Advertisement

ನೇತ್ರಾವತಿ- ಫ‌ಲ್ಗುಣಿಯಲ್ಲಿ 7 ತೇಲುವ ಜೆಟ್ಟಿ

11:39 PM Mar 04, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿಗಳಾದ ನೇತ್ರಾವತಿ ಹಾಗೂ ಫ‌ಲ್ಗುಣಿ (ಗುರುಪುರ) ನದಿಗಳಲ್ಲಿ ಏಳು ತೇಲುವ ಜೆಟ್ಟಿಗಳಿಗೆ ಕೇಂದ್ರದ ಬಂದರು, ನೌಕಾ ಮತ್ತು ಜಲಮಾರ್ಗ ಸಚಿವಾಲಯ ಮಂಜೂರಾತಿ ನೀಡಿದೆ.

Advertisement

ಈ ಯೋಜನೆಗಳಿಂದ ದ.ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೊಸ ಹೊಸ ದಿಕ್ಕಿನತ್ತ ಸಾಗಲಿದ್ದು, ಈ ಜೆಟ್ಟಿಗಳು ಕಾರ್ಯರಂಭಿಸಿದಾಗ ಸ್ಥಳೀಯ ಯುವಕರಿಗೆ ಉದ್ಯೋಗದ ಜತೆಗೆ ಆರ್ಥಿಕ ವಹಿವಾಟಿಗೂ ಉತ್ತೇಜನ ದೊರೆಯುವ ನಿರೀಕ್ಷೆ ಇದೆ.

ಸುಲ್ತಾನ್‌ ಬತ್ತೇರಿ, ಬಂದರು ಫೆರ್ರಿ, ಸ್ಯಾಂಡ್‌ ಪಿಟ್‌ ಬೆಂಗ್ರೆ, ಉತ್ತರ ಸ್ಯಾಂಡ್‌ಬಾರ್‌, ಹಳೆ ಬಂದರು, ಜಪ್ಪಿನಮೊಗರು ಹಳೆ ಫೆರ್ರಿ ಮತ್ತು ಕಸಬ ಬೆಂಗರೆಯಲ್ಲಿ ಕೇಂದ್ರ ಸರಕಾರದ ಬಹು ನಿರೀಕ್ಷೆಯ ಸಾಗರಮಾಲಾ ಯೋಜನೆಯಡಿ ಈ ಜೆಟ್ಟಿಗಳಿಗೆ ಮಂಜೂರಾತಿ ದೊರಕಿದ್ದು, ಈ ಯೋಜನೆಯ ಶೇ. 100ರಷ್ಟು ಅನುದಾನ, 26 ಕೋಟಿ ರೂ.ಗಳನ್ನು ಕೇಂದ್ರ ಸಚಿವಾಲಯ ಒದಗಿಸಲಿದೆ.

ಕರ್ನಾಟಕದಲ್ಲಿ 1,428 ಕೋಟಿ ರೂ.ಗಳಲ್ಲಿ 27 ಯೋಜನೆಗಳಿಗೆ ಸಾಗರಮಾಲಾ ಯೋಜನೆಯಡಿ ಈಗಾಗಲೇ 611 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ಈವರೆಗೆ 70 ಕೋಟಿ ರೂ.ಗಳಲ್ಲಿ ಮೂರು ಯೋಜನೆಗಳು ಪೂರ್ಣಗೊಂಡಿವೆ. ಕರ್ನಾಟಕ ಸಾಗರ ಮಂಡಳಿಗೆ 650 ಕೋಟಿ ರೂ. ವೆಚ್ಚದ 18 ಯೋಜನೆಗಳನ್ನು ಮಂಜೂರು ಮಾಡಲಾಗಿದೆ ಎಂದು ಕೇಂದ್ರದ ನೌಕಾಯಾನ ಸಚಿವ ಸರ್ಬಾನಂದ ಸೊನೊವಾಲ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತೇಲುವ ಜೆಟ್ಟಿಗಳು, ಮರೀನಾಗಳು, ಸಣ್ಣ ಬಂದರುಗಳು, ಮೀನುಗಾರಿಕೆ ಬಂದರುಗಳು, ಫಿಶ್‌ ಲ್ಯಾಂಡಿಂಗ್‌ ಕೇಂದ್ರಗಳು ಮತ್ತು ವಾಟರ್‌ಡ್ರೋಮ್‌ಗಳು ಸೇರಿದಂತೆ ಬಹು ವಿಧದ ಕಾಮಗಾರಿಗಳನ್ನು ಹೊಂದಿರುತ್ತದೆ. ಸಾಂಪ್ರದಾಯಿಕ ಜೆಟ್ಟಿಗಳಿಗಿಂತ ಇತರ ಹಲವಾರು ಪ್ರಯೋಜನವನ್ನು ಹೊಂದಿರುವುದಲ್ಲದೆ, ಪರಿಸರ ಸ್ನೇಹಿ, ದೀರ್ಘಾವಧಿ ಬಾಳಿಕೆ ಹಾಗೂ ಸುಲಭವಾಗಿ ಮರು ಜೋಡಣೆಯ ಅವಕಾಶವನ್ನು ಹೊಂದಿರಲಿವೆ. ಅಂತಾರಾಷ್ಟ್ರೀಯ ಮಾರ್ಗದರ್ಶಿ ತತ್ವಗಳನ್ನು ಅನುಸರಿಸುವ ಮೂಲಕ ಸಚಿವಾಲಯವು ಈಗಾಗಲೇ ಕೆಲವು ಪ್ರಾಯೋಗಿಕ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇವುಗಳಲ್ಲಿ ಗೋವಾದಲ್ಲಿ ಪ್ರಯಾಣಿಕರ ತೇಲುವ ಜೆಟ್ಟಿಗಳು, ಸಬರಮತಿ ನದಿ ಮತ್ತು ಸರ್ದಾರ್‌ ಸರೋವರ್‌ ಅಣೆಕಟ್ಟಿನಲ್ಲಿ (ಸೀಪ್ಲೇನ್‌ ಸೇವೆಗಳಿಗಾಗಿ) ವಾಟರ್‌ -ಏರೋಡ್ರೋಮ್‌ಗಳು ಉತ್ತಮ ಫ‌ಲಿತಾಂಶ ನೀಡುತ್ತಿವೆ. ಕರಾವಳಿ ಸಮುದಾಯದ ಒಟ್ಟಾರೆ ಅಭಿವೃದ್ಧಿ ಮತ್ತು ಉನ್ನತಿಗಾಗಿ ಕರ್ನಾಟಕದ ಕರಾವಳಿಯಾದ್ಯಂತ ಸಚಿವಾಲಯದ 80ಕ್ಕೂ ಹೆಚ್ಚು ಯೋಜನೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಎಂದು ಪ್ರಕಟನೆ ತಿಳಿಸಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next