Advertisement
ಪ್ರಸ್ತುತ ಎರಡು ಪಂಪ್‌ಗ್ಳು ಚಾಲನೆಯಲ್ಲಿವೆ. 2 ಮೀ.ಗಿಂತಲೂ ನೀರು ಕೆಳಕ್ಕೆ ಇಳಿದರೆ ಪಂಪಿಂಗ್ ಕಷ್ಟ ಆಗಲಿದೆ. ಬಳಿಕ ಜ್ಯಾಕ್‌ವೆಲ್‌ಗೆ ಹರಿಯದ ನೀರನ್ನು ಪ್ರತ್ಯೇಕ ಮೋಟಾರ್ ಮೂಲಕ ಜ್ಯಾಕ್‌ವೆಲ್‌ಗೆ ಹರಿಸಬೇಕಿದೆ.
ಮನಪಾ ಅಂಕಿ-ಅಂಶದಂತೆ ನೇತ್ರಾವತಿ ನದಿ ಇದು 3ನೇ ಬಾರಿಗೆ ಸಂಪೂರ್ಣ ಬರಿದಾಗಿದೆ. ಡ್ಯಾಂ 4 ಮೀ. ಎತ್ತರ ಇದ್ದಾಗ 2003ರಲ್ಲಿ ಬರಿದಾಗಿತ್ತು. ಆಗ ನೀರಿನ ಮಟ್ಟ 3.2 ಮೀ. ಇಳಿದು ಉಪಯೋಗ ಶೂನ್ಯವಾಗಿತ್ತು. ನದಿ ಪಾತ್ರದ ಜನರು ಕಂಗಾಲಾಗಿದ್ದರು. ತೀರಾ ತಡವಾಗಿ ಜೂ. 13ಕ್ಕೆ ಮಳೆ ಬಂದಿತ್ತು. ಡ್ಯಾಂಗೆ ನೀರು ಹರಿದುಬಂದದ್ದು ಜೂ. 15ರಂದು. ಆಗ ಆಳದ ನೀರನ್ನು ಡೀಸೆಲ್ ಪಂಪ್ ಬಳಸಿ ಹರಿಸುವ ಪ್ರಯತ್ನ ನಡೆಸಲಾಗಿತ್ತು. ಅಂತಿಮವಾಗಿ ಕುದುರೆ ಮುಖ ಅದಿರನ್ನು ಮಂಗಳೂರಿಗೆ ತರಿಸಿಕೊಳ್ಳುವ ಪೈಪ್‌ಲೈನ್ ಮೂಲಕ ಲಕ್ಯಾ ಡ್ಯಾಂನಿಂದ ನೀರು ತರಿಸಲಾಗಿತ್ತು. 2016ರ ಮೇ ತಿಂಗಳ ಮೊದಲ ವಾರದಲ್ಲಿ ಒಮ್ಮೆಲೇ ಬಿರುಸಾದ ಮಳೆ ಬಂದ ಕಾರಣ ತುಂಬೆ ಕಿರು ಡ್ಯಾಂ ಮೇಲಿಂದ ನೀರು ಹರಿದಿತ್ತು. ನೂತನ ಡ್ಯಾಂ ನಿರ್ಮಾಣ ಸಾಮಗ್ರಿಗಳು ಕೊಚ್ಚಿ ಹೋಗಿದ್ದವು. ಇದರಿಂದಾಗಿ ಮನಪಾ ಅಧಿಕಾರಿಗಳು ಡ್ಯಾಂನ ಹಲಗೆಗಳನ್ನು ತೆಗೆಸಿದ್ದರು. ನೀರು ಹೊರಹರಿದ ಬಳಿಕ ಮೇಲಿಂದ ಒರತೆ ಇಲ್ಲದೆ ನದಿ ಬರಿದಾಗಿತ್ತು. ಅಧಿಕಾರಿ ವರ್ಗದ ಎಡವಟ್ಟಿನಿಂದ ಮೇ ಕೊನೆಯ ವಾರದಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿತ್ತು.
Related Articles
ಜೂನ್ ತಿಂಗಳ ಮಳೆಯನ್ನು ನಿರೀಕ್ಷಿಸಿ ಜೀವ ಹಿಡಿದುಕೊಂಡಂತಹ ಸ್ಥಿತಿಯಲ್ಲಿ ಜನತೆ ಇದೆ. ಪ್ರಸ್ತುತ ಹವಾಮಾನ ಮುನ್ಸೂಚನೆಯಂತೆ ಜಿಲ್ಲೆಗೆ ಜೂ. 6ರ ಬಳಿಕ ಮಳೆ ಬರುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಇದೇ ನೀರನ್ನು ನಂಬಿರುವುದು ಕಷ್ಟ.
Advertisement
ಲಕ್ಯಾದಲ್ಲೂ ನೀರಿಲ್ಲಹಿಂದೆ 2003ರಲ್ಲಿ ಲಕ್ಯಾದಿಂದ ನೀರು ತರಿಸಲಾಗಿತ್ತು. ಆದರೆ ಈ ಬಾರಿ ಅಲ್ಲೂ ಕಡಿಮೆಯಾಗಿದೆ. ಪಂಪಿಂಗ್ ಮೂಲಕ ನೀರು ಹಾಯಿಸಲು ಕೋರ್ಟ್ ಅನುಮತಿ ಇಲ್ಲ. ಕುಡಿಯುವ ಉದ್ದೇಶಕ್ಕಾಗಿ ಗುರುತ್ವಾಕರ್ಷಣ ಶಕ್ತಿ ಮೂಲಕ ಹರಿಸಲು ಮಾತ್ರ ಅನುಮತಿ ಇದೆ. ಆದರೆ ಕೊಳವೆಯಲ್ಲಿ ಹಾವಸೆ, ತುಕ್ಕಿ ನಿಂದಾಗಿ ಗುರುತ್ವಾಕರ್ಷಣದಿಂದ ಸರಾಗವಾಗಿ ಹರಿಯುವುದಿಲ್ಲ. ಈ ಕಾರಣ ಲಕ್ಯಾದ ನೀರನ್ನು ಮಂಗಳೂರಿಗೆ ತರಿಸಲು ಅಸಾಧ್ಯವಾಗಿದೆ. ಹೂಳಿನಿಂದಲೂ ಸಮಸ್ಯೆ
ಲಭ್ಯ ಮಾಹಿತಿಯಂತೆ ನದಿಯಲ್ಲಿ ಕನಿಷ್ಠ ಎರಡು ಮೀ. ಹೂಳು ತುಂಬಿದೆ. ನದಿಯಲ್ಲಿ ಸಾಂಪ್ರದಾಯಿಕವಾಗಿ ಮರಳು ಎತ್ತುವುದಕ್ಕೆ ಸರಕಾರ ತಡೆಯುಂಟು ಮಾಡಿದ್ದು ದೊಡ್ಡ ಸಮಸ್ಯೆಗೆ ಕಾರಣ. ದಶಕದ ಹಿಂದೆ ಸ್ಥಳೀಯ
ನದಿ ದಂಡೆಯಲ್ಲಿ ಜಮೀನು ಇದ್ದವರು ಮರಳು ಎತ್ತುವ ಗುತ್ತಿಗೆಯನ್ನು ಸ್ಥಳೀಯ ಪುರಸಭೆ ಅಥವಾ ಗ್ರಾ.ಪಂ.ನಿಂದ ಪಡೆದು ರಾತ್ರಿ ಹಗಲೆನ್ನದೆ ಕೆಲಸ ನಿರ್ವಹಿಸುತ್ತಿದ್ದರು. ಅನಂತರ ಅದೊಂದು ದಂಧೆಯಾಯಿತು. ಸ್ಪರ್ಧೆ ಆರಂಭಗೊಂಡಿತ್ತು. ಜಿಲ್ಲೆ, ತಾಲೂಕು ವ್ಯಾಪ್ತಿಯಲ್ಲಿ ಇದ್ದ ಮರಳಿನ ವ್ಯವಹಾರ ರಾಜ್ಯ ಮಟ್ಟಕ್ಕೆ ವಿಸ್ತರಿಸಿತು. ಪ್ರಸ್ತುತ ಸರಕಾರಕ್ಕೂ ನಿಭಾಯಿಸಲಾಗದ ಸ್ವರೂಪಕ್ಕೆ ಸಮಸ್ಯೆ ಬೆಳೆದು ನಿಂತಿದೆ. ತುಂಬೆಯಲ್ಲಿ ನೀರೆಷ್ಟು?
ಜೂ. 2ರಂದು ರಾತ್ರಿ 10 ಗಂಟೆ ವೇಳೆಗೆ ನೀರಿನ ಮಟ್ಟ 2.54 ಮೀಟರ್‌ನಲ್ಲಿದೆ. ರೇಷನಿಂಗ್ ಪ್ರಕಾರ ಶುಕ್ರವಾರ ಬೆಳಗ್ಗಿನಿಂದ ಪಂಪ್ ಚಾಲೂ ಇದ್ದು, ಮಂಗಳೂರಿಗೆ ಸರಬರಾಜು ಮಾಡಲಾಗುತ್ತಿದೆ. ಇನ್ನೂ ಎರಡು ದಿನ ಅಂದರೆ ಮಂಗಳವಾರ ಬೆಳಗ್ಗಿನ ತನಕ ನೀರೆತ್ತಲಾಗುತ್ತದೆ. ಪಂಪಿಂಗ್ ಮಾಡುವ ಸಂದರ್ಭ 1 ದಿನದಲ್ಲಿ ಸುಮಾರು 14ರಿಂದ 15 ಸೆಂ.ಮೀ.ನಷ್ಟು ನೀರು ಖಾಲಿಯಾಗುತ್ತದೆ. ಅಂದರೆ 4 ದಿನದಲ್ಲಿ ಸುಮಾರು 60 ಸೆಂ.ಮೀ.ನಷ್ಟು ನೀರು ಖಾಲಿಯಾಗುತ್ತದೆ. ಉಳಿದಂತೆ ತಳಮಟ್ಟದ ನೀರು ಜ್ಯಾಕ್‌ವೆಲ್‌ಗೆ ಹರಿದು ಬರುವುದಿಲ್ಲ. ಜ್ಯಾಕ್‌ವೆಲ್‌ನಿಂದ ನೀರೆತ್ತುವ ಪೈಪಿನ ಫುಟ್‌ವಾಲ್ ಅರ್ಧಕ್ಕೂ ಹೆಚ್ಚು ಭಾಗ ನೀರಿನಿಂದ ಮೇಲಕ್ಕೆ ಕಾಣುತ್ತಿದೆ. ಮುಂದಿನ ಅವಧಿಯಲ್ಲಿ ಎರಡು ದಿನ ನೀರೆತ್ತಲು ಸಾಧ್ಯವಾಗಬಹುದು. ಅಷ್ಟರೊಳಗೆ ಜೋರಾಗಿ ಮಳೆ ಬಾರದೇ ಇದ್ದರೆ ಸಮಸ್ಯೆ ಗಂಭೀರ ಸ್ಥಿತಿಗೆ ತಲುಪಲಿದೆ. ದಿನಕ್ಕೆ ಹೆಚ್ಚುಕಡಿಮೆ 14 ಸೆಂ.ಮೀ. ನಂತೆ ನೀರಿನ ಮಟ್ಟ ಇಳಿಯುತ್ತಿದೆ. ಮಂಗಳವಾರ ಬೆಳಗ್ಗೆ ಪಂಪಿಂಗ್ ನಿಲುಗಡೆ ಆಗಲಿದೆ. ಆಗ ನೀರಿನ ಮಟ್ಟ 2 ಮೀಟರ್‌ಗೆ ಇಳಿಯಬಹುದೆಂದು ನಿರೀಕ್ಷಿಸಲಾಗಿದೆ. ಮತ್ತೆ ಪ್ರಯತ್ನಪಟ್ಟರೆ ಅರ್ಧ ಮೀ. ನೀರು ಸಿಗಬಹುದು. ಅಷ್ಟರಲ್ಲಿ ದೇವರ ಕೃಪೆಯಲ್ಲಿ ಮಳೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು.
ಲಿಂಗೇ ಗೌಡ, ಮನಪಾ ಕಾ.ನಿ. ಎಂಜಿನಿಯರ್, ಮಂಗಳೂರು ರಾಜಾ ಬಂಟ್ವಾಳ