂದು ಆಕ್ರೋಶ ವ್ಯಕ್ತವಾಗಿದ್ದು, ಆನ್ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್ ನಲ್ಲಿರುವವರು ನೆಟ್ವರ್ಕ್ ಹುಡುಕಿಕೊಂಡು ಗುಡ್ಡ ಏರುವ ಪರಿಸ್ಥಿತಿ ಇದೆ. ನೆಟ್ವರ್ಕ್ ಗಾಗಿ ಈವರೆಗೆ ರೂಪಿಸಿದ ಎಲ್ಲಾ ಹೋರಾಟಗಳು ವ್ಯರ್ಥವಾಗಿದ್ದು, ಜನಪ್ರತಿನಿಧಿಗಳು ಶರಾವತಿ ಹಿನ್ನೀರವಾಸಿಗಳ ಬೇಡಿಕೆಯನ್ನು ಪರಿಗಣಿಸದೇ ಗಾಳಿಗೆ ತೂರಿದ್ದಾರೆ ಎಂದು ಜನರು ನೋವು ತೋಡಿಕೊಂಡಿದ್ದಾರೆ.