Advertisement
ಕರಾವಳಿಯ ಜೀವನಾಡಿಯಂತಿರುವ ಎರಡೂ ನದಿಗಳು ಉಕ್ಕಿ ಹರಿದ ಕಾರಣ ಶುಕ್ರವಾರ ರಾತ್ರಿ ಹೊತ್ತಿಗೆ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ನೇತ್ರಾವತಿ – ಕುಮಾರಧಾರ ನದಿಗಳ ಸಂಗಮವಾಗಿದೆ.
ಕಲ್ಮಂಜದಲ್ಲಿರುವ ಪಜಿರಡ್ಕ ಸಂಗಮ ಕ್ಷೇತ್ರಕ್ಕೆ ನೀರು ನುಗ್ಗಿದೆ. ಉಪ್ಪಿನಂಗಡಿ ಸಂಗಮ ಕ್ಷೇತ್ರದಲ್ಲೂ ನೆರೆ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರುತ್ತಿದೆ. ಇನ್ನು ಕುಮಾರಾಧಾರಾ ನದಿಯ ಉಪನದಿ ಕೆಂಪುಹೊಳೆ ಉಕ್ಕಿ ಹರಿಯುತ್ತಿರುವ ಕಾರಣ ಉದನೆ, ನೇಲ್ಯಡ್ಕಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಇನ್ನು ವಳಾಲು ಎಂಬಲ್ಲಿ ನೇತ್ರಾವತಿ ನೀರು ಮಂಗಳೂರು ಬೆಂಗಳೂರು ಹೆದ್ದಾರಿಗೆ ನೆರೆ ನೀರು ನುಗ್ಗಿದೆ. ಇನ್ನು ಚಾರ್ಮಾಡಿಯಲ್ಲಿ 50ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ನೇತ್ರಾವತಿಯ ಹರಿವಿನ ರಭಸವನ್ನು ತಾಳಲಾರದೆ ದಿಡುಪೆ ಸಂಪರ್ಕ ಸೇತುವೆ ಕೊಚ್ಚಿ ಹೋಗಿದೆ. ಮನೆಗಳು ಮತ್ತು ಅಡಿಕೆ ಮರಗಳು ಕಣ್ಣೆದುರೇ ಧರೆಗುರುಳುತ್ತಿವೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗೂ ಅವಕಾಶ ನೀಡದೆ ಹರಿಯುತ್ತಿದೆ ನೆರೆ ನೀರು.
ತಗ್ಗು ಪ್ರದೇಶದಲ್ಲಿರುವವರು ತಕ್ಷಣವೇ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ನೇತ್ರಾವತಿ ನದೀಪಾತ್ರದಲ್ಲಿ ಮೈಕ್ ಮೂಲಕವೂ ಸ್ಥಳೀಯರಿಗೆ ನೆರೆ ಪರಿಸ್ಥಿತಿಯ ಕುರಿತು ಹಾಗೂ ಮುಂಜಾಗರುಕತಾ ಸೂಚನೆಗಳನ್ನು ನೀಡಲಾಗುತ್ತಿದೆ.
Related Articles
Advertisement
ಅಜಿಲಮೊಗರುವಿನಲ್ಲಿ ನೇತ್ರಾವತಿ ನದಿಯಿಂದ ಉಂಟಾಗಿರುವ ನೆರೆ ಪರಿಸ್ಥಿತಿಯನ್ನು ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರು ಭೇಟಿ ನೀಡಿ ಅಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಕರೆದೊಯ್ಯಲು ಅಧಿಕಾರಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ. ಇನ್ನು ಮಾಜೀ ಶಾಸಕ ರಮಾನಾಥ್ ರೈ ಅವರೂ ಸಹ ಬಂಟ್ವಾಳದ ಬಡ್ಡಕಟ್ಟೆ, ಜಕ್ರಿಬೆಟ್ಟು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಯನ್ನು ಮಾಡಿಕೊಂಡಿದೆ.
ಒಟ್ಟಿನಲ್ಲಿ ಕಳೆದ ಬೇಸಗೆಯಲ್ಲಿ ಸಂಪೂರ್ಣ ಸೊರಗಿ ಹೋಗಿದ್ದ ಜೀವನದಿ ನೇತ್ರಾವತಿ ಬಳಿಕ ಮಳೆಗಾಲ ಪ್ರಾರಂಭವಾದರೂ ಜುಲೈವರೆಗೆ ಮೈದುಂಬಿರಲಿಲ್ಲ. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಆರ್ಭಟ ಜೋರಾಗಿರುವುದರಿಂದ ನೇತ್ರಾವತಿ ಮೈದುಂಬಿಕೊಂಡಿರುವುದು ಮಾತ್ರವಲ್ಲದೇ ತನ್ನ ಇಕ್ಕೆಲಗಳಲ್ಲಿ ನೆರೆ ಪರಿಸ್ಥಿತಿಯನ್ನೂ ತಂದೊಡ್ಡಿದ್ದಾಳೆ.ಸಚಿತ್ರ ಮಾಹಿತಿ: ಕಿರಣ್ ಸರಪಾಡಿ, ಚೈತ್ರೇಶ್