Advertisement

ಸರಕಾರ ಸ್ನಾನಘಟ್ಟ ಮಾಲಿನ್ಯ ನಿಷೇಧಿಸಲಿ: ಹೆಗ್ಗಡೆ

07:30 AM Jun 04, 2018 | |

ಬೆಳ್ತಂಗಡಿ: ಹುಡುಕಿದಷ್ಟು ಸಿಗುವ ಬಟ್ಟೆಗಳ ರಾಶಿ. ಅಲ್ಲಲ್ಲಿ ದೇವರ ಫೋಟೋಗಳು, ಭಕ್ತರು ಎಸೆದ ರಾಶಿಗಟ್ಟಲೆ ತೆಂಗಿನಕಾಯಿ, ಕನ್ನಡಿ, ಬಾಚಣಿಕೆ, ಟೂತ್‌ಬ್ರಶ್‌, ಚಪ್ಪಲಿ, ಪ್ಲಾಸ್ಟಿಕ್‌ ವಸ್ತು, ಮಕ್ಕಳ ಆಟಿಕೆಗಳು ಎಲ್ಲ ಸೇರಿ ಸಿಕ್ಕಿದ್ದು ಬರೊಬ್ಬರಿ 13ಕ್ಕೂ ಹೆಚ್ಚು ಲೋಡುಗಳಷ್ಟು ಕಸ… ಪವಿತ್ರ ನದಿ ನೇತ್ರಾವತಿ ತನ್ನ ಒಡಲಿನಲ್ಲಿ ಇಷ್ಟು ಕಶ್ಮಲಗಳನ್ನು ಅಡಗಿಸಿಟ್ಟುಕೊಂಡಿರುವುದು ತಿಳಿದದ್ದು ಯುವ ಬ್ರಿಗೇಡ್‌ ಕಾರ್ಯಕರ್ತರಿಂದ ನದಿ ಸ್ನಾನಘಟ್ಟ ಬಳಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಿಂದ. ವಿವಿಧ ರೀತಿಯ ವ್ಯವಸ್ಥೆ, ಸಮರ್ಪಕ ಮಾಹಿತಿ ಹಾಗೂ ಸೂಚನಾ ಫಲಕಗಳನ್ನು ಹಾಕಿ ಧ್ವನಿವರ್ಧಕ ಮೂಲಕವೂ ಸೂಚನೆ ನೀಡುತ್ತಿದ್ದರೂ ಭಕ್ತರ ನಡವಳಿಕೆಗೆ ಯುವ ಬ್ರಿಗೇಡ್‌ನಿಂದಲೇ ಆಶ್ಚರ್ಯ ವ್ಯಕ್ತವಾಗಿದೆ.

Advertisement

ಬೆಂಗಳೂರಿನ ಯುವ ಬ್ರಿಗೇಡ್‌ ಮಾರ್ಗದರ್ಶಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹಾಗೂ ರಾಜ್ಯ ಸಂಚಾಲಕ ಚಂದ್ರಶೇಖರ್‌ ನೇತೃತ್ವದಲ್ಲಿ ರವಿವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನದಿಯ ಸ್ವತ್ಛತಾ ಕಾರ್ಯ ನಡೆಯಿತು. ಸ್ವಚ್ಛತಾ ಕಾರ್ಯ ಸ್ಥಳಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಹಷೇìಂದ್ರ ಕುಮಾರ್‌, ಸುಪ್ರಿಯಾ ಹಷೇìಂದ್ರ ಕುಮಾರ್‌ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿ, ರಾಜ್ಯದಲ್ಲಷ್ಟೇ ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿರುವ ಪುಣ್ಯ ಕ್ಷೇತ್ರಗಳ ನದಿಗಳು ಮಲಿನಗೊಳ್ಳುತ್ತಿವೆ. ಧರ್ಮಸ್ಥಳ ದಲ್ಲಿ ಭಕ್ತರು ಬೇಡವಾದ ಬಟ್ಟೆಬರೆ, ತ್ಯಾಜ್ಯ, ಫೋಟೊ ಗಳನ್ನು ನದಿಯಲ್ಲಿ ವಿಲೇವಾರಿ ಮಾಡದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲಲ್ಲಿ ಕಸದ ಡಬ್ಬಿಗಳನ್ನು ಇರಿಸಲಾಗಿದೆಯಲ್ಲದೆ ಸೂಚನೆ ಫಲಕ ಹಾಕಿ ಮೈಕ್‌ ಮೂಲಕವೂ ಎಚ್ಚರ ಮೂಡಿಸಲಾಗುತ್ತಿದೆ. ಆದರೂ ಜನತೆ ಅರಿತುಕೊಳ್ಳುತ್ತಿಲ್ಲ. ಸ್ನಾನ ಮಾಡಿ ನದಿ ನೀರಿನಲ್ಲೇ ಬಟ್ಟೆ ಒಗೆಯುವುದರಿಂದ, ತ್ಯಾಜ್ಯ ವಿಸರ್ಜಿಸುವುದರಿಂದ ಪಾವಿತ್ರ್ಯಕ್ಕೆ ಧಕ್ಕೆ ಯಾಗುತ್ತದೆ. ಜತೆಗೆ ಅನಾರೋಗ್ಯಕರ ಪರಿಸರವೂ ನಿರ್ಮಾಣವಾಗುತ್ತದೆ. ತೀರ್ಥಕ್ಷೇತ್ರಗಳ ನದಿಗಳಲ್ಲಿ ಬಟ್ಟೆ ಒಗೆಯದಂತೆ ಸರಕಾರವೇ ಕಡ್ಡಾಯ ಹಾಗೂ ಕಟ್ಟುನಿಟ್ಟಿನ ಕಾನೂನು ಜಾರಿ ಮಾಡಬೇಕು. ಇದರಿಂದ ಸ್ವಲ್ಪ ಮಟ್ಟಿಗಾದರೂ ಮಾಲಿನ್ಯ ಕಡಿಮೆಯಾಗಬಹುದು ಎಂದರು.

ಐವರಿಗೆ ಗಾಯ
ಸ್ವತ್ಛತಾ ಕಾರ್ಯದ ವೇಳೆ ಐವರಿಗೆ ಗಾಯವುಂಟಾಯಿತು. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ. ಪರಸ್ಪರ ಜತೆಯಾಗಿ ಘೋಷಣೆಗಳನ್ನು ಕೂಗುವ ಮೂಲಕ ಕಾರ್ಯ ಕರ್ತರು ಸ್ವತ್ಛತಾ ಕಾರ್ಯದಲ್ಲಿ ಒಬ್ಬರನ್ನೊಬ್ಬರು ಹುರಿದುಂಬಿಸಿದರು. ದೇವರ ದರ್ಶನ ಮಧ್ಯಾಹ್ನ 3 ಗಂಟೆಯ ವರೆಗೂ ಸ್ವಚ್ಛತಾ ಕಾರ್ಯ ನಡೆಸಿದ ಕಾರ್ಯಕರ್ತರು ಬಳಿಕ ಸ್ನಾನ ಪೂರೈಸಿ, ದೇವರ ದರ್ಶನ ಪಡೆದರು. ಬಳಿಕ ಬೀಡಿನಲ್ಲಿ ಡಾ| ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಯುವ ಬ್ರಿಗೇಡ್‌ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಯುವ ಬ್ರಿಗೇಡ್‌ ರಾಜ್ಯ ಮಟ್ಟದ ಬೈಠಕ್‌ ನಡೆಯಿತು. ದೇವಸ್ಥಾನದ ವತಿಯಿಂದ ಕಾರ್ಯಕರ್ತರಿಗೆ ಉಚಿತ ಊಟ, ವಸತಿ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಕಣ ಕಣದಲ್ಲೂ  ಶಿವ
ಸ್ವಚ್ಛತೆ ವೇಳೆ ದೊರೆಯುವ ದೇವರ ಫೋಟೊಗಳನ್ನು ಒಂದೆಡೆ ಸಂಗ್ರಹಿಸಲಾಗುತ್ತದೆ. ಬಳಿಕ ಫೋಟೋಗಳ ಫ್ರೇಮ್‌ ಹಾಗೂ ಗಾಜು ತೆಗೆಯಲಾಗುತ್ತದೆ. ದೇವರ ಚಿತ್ರಗಳನ್ನು ಸಂಗ್ರಹಿಸಿ ಒಂದೆಡೆ ಹೂಳಲಾಗುತ್ತದೆ. ಹೂಳಿದ ಜಾಗದಲ್ಲಿ ಆರಳೀ ಗಿಡ ನೆಟ್ಟು ಬೆಳೆಸಲಾಗುತ್ತದೆ. ಈ ಪ್ರಕ್ರಿಯೆಗೆ “ಕಣ ಕಣದಲ್ಲೂ ಶಿವ’ ಎಂಬ ಹೆಸರಿಡಲಾಗಿದೆ. ಈಗಾಗಲೇ ಈ ರೀತಿ ಮೂರು ಹಂತಗಳಲ್ಲಿ ಸ್ವತ್ಛತೆ ನಡೆಸಿದ್ದು, ಧರ್ಮಸ್ಥಳದಲ್ಲಿ ನಾಲ್ಕನೇ ಹಂತದ ಸ್ವಚ್ಛತೆ ನಡೆಸಲಾಗಿದೆ.

Advertisement

ಡಾಕ್ಟರ್‌, ಎಂಜಿನಿಯರ್‌, ವಿಜ್ಞಾನಿಗಳೂ ಹಾಜರ್‌!
ರಾಜ್ಯದೆಲ್ಲೆಡೆಯಿಂದ ಆಗಮಿಸಿದ ಸುಮಾರು 500ಕ್ಕೂ ಮಿಕ್ಕಿ ಕಾರ್ಯಕರ್ತರು ಕಸ, ಕೊಳೆ ಲೆಕ್ಕಿಸದೆ ನೀರಿಗಿಳಿದು ಸ್ವತ್ಛತೆ ನಡೆಸಿ ದರು. ಕೇರಳ, ಗೋವಾದಿಂದಲೂ ಕಾರ್ಯ ಕರ್ತರು ಆಗಮಿ ಸಿದ್ದರು ಎಂಬುದು ವಿಶೇಷ. ಡಾಕ್ಟರ್‌, ಎಂಜಿನಿಯರ್‌, ವಿಜ್ಞಾನಿಗಳು, ಉದ್ಯಮಿಗಳು, ವ್ಯಾಪಾರಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ನಿವೃತ್ತರು, ಖಾಸಗಿ ಸಂಸ್ಥೆ ಉದ್ಯೋಗಿಗಳು ಭಾಗ ವಹಿ ಸಿದ್ದರು. ಸೋದರಿ ನಿವೇದಿತಾ ಪ್ರತಿಷ್ಠಾನದ 15 ಮಂದಿ ಮಹಿಳೆಯರೂ ಪಾಲ್ಗೊಂಡಿದ್ದರು.

ಆಂದೋಲನ ರಾಷ್ಟ್ರವ್ಯಾಪಿ ಆಗಲಿ
ಭಕ್ತರು ಹೊಣೆಗಾರಿಕೆಯಿಂದ ನದಿಯ ಪಾವಿತ್ರ್ಯ ಕಾಪಾಡಬೇಕು. ಯುವಕರು, ಮುಖ್ಯವಾಗಿ ಶಾಲಾ-ಕಾಲೇಜುಗಳಲ್ಲಿರುವ ಎನ್‌.ಸಿ.ಸಿ. ಹಾಗೂ ಎನ್‌.ಎಸ್‌.ಎಸ್‌. ಸ್ವಯಂ ಸೇವಕರು ನದಿ ಸ್ವತ್ಛತೆ ಮತ್ತು ಪಾವಿತ್ರ್ಯ ಕಾಪಾಡುವ ಬಗ್ಗೆ ಅರಿವು, ಜಾಗೃತಿ ಮೂಡಿಸಬೇಕು. ಇದು ರಾಷ್ಟ್ರವ್ಯಾಪಿ ಆಂದೋಲನವಾದಲ್ಲಿ ಶುಚಿತ್ವ  ಕಾಪಾಡಲು ಸಾಧ್ಯ.
– ಡಾ| ಡಿ. ವೀರೇಂದ್ರ ಹೆಗ್ಗಡೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ

ಬಿದಿರು ನಾಟಿ
ಧರ್ಮಸ್ಥಳದಲ್ಲಿ ಕಸ, ಬಟ್ಟೆ ಹಾಕಲು ವಿಶೇಷ ವ್ಯವಸ್ಥೆ ಮಾಡಿ, ಸೂಚನಾ ಫಲಕ ಹಾಕಿರುವುದರಿಂದ ಕಸ ಕಡಿಮೆ ಇರಬಹುದೆಂದು ಭಾವಿಸಿದ್ದೆವು. ಆದರೆ ನೀರಿಗೆ ಇಳಿದ ಮೇಲೆ ನಿಜ ಅರಿವಾಯಿತು. ರಾಜ್ಯದ ಮೂಲೆ ಮೂಲೆಗಳಲ್ಲಿ ಕಲ್ಯಾಣಿ, ನದಿಗಳ ಸ್ವಚ್ಛತೆ ಜತೆಗೆ  ಜಲ ಮೂಲಗಳನ್ನು ಉಳಿಸಿಕೊಳ್ಳುವ ಕಾರ್ಯ ಯುವ ಬ್ರಿಗೇಡ್‌ನಿಂದ ನಡೆಯುತ್ತದೆ. ಮುಂದೆ ಮಳೆ ಆರಂಭ  ವಾದ ಕೂಡಲೇ ನದಿಗಳ ಜಲಾನಯನ ಪ್ರದೇಶ ಗಳಲ್ಲಿ ಬಿದಿರಿನ ಗಿಡಗಳನ್ನು ನೆಡುವ ಕಾರ್ಯ ಮಾಡಲಾಗುತ್ತದೆ.
– ಚಕ್ರವರ್ತಿ ಸೂಲಿಬೆಲೆ ಯುವ ಬ್ರಿಗೇಡ್‌ ಮಾರ್ಗದರ್ಶಕ

Advertisement

Udayavani is now on Telegram. Click here to join our channel and stay updated with the latest news.

Next