Advertisement

Nervous Disease: ಕರಾವಳಿಯಲ್ಲೂ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಕಾರ್ಯಾರಂಭ

01:59 AM Sep 22, 2024 | Team Udayavani |

ಮಂಗಳೂರು: ನರಗಳ ಸಂಬಂಧಿತ ರೋಗಗಳಿಗೆ ಚಿಕಿತ್ಸೆ ಮತ್ತು ಆರೈಕೆ ಸೇವೆಯನ್ನು ಉತ್ತೇಜಿಸಲು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆ ಮತ್ತು ಉಡುಪಿಯ ಅಜ್ಜರಕಾಡಿನಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಆರಂಭಿಸಲಾಗಿದೆ.

Advertisement

ರಾಜ್ಯ ಸರಕಾರದಿಂದ ನಿಮ್ಹಾನ್ಸ್‌ ಸಹಕಾರದೊಂ ದಿಗೆ ಕೋಲಾರ, ಚಿಕ್ಕ ಬಳ್ಳಾಪುರ, ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಆರಂಭಗೊಂಡಿತ್ತು.ಈಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರಂಭಗೊಂಡಿರುವ ಕ್ಲಿನಿಕ್‌ಗಳಲ್ಲಿ ಸದ್ಯ ತಲಾ ಒಂದು ಸಾವಿರಕ್ಕೂ ಅಧಿಕ ಮಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೆನ್ಲಾಕ್‌ ಆಸ್ಪತ್ರೆಗೆ ಅಥವಾ ಉಡುಪಿಗೆ ಹತ್ತಿರದ ಸುಮಾರು ಎಂಟು ಜಿಲ್ಲೆಗಳಿಂದ ರೋಗಿಗಳು ಬರುತ್ತಾರೆ. ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕಾರವಾರ, ಕಾಸರಗೋಡು, ಕೊಡಗು, ಹಾಸನ, ಶಿವಮೊಗ್ಗ ಜಿಲ್ಲೆಯ ರೋಗಿಗಳಿಗೆ ಬ್ರೈನ್‌ ಕ್ಲಿನಿಕ್‌ ಆಸರೆಯಾಗಿದೆ.

ಯಾವೆಲ್ಲ ವೈದ್ಯರು ಲಭ್ಯ?
ಬ್ರೈನ್‌ ಹೆಲ್ತ್‌ ಕ್ಲಿನಿಕ್‌ನಲ್ಲಿ ಆರು ಮಂದಿಯ ತಂಡ ಕೆಲಸ ನಿರ್ವಹಿಸುತ್ತದೆ. ವೆನ್ಲಾಕ್‌ ಆಸ್ಪತ್ರೆಯಲ್ಲಿ ನರರೋಗ ವಿಭಾಗ ಮತ್ತು ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ವಿಲೀನಗೊಂಡಿದೆ. ಈ ತಂಡದಲ್ಲಿ ನರರೋಗ ತಜ್ಞರು, ವೈದ್ಯಾಧಿಕಾರಿಗಳು, ಜಿಲ್ಲಾ ಸಂಯೋಜಕರು, ಸ್ಟಾಫ್‌ ನರ್ಸ್‌, ಸ್ಪೀಚ್‌ ಆ್ಯಂಡ್‌ ಲ್ಯಾಂಗ್ವೇಜ್‌ ಪೆಥಾ ಲಜಿಸ್ಟ್‌, ಫಿಸಿಯೋಥೆರಪಿಸ್ಟ್‌ ಮತ್ತು ಕ್ಲಿನಿಕಲ್‌ ಸೈಕಾಲಜಿಸ್ಟ್‌ ಇರಲಿದ್ದಾರೆ. ಸದ್ಯ ಫಿಸಿಯೋಥೆರಪಿಸ್ಟ್‌ ಹುದ್ದೆ ಖಾಲಿ ಇದ್ದು, ಎರಡು ತಿಂಗಳೊಳಗೆ ನೇಮಕಾತಿ ಆಗಲಿದೆ. ಉಡುಪಿಯಲ್ಲಿ ಗುರುವಾರ ಕೆಎಂಸಿಯ ನರರೋಗ ತಜ್ಞರು ತಪಾಸಣೆ ನಡೆಸುತ್ತಾರೆ ಎನ್ನುತ್ತಾರೆ ಸಂಯೋಜಕರು.

ಯಾವ್ಯಾವ ರೋಗಗಳಿಗೆ ಚಿಕಿತ್ಸೆ?
ಬ್ರೈನ್‌ ಹೆಲ್ತ್‌ ಕ್ಲಿನಿಕ್‌ನಲ್ಲಿ ತಲೆನೋವು, ಪಾರ್ಶ್ವವಾಯು, ಮೂರ್ಛೇರೋಗ, ಮರೆವು ರೋಗ ಸಹಿತ ಇತರ ನರ ಸಂಬಂಧಿ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಹೊರ ರೋಗಿ ಚಿಕಿತ್ಸೆ ಮಾದರಿಯಲ್ಲಿ ಈ ಕ್ಲಿನಿಕ್‌ ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆ ಬೇಕು ಎಂದಾದರೆ ಜಿಲ್ಲಾಸ್ಪತ್ರೆಗೆ ಕಳಿಸಲಾಗುತ್ತದೆ.
ಒಂದು ವೇಳೆ ಅಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ನಿಮ್ಹಾನ್ಸ್‌ ಆಸ್ಪತ್ರೆಗೆ ಸೂಚಿಸಲಾಗುತ್ತದೆ. ಪ್ರಸ್ತುತ ಈ ಜಿಲ್ಲಾಸ್ಪತ್ರೆಯಿಂದಲೇ ಔಷಧವನ್ನು ಪೂರೈಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ನಿಮ್ಹಾನ್ಸ್‌ನಿಂದ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ.

ಏನಿದು ಬ್ರೈನ್‌ ಹೆಲ್ತ್‌ ಕ್ಲಿನಿಕ್‌?
ನರರೋಗಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆರಂಭಗೊಂಡ ಹೊಸ ಯೋಜನೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4.30 ರವರೆಗೆ, ಸರಕಾರಿ ರಜಾ ದಿನಗಳಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರ್ಯಾಚರಿಸುತ್ತದೆ. ರವಿವಾರ ರಜಾದಿನ. ಇಲ್ಲಿ ವೈದ್ಯರ ಭೇಟಿ, ಸಮಾ
ಲೋಚನೆ, ಔಷಧ, ಎಂಆರ್‌ಐ ಸಹಿತ ಎಲ್ಲ ಸೌಲಭ್ಯಗಳು ಸಂಪೂರ್ಣ ಉಚಿತ.

Advertisement

“ಮೆದುಳು, ನರ ರೋಗಕ್ಕೆ ಸಂಬಂಧಿತ ರೋಗಕ್ಕೆ ಚಿಕಿತ್ಸೆ ನೀಡುವ ಉದ್ದೇಶಕ್ಕೆ ಬ್ರೈನ್‌ ಹೆಲ್ತ್‌ ಕ್ಲಿನಿಕ್‌ ಆರಂಭಗೊಂಡಿದೆ. ಕರ್ನಾಟಕ ರಾಜ್ಯ ಸರಕಾರ ಮತ್ತು ನಿಮ್ಹಾನ್ಸ್‌ ಸಂಯೋಜನೆಯಲ್ಲಿ ಇದು ಕಾರ್ಯ ನಿರ್ವಹಿಸುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.”
– ಡಾ| ಸುದರ್ಶನ್‌, ಡಾ| ಲತಾ- ಕರ್ನಾಟಕ ಮಿದುಳು ಆರೋಗ್ಯ ಉಪಕ್ರಮ ನೋಡೆಲ್‌ ಅಧಿಕಾರಿ ದ.ಕ., ಉಡುಪಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next