Advertisement

ನೆರೂಲ್‌ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರ: ಧಾರ್ಮಿಕ ಸಭೆ

04:50 PM Dec 21, 2017 | Team Udayavani |

ನವಿ ಮುಂಬಯಿ: ಅನೇಕ ವರ್ಷಗಳಿಂದ ಶ್ರೀ ಅಯ್ಯಪ್ಪ ಭಕ್ತಾದಿಗಳ ಕನಸಾಗಿದ್ದ ಭವ್ಯ ಮಂದಿರ ನಿರ್ಮಾಣಗೊಂಡು ಇದೀಗ ವರ್ಷ ಒಂದು ಸಂದಿದೆ. ಕಳೆದ 28 ವರ್ಷಗಳಿಂದ ಧರ್ಮಶಾಸ್ತ ಭಕ್ತವೃಂದದ ಶ್ರೀ ಅಯ್ಯಪ್ಪ ವ್ರತಧಾರಿಗಳು ಬಹಳಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಅವರ ಕನಸಿನಂತೆ ದಾನಿಗಳ ಸಹಕಾರದಿಂದ ನೆರೂಲ್‌ನಲ್ಲಿ ಆಕರ್ಷಕ ದೇವಸ್ಥಾನ ಲೋಕಾರ್ಪಣೆಗೊಂಡಿರುವುದು ನಮಗೆ ಸಂತೋಷದ ಸಂಗತಿಯಾಗಿದೆ ಎಂದು ನೆರೂಲ್‌ ಮಣಿಕಂಠ ಸೇವಾ ಸಂಘದ ಅಧ್ಯಕ್ಷ ಉದ್ಯಮಿ ಸಂಜೀವ ಎನ್‌. ಶೆಟ್ಟಿ ನುಡಿದರು.

Advertisement

ಡಿ. 17ರಂದು ನೆರೂಲ್‌ನ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಪ್ರಥಮ ವಾರ್ಷಿಕೋತ್ಸವ ಹಾಗೂ ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್‌ ಟ್ರಸ್ಟ್‌ ಇದರ 28 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಂಡಲಪೂಜೆಯ ನಿಮಿತ್ತ ನಡೆದ ಧಾರ್ಮಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ದೇವಸ್ಥಾನದ ನಿರ್ಮಾಣದಲ್ಲಿ ಹಗಲಿರುಳು ಶ್ರಮಿಸಿದ ಅನೇಕ ಮಹಾನೀಯರನ್ನು ಈ ಸಂದರ್ಭದಲ್ಲಿ ನೆನಪಿಸುತ್ತಿದ್ದೇನೆ. ದಿ| ಭುಜಂಗ ಭಂಡಾರಿ ಅವರು ಸ್ಥಾಪಿಸಿದ ಈ ಧರ್ಮಶಾಸ್ತ ಭಕ್ತವೃಂದವು ಬೆಳೆದು ಪ್ರಸ್ತುತ ದೇವಸ್ಥಾನ ನಿರ್ಮಾಣಗೊಳ್ಳುವಲ್ಲಿ ಯಶಸ್ವಿಯಾಗಿದೆ. ಉದ್ಯಮಿ ಕೆ. ಡಿ. ಶೆಟ್ಟಿ ಅವರು ಈ ದೇವಸ್ಥಾನ ಹಾಗೂ ಭವನ ನಿರ್ಮಾಣ ಕೈಂಕರ್ಯದಲ್ಲಿ ಹಗಲಿರುಳು ಶ್ರಮಿಸಿದ್ದಾರೆ. ಅವರ  ಆರ್ಥಿಕ ಸಹಾಯ ಮತ್ತು ಪರಿಶ್ರಮದಿಂದ ಮಂದಿರವು ನಿರ್ಮಾಣಗೊಂಡಿರುವುದು ಹೆಮ್ಮೆಯಾಗುತ್ತಿದೆ. ಭಕ್ತಾನಿಮಾನಿಗಳ ಪ್ರೋತ್ಸಾಹದಿಂದ ಮಂದಿರವು  ಇನ್ನಷ್ಟು ಬೆಳಗಬೇಕು.  ಈ ಪುಣ್ಯಕ್ಷೇತ್ರವು ಕಾರಣಿಕ ಕ್ಷೇತ್ರವಾಗಿ ಕಂಗೊಳಿಸಲು ಎಲ್ಲರ ಸಹಕಾರವಿರಲಿ ಎಂದು ನುಡಿದರು.

ಆಶೀರ್ವಚನ ನೀಡಿದ ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು ಮಾತನಾಡಿ, ಧರ್ಮಾಚರಣೆಯು ಜೀವನದಲ್ಲಿದ್ದರೆ ಮನುಷ್ಯನಿಗೆ ಅಪಾಯವಾಗುವುದಿಲ್ಲ. ನಮ್ಮ ಹಿರಿಯರ ತ್ಯಾಗಮಯ  ಜೀವನದಿಂದಾಗಿ ಸಮಾಜಕ್ಕೆ ಅನೇಕ ತ್ಯಾಗಗಳು ಲಭಿಸಿವೆ. ನಮ್ಮ ಮಕ್ಕಳಲ್ಲಿ ಧಾರ್ಮಿಕ ಆಚರಣೆ, ಸಂಸ್ಕಾರಗಳು ದೂರವಾಗುತ್ತಿದ್ದು, ಈ ಬಗ್ಗೆ ಹೆತ್ತವರು ಮಕ್ಕಳಲ್ಲಿ ಧಾರ್ಮಿಕಪ್ರಜ್ಞೆಯನ್ನು ಮೂಡಿಸುವ ಕಾರ್ಯವನ್ನು ಮಾಡಬೇಕು. ಅಯ್ಯಪ್ಪ ವ್ರತಾಚರಣೆಯು ಬಹಳ ಕಷ್ಟವಾಗಿದ್ದು, ಆದರೂ ವ್ರತಧಾರಿಗಳು ಶ್ರದ್ಧಾಭಕ್ತಿಯಿಂದ ವ್ರತಗೈದು ಪಾವನರಾಗುತ್ತಾರೆ. ಇವರಿಗೆ ದೇವರ ಆಶೀರ್ವಾದ ಸದಾ ಲಭಿಸುತ್ತದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ನವಿಮುಂಬಯಿ ಮೇಯರ್‌ ಜಯಂತ್‌ ಡಿ. ಸುತಾರ್‌ ಅವರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ನೆರೂಲ್‌ ಎಂಬುವುದು ಒಂದು ಧಾರ್ಮಿಕ ಸ್ಥಳವಾಗಿದೆ. ಇಲ್ಲಿ ಅನೇಕ ಮಂದಿರಗಳು ಜಾತಿ, ಮತ, ಬೇಧವನ್ನು ಮರೆತು ನಾವೆಲ್ಲರು ಒಂದೇ ಎಂಬ ಭಾವನೆಯಲ್ಲಿ ಬೆಳೆದು ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುತ್ತಿದೆ. ಈ ಕ್ಷೇತ್ರ ನಿರ್ಮಾಣವಾಗಿ ಒಂದು ವರ್ಷ ಸಂದರೂ ಇದರ ಅಭಿವೃದ್ದಿ ಉತ್ತಮ ರೀತಿಯಲ್ಲಿ ಆಗುತ್ತಿದ್ದು, ಪ್ರಾರಂಭದಲ್ಲಿ ಸ್ವಲ್ಪ ಸಮಸ್ಯೆಗಳು ಎಂದುರಾದರೂ ಇದೀಗ ದೇವರ ದಯೆಯಿಂದ ಎಲ್ಲ ಬಗೆಹರಿದಿದೆ. ಇಲ್ಲಿ ಇನ್ನಷ್ಟು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಲಿ ಎಂದು ನುಡಿದು ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಮೇಯರ್‌ ಜಯಂತ್‌ ಡಿ. ಸುತಾರ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಚಿಣ್ಣರ ಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ದೇವಸ್ಥಾನಗಳು ಜನರನ್ನು ಒಂದುಗೂಡಿಸುವ ಕಾರ್ಯವನ್ನು ಮಾಡುತ್ತವೆ. ದೇವಸ್ಥಾನ ಹಾಗೂ ಸಂಘ-ಸಂಸ್ಥೆಗಳನ್ನು ಕಟ್ಟುವುದು ಸುಲಭ. ಅದನ್ನು ಮುಂದುವರಿಸಿಕೊಂಡು ]ಹೋಗುವುದು ಕಷ್ಟಕರವಾಗಿದೆ. ನಾವೆಲ್ಲರೂ ಒಗ್ಗಟ್ಟಾದರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದರು.

Advertisement

ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ  ಕಿಶೋರ್‌ ಎಂ. ಶೆಟ್ಟಿ ಅವರು ಮಾತನಾಡಿ, ಹಿಂದು ಧರ್ಮದ ರಕ್ಷಣೆ ಮಾಡುವ ಸಮಯ ಇದೀಗ ಬಂದೊಂದಗಿದೆ. ಹಿಂದುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ನಾವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯುವ ಜನತೆ ಜಾಗೃತಗೊಂಡು ಧರ್ಮರಕ್ಷಣೆಯಲ್ಲಿ ತೊಡಗಬೇಕು ಎಂದರು.

ನವಿಮುಂಬಯಿ ಉಪ ಮೇಯರ್‌ ಮಂದಾಕಿನಿ ಆರ್‌. ಮ್ಹಾತ್ರೆ, ನಗರ ಸೇವಕಿ ಶಿಲ್ಪಾ ಕಾಂಬ್ಳೆ, ಮೀರಾ ಪಾಟೀಲ್‌ ಅವರು ಉಪಸ್ಥಿತರಿದ್ದು ಮಾತನಾಡಿ ಶುಭಹಾರೈಸಿದರು. ಸಮಾರಂಭದಲ್ಲಿ ಹದಿನೆಂಟನೇ ವರ್ಷದ ಶಬರಿಮಲೆಯಾತ್ರೆಗೈಯುತ್ತಿರುವ ರಾಜು ಶಿವರಾಮ್‌ ಕೋಟೆಕಾರ್‌ ಅವರನ್ನು ಗೌರವಿಸಲಾಯಿತು. ಪ್ರಾರಂಭದಲ್ಲಿ ಹೇಮಾ ಸುರೇಂದ್ರ ಶೆಟ್ಟಿ ಪ್ರಾರ್ಥನೆಗೈದರು. ಗಣ್ಯರು ದೀಪಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು.

ಮಣಿಕಂಠ ಸೇವಾ ಸಂಘಂ ಇದರ ಉಪಾಧ್ಯಕ್ಷ ಸುರೇಶ್‌ ಜಿ. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಪ್ರಧಾನ ಅರ್ಚಕ ಶ್ರೀಕೃಷ್ಣ ಭಟ್‌, ನಗರ ಸೇವಕ ರವೀಂದ್ರ ಹಿತಾಪೆ, ಗುರುಸ್ವಾಮಿ ಹರೀಶ್‌ ಎನ್‌. ಶೆಟ್ಟಿ, ಶ್ರೀ ಮಣಿಕಂಠ ಸೇವಾ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಾಜೇಶ್ವರಿ ಎಸ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಉಪಾಧ್ಯಕ್ಷ ದಯಾಸಾಗರ್‌ ಚೌಟ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಣಿಕಂಠ ಸೇವಾ ಸಂಘದ ಕೋಶಾಧಿಕಾರಿ ಭಾಸ್ಕರ ವೈ. ಶೆಟ್ಟಿ ಖಾಂದೇಶ್‌ ವಂದಿಸಿದರು. ಕಾರ್ಯದರ್ಶಿ ಮೋಹನ್‌ದಾಸ್‌ ರೈ ಸಹಕರಿಸಿದರು.

ಈ ಕ್ಷೇತ್ರವನ್ನು ಕಣ್ತುಂಬಿಕೊಂಡಾಗ ಊರಿನ ದೇವಸ್ಥಾನಕ್ಕೆ ಬಂದ ಅನುಭವ ಆಗುತ್ತದೆ. ದೇವಸ್ಥಾನದ ಮೂಲಕ ನಮ್ಮ ಧರ್ಮ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ, ಬೆಳೆಸುವ ಕಾರ್ಯವಾಗಬೇಕು 
 – ಚಂದ್ರಹಾಸ ಕೆ. ಶೆಟ್ಟಿ (ಉಪಾಧ್ಯಕ್ಷರು : ಬಂಟರ ಸಂಘ ಮುಂಬಯಿ).

ನೆರೂಲ್‌ ಒಂದು ಧರ್ಮ ಕ್ಷೇತ್ರವಾಗಿ ಸ್ಥಾಪನೆಗೊಂಡಿದೆ. ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಜರಗುತ್ತಿದೆ. ಇದರಿಂದಾಗಿ ದೇವಸ್ಥಾನಗಳು ಇದ್ದಲ್ಲಿ, ಆ ಊರಿನ ಜನತೆ ಧಾರ್ಮಿಕ ಶ್ರದ್ಧಾ-ಭಕ್ತಿಯಿಂದ ಸುಸಂಸ್ಕೃರಾಗಿ ಬೆಳೆಯುತ್ತಾರೆ   -ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ (ಅಧ್ಯಕ್ಷರು : ಬೋಂಬೆ ಬಂಟ್ಸ್‌ ಅಸೋಸಿಯೇಶನ್‌).

ನವಿಮುಂಬಯಿಯಲ್ಲಿ ತುಳು-ಕನ್ನಡಿಗರ ಆಡಳಿತದಲ್ಲಿರುವ ದೇವಸ್ಥಾನಗಳ ಪ್ರಗತಿಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ. ಇಲ್ಲಿಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳುತ್ತಾರೆ. ಇದರಿಂದ ಯಾವುದೇ ಕಾರ್ಯಕ್ರಮಗಳು ಯಶಸ್ವಿಯತ್ತ ಸಾಗುತ್ತದೆ 
   – ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ (ಅಧ್ಯಕ್ಷರು : ನೆರೂಲ್‌ ಶ್ರೀ ಶನೀಶ್ವರ ಮಂದಿರ).

ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಆಗ ಕ್ಷೇತ್ರವು ಅಭಿವೃದ್ಧಿಯಾಗುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ
– ಸಂತೋಷ್‌ ಡಿ. ಶೆಟ್ಟಿ (ಕಾರ್ಯಾಧ್ಯಕ್ಷರು : ನೆರೂಲ್‌ ಶ್ರೀ ಶನೀಶ್ವರ ಮಂದಿರ).

Advertisement

Udayavani is now on Telegram. Click here to join our channel and stay updated with the latest news.

Next