ನವಿಮುಂಬಯಿ: ನವೀ ಮುಂಬಯಿಯ ನೆರೂಲ್‌ನ ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ಆ.27ರಂದು 24 ಗಂಟೆಗಳ ಅಖಂಡ ಭಜನ ಕಾರ್ಯಕ್ರಮ ಜರಗಿತು. ಮಂದಿರದ ಅಧ್ಯಕ್ಷ ರಮೇಶ್ ಎಂ. ಪೂಜಾರಿ ಅವರು ಶ್ರೀ ದೇವರ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲಿಸಿ ಶ್ರೀ ದೇವರ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅನಂತರ ಮಾತನಾಡಿದ ಅವರು, ಭಜನೆ ಎಂಬುದು ದೇವರಿಗೆ ಮಾಡುವ ಅತ್ಯಂತ ಪ್ರೀತಿಯ ಸೇವೆ. ಭಜನೆಯಿಂದ ದೇವರು ಸಂತುಷ್ಟನಾಗುತ್ತಾನೆ. ಭಜನೆ ಮಾಡುವುದರಿಂದ ಧಾರ್ಮಿಕತೆ ಹೆಚ್ಚುತ್ತದೆ. ಶ್ರೀಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಪ್ರತಿ ವರ್ಷ 24 ಗಂಟೆಗಳ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬರುತ್ತಿದ್ದು, ಇದಕ್ಕೆ ವಿವಿಧ ಭಜನಾ ಸಂಘಗಳು ಪಾಲ್ಗೊಳ್ಳುವುದು ನೋಡಿದರೆ ಜನರಿಗೆ ಭಜನೆಯ ಮೇಲೆ ಆಸಕ್ತಿಯು ತುಂಬಾ ಇದೆ ಎಂಬುದನ್ನು ತೋರಿಸುತ್ತದೆ ಎಂದರು.
24 ಗಂಟೆಗಳ ಕಾಲ ನಿರಂತರ ಜರಗಲಿರುವ ಈ ಭಜನಾ ಕಾರ್ಯಕ್ರಮವು ಸೋಮವಾರ ಬೆಳಗ್ಗೆ ಮಹಾ ಮಂಗಳಾರತಿಯೊಂದಿಗೆ ಸಮಾಪ್ತಿ ಹೊಂದಲಿದೆ. ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಭಜನ ಮಂಡಳಿಗಳು ಕಾರ್ಯಕ್ರಮದಲ್ಲಿ ಭಾಗಹಿಸಿವೆ. ಉದ್ಘಾಟನಾ ಸಂದರ್ಭದಲ್ಲಿ ಶನೀಶ್ವರ ಮಂದಿರದ ಉಪಾಧ್ಯಕ್ಷ ಗೋಪಾಲ್ ವೈ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ವಿಶ್ವನಾಥ್ ಕೆ. ಪೂಜಾರಿ, ಜೊತೆ ಕೋಶಾಧಿಕಾರಿ ಕರುಣಾಕರ್ ಎಸ್. ಆಳ್ವ, ಪೂಜಾ ಕಮಿಟಿಯ ಅಧ್ಯಕ್ಷ ಶೇಖರ ಪಾಲನ್,ಉಪಾಧ್ಯಕ್ಷ ಕೃಷ್ಣ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವೀಣಾ ವಿ. ಪೂಜಾರಿ ಹಾಗೂ ಸಮಿತಿಯ ಎನ್. ಕೆ. ಪೂಜಾರಿ, ಬಾಲಕೃಷ್ಣ ಶೆಟ್ಟಿ, ಆದ್ಯಪಾಡಿ ಕೃಷ್ಣ ಮೂಲ್ಯ, ಚಂದ್ರಶೇಖರ್ ದೇವಾಡಿಗ, ದಯಾನಂದ ಶೆಟ್ಟಿಗಾರ್, ದೇವೇಂದ್ರ ಕದಂ, ಸುರೇಶ್ ದೇವಾಡಿಗ, ಸುರೇಶ್ ಶೆಟ್ಟಿ, ಪಿ.ಡಿ. ಕೋಟ್ಯಾನ್, ಯೋಗೇಶ್ ಬಂಗೇರ, ಪೂಜಾ ಕಮಿಟಿಯ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಸೂರಜ್ ಭಟ್ ಅವರು ಆರಂಭದಲ್ಲಿ ದೇವರಿಗೆ ವಿಶೇಷ ಪ್ರಾರ್ಥನೆ ಮಾಡಿ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚಿತ್ರ-ವರದಿ: ಸುಭಾಷ್ ಶಿರಿಯಾ