Advertisement

ರಾಜಕೀಯ ಲಾಭಕ್ಕಾಗಿ ನೇತಾಜಿ ಹೆಸರು ಬಳಕೆ: ಆಲ್ದಳ್ಳಿ

05:29 PM Jan 24, 2022 | Team Udayavani |

ಧಾರವಾಡ: ಇಂದಿನ ರಾಜಕೀಯ ಲಾಭಕ್ಕಾಗಿ ರಾಜಕೀಯ ಪಕ್ಷಗಳು ನೇತಾಜಿ ಹೆಸರನ್ನು ಬಳಸಿಕೊಳ್ಳುತ್ತಿದ್ದು, ಈ ವಾಸ್ತವವನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಎಸ್‌ಯುಸಿಐ-ಕಮ್ಯುನಿಸ್ಟ್‌ ಪಕ್ಷದ ರಾಜ್ಯ ಸೆಕ್ರೆಟರಿಯೇಟ್‌ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಹೇಳಿದರು.

Advertisement

ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರ 125ನೇ ಜನ್ಮದಿನದ ಅಂಗವಾಗಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ (ಎಐಡಿವೈಒ) ಕರ್ನಾಟಕ ರಾಜ್ಯ ಸಮಿತಿಯಿಂದ ಆನ್‌ ಲೈನ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೇತಾಜಿ ಅವರ ಕನಸಾದ ಸಮಾಜವಾದಿ ಭಾರತವನ್ನು ಕಟ್ಟುವ ದಿಕ್ಕಿನಲ್ಲಿ ಇಂದಿನ ಯುವ ಜನರು ಅವರ ಉತ್ತರಾಧಿಕಾರಿಗಳಾಗಿ ಶ್ರಮಿಸಬೇಕಿದೆ. ಸರಿಯಾದ ವಿಚಾರವನ್ನು ಆಯ್ಕೆ ಮಾಡಿಕೊಳ್ಳುವ ಜವಾಬ್ದಾರಿ ಯುವ ಜನರ ಮೇಲಿದೆ. ಗೊಂದಲಗಳಿಗೆ ಬಲಿಯಾಗದೇ ಇತಿಹಾಸವನ್ನು ವೈಜ್ಞಾನಿಕವಾಗಿ, ವಸ್ತುನಿಷ್ಠವಾಗಿ ಅರ್ಥ ಮಾಡಿಕೊಂಡು ಸತ್ಯಕ್ಕೆ ನಿಷ್ಠರಾಗಬೇಕು. ನೇತಾಜಿ ಅವರ ವ್ಯಕ್ತಿತ್ವ, ಆದರ್ಶ, ಹೋರಾಟಗಳನ್ನು ಅಳವಡಿಸಿಕೊಂಡು ಇಂದಿನ ಅನ್ಯಾಯಗಳ ವಿರುದ್ಧ ಸಮರಶೀಲ ಹೋರಾಟವನ್ನು ಕಟ್ಟುವ ಮೂಲಕ ನೇತಾಜಿಯವರ 125ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಎಐಡಿವೈಒ ರಾಜ್ಯಾಧ್ಯಕ್ಷ ಶರಣಪ್ಪ ಉದ್ಭಾಳ ಮಾತನಾಡಿ, ನೇತಾಜಿಯವರ ಜೀವನ, ಹೋರಾಟದಿಂದ ಸ್ಫೂರ್ತಿ ಪಡೆದು ನಾವು ಇಂದು ಎದುರಿಸುತ್ತಿರುವ ಹಲವಾರು ಸಮಸ್ಯೆಗಳ ವಿರುದ್ಧ ರಾಜಿರಹಿತವಾಗಿ ಧ್ವನಿಯೆತ್ತಬೇಕು. ಅವಕಾಶವಾದಿತನಕ್ಕೆ ಎಡೆಮಾಡಿ ಕೊಡದೇ ಜಾತಿ, ಧರ್ಮದ ಹೆಸರಿನಲ್ಲಿ ಇಂದು ನಮ್ಮನ್ನು ಒಡೆದಾಳುತ್ತಿರುವ ಆಳ್ವಿಕರ ವಿರುದ್ಧ ಒಗ್ಗಟ್ಟಾಗಿ ಯುವ ಜನ ಸಮಸ್ಯೆಗಳ ವಿರುದ್ಧ ಚಳವಳಿಯನ್ನು ಬಲಪಡಿಸೋಣ, ನೇತಾಜಿಯವರ ವಿಚಾರಗಳನ್ನು ಎಲ್ಲೆಡೆ ಹರಡೋಣ ಎಂದು ಹೇಳಿದರು.

ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ ಮಾತನಾಡಿ, ಎಐಡಿವೈಒ ಹಲವಾರು ವರ್ಷಗಳಿಂದ ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮದ ರಾಜಿ ರಹಿತ ಪಂತದ ಮಹಾನ್‌ ಕ್ರಾಂತಿಕಾರಿಗಳ ನೈಜ ಉತ್ತರಾಧಿಕಾರಿಗಳಾಗಿ ಅವರ ದಿನಾಚರಣೆಗಳನ್ನು ಆಚರಿಸುತ್ತ ಅವರ ಹೋರಾಟದ ಬದುಕನ್ನು, ವೈಚಾರಿಕತೆಯನ್ನು ಯುವಜನರಿಗೆ ಪರಿಚಯಿಸುತ್ತ ಬಂದಿದೆ. ಅದರ ಮೂಲಕ ಸ್ಫೂರ್ತಿ ಪಡೆದು ಇಂದಿನ ಅನ್ಯಾಯಗಳ ವಿರುದ್ಧ ಧ್ವನಿ ಎತ್ತೋಣ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next