ಬೆಳಗಾವಿ: ದೇಶವನ್ನು ಬ್ರಿಟಿಷರಿಂದ ಮುಕ್ತಗೊಳಿಸಲು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸಾ ಮಾರ್ಗದ ಹೋರಾಟ ನಡೆದರೆ, ನೇತಾಜಿ ಸುಭಾಷ ಚಂದ್ರ ಬೋಸ್ ಅವರು ಕ್ರಾಂತಿಕಾರಕ ಮಾರ್ಗ ಅನುಸರಿಸಿದರು.
ಅವರು ಜನರನ್ನು ಸಂಘಟಿಸಿ ಸೈನ್ಯ ಕಟ್ಟಿ ಅದಕ್ಕೆ “ಅಜಾದ್ -ಹಿಂದ್-ಫೌಜ್’ ಎಂದು ಹೆಸರಿಟ್ಟರು. ಅದೇ ಇಂದಿನ ಭಾರತೀಯ ರಾಷ್ಟ್ರೀಯ ಸೇನೆಯಾಗಿ ರೂಪಗೊಂಡಿತು ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರಹುಸೇನ್ ಪಠಾಣ ಹೇಳಿದರು.
ನಗರದ ಹೊರವಲಯದ ಕಣಬರಗಿಯ ಸಮತಾ ಶಾಲೆಯಲ್ಲಿ ರವಿವಾರ ನಡೆದ ನೇತಾಜಿ, ಸುಭಾಷಚಂದ್ರ ಬೋಸ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೇತಾಜಿಯವರ 125ನೇ ಜನ್ಮದಿನದ ನಿಮಿತ್ತ ಕೇಂದ್ರ ಸರ್ಕಾರ ದೆಹಲಿಯ ಇಂಡಿಯಾ ಗೇಟ್ ಬಳಿ ನೇತಾಜಿಯವರ ಪುತ್ಥಳಿ ಸ್ಥಾಪಿಸುವ ನಿರ್ಧಾರ ಕೈಗೊಂಡಿದ್ದು ಸ್ವಾಗತಾರ್ಹ ಎಂದರು.
ಸಮಾಜ ಸೇವಕ ಸುರೇಶ ಯಾದವ ಮಾತನಾಡಿ, ದೇಶದ ಯುವಕರಿಗೆ ಸ್ಫೂರ್ತಿಯ ಸೆಲೆಯಾದ ನೇತಾಜಿ ಸುಭಾಷಚಂದ್ರ ಬೋಸ್ ಅವರು ಯುವಶಕ್ತಿಯನ್ನು ಸಂಘಟಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸುವಲ್ಲಿ ಯಶಸ್ವಿಯಾದರು. ಅಂತಹ ಮಹನೀಯರ ಜೀವನ ನಮಗೆ ಆದರ್ಶವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶಂಕರ ಬಾಗೇವಾಡಿ, ವೀರ ಸೇನಾನಿ ನೇತಾಜಿ ಬೋಸರು ಪುರುಷರೊಂದಿಗೆ ಸ್ತ್ರೀಯರನ್ನೂ ಸೈನ್ಯಕ್ಕೆ ಸೇರಿಸಿಕೊಂಡು ಅವರಿಗೆ ಯುದ್ಧಕಲೆ ಕಲಿಸಿದ ಸಮಾನತೆಯ ಹರಿಕಾರರು. ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಸಂಭ್ರಮ ನೋಡಲು ಅವರಿರಲಿಲ್ಲ ಎನ್ನುವ ನೋವು ನಮ್ಮಂತವರನ್ನು ನಿರಂತರ ಕಾಡುತ್ತಲೇ ಇರುತ್ತದೆ ಎಂದರು.
ಬೆಳಗಾವಿಯ ಸಂಕಲ್ಪ ಫೌಂಡೇಶನ್ ಸಂಸ್ಥಾಪಕ ನಾನಾಗೌಡ ಬಿರಾದಾರ, ಶಿಕ್ಷಕಿ ಜಯಶ್ರೀ ನಾಯಕ, ಪ್ರಾಂಶುಪಾಲೆ ತೇಜಸ್ವಿನಿ ಬಾಗೇವಾಡಿ, ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ವಿಜಯಲಕ್ಷಿ ವಿ. ಮಲಿಕಜಾನ ಗದಗಿನ, ಶಾಂತಾ ಮೋದಿ, ಅರುಣಾ ಪಾಟೀಲ, ಪೂಜಾ ಪಾಟೀಲ, ತೇಜಸ್ವಿನಿ ನಾಯ್ಕರ್ ಉಪಸ್ಥಿತರಿದ್ದರು. ಲಕ್ಷಿ ಬುಡ್ರಾಗೋಳ ಸ್ವಾಗತಿಸಿದರು. ವೃಷಭ ಮುಚಂಡಿಕರ ನಿರೂಪಿಸಿದರು. ಚೇತನ ಗುತ್ತಿ ವಂದಿಸಿದರು.