ನವಿಮುಂಬಯಿ: ಶ್ರೀ ಮಣಿಕಂಠ ಸೇವಾ ಸಂಘಂ ನೆರೂಲ್ ವತಿಯಿಂದ ನೆರೂಲ್ ಪೂರ್ವದ ಫೇಸ್ ನಂಬರ್-01, ನೆರೂಲ್ ಬಸ್ ಡಿಪ್ಪೋ ಸಮೀಪ, ನೆರೂಲ್ ರೈಲ್ವೇ ನಿಲ್ದಾಣ ರಸ್ತೆಯ, ಸೆಕ್ಟರ್-29, ಪ್ಲೋಟ್ ನಂಬರ್ 16ರಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಸಮಾರಂಭವು ಜ. 15ರಂದು ಪ್ರಾರಂಭಗೊಂಡಿದ್ದು, ಜ. 22 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಲಿದೆ.
ಬಿಂಬ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವವು ಶ್ರೀ ಗುರುಪ್ರಸಾದ್ ಭಟ್ ಘನ್ಸೋಲಿ ಅವರ ಮಾರ್ಗ ದರ್ಶನದಲ್ಲಿ, ತಂತ್ರಿಗಳಾದ ವಿದ್ವಾನ್ ರಾಮಚಂದ್ರ ಬಾಯರಿ ಕಾರ್ಕಳ ಅವರ ನೇತೃತ್ವದಲ್ಲಿ ಕಳತ್ತೂರು ವೇದಮೂರ್ತಿ ಉದಯ ತಂತ್ರಿಗಳ ಉಪಸ್ಥಿತಿಯಲ್ಲಿ ವೇದಾಗಮ ತಜ್ಞರಾದ ಋತ್ವಿಜರ ಸಹಯೋಗದೊಂದಿಗೆ ನಿಗಮಾಗಮೋಕ್ತ ವಿಧಿ-ವಿಧಾನದಂತೆ ನಡೆಯುತ್ತಿದೆ.
ಧಾರ್ಮಿಕ ಕಾರ್ಯಕ್ರಮವಾಗಿ ಜ. 17ರಂದು ಬೆಳಗ್ಗೆ 8 ರಿಂದ ಅರಣಿ ಮಥನ, ಭದ್ರದೀಪ ಪ್ರತಿಷ್ಠೆ, ಪೂರ್ಣ ನವಗ್ರಹ ಯಾಗ, ಸಂಜೀವಿನಿ ಮಹಾ ಮೃತ್ಯುಂಜಯ ಹೋಮ, ಬಿಂಬ ಶುದ್ಧಿ, ಸ್ನಪನ ಕಲಶ, ಬಿಂಬ ಶುದ್ಧಿ ಹೋಮ, ಶಯ್ನಾಕಲ್ಪನಂ, ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ಜರಗಿತು. ಸಾವಿರಾರು ಭಕ್ತಾದಿಗಳು ಅನ್ನಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ 5 ರಿಂದ ಶಿರತ್ತತ್ವ ಹೋಮ, ಭದ್ರಕ ಮಂಡಲ ಪೂಜೆ, ಅಧಿವಾಸ ಹೋಮಗಳು, ಶಯ್ನಾಧಿವಾಸ, ಅಷ್ಟ ಬಂಧಾಧಿವಾಸ, ನೂತನ ಪ್ರಸಾದಾಧಿವಾಸ ನಡೆಯಿತು. ದಿನಂಪ್ರತಿ ನಗರದ ವಿವಿಧ ಭಜನ ಮಂಡಳಿಗಳಿಂದ ಭಜನ ಕಾರ್ಯಕ್ರಮ ಜರಗುತ್ತಿದೆ.
ನೂತನ ಮಂದಿರದ ಕಾರ್ಯಾಧ್ಯಕ್ಷ ಚೆಲ್ಲಡ್ಕ ಕುಸುಮೋದರ ಡಿ. ಶೆಟ್ಟಿ, ಅಧ್ಯಕ್ಷ ಕಿಶೋರ್ ಕುಮಾರ್ ಎಂ. ಶೆಟ್ಟಿ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಸಂಜೀವ ಎನ್. ಶೆಟ್ಟಿ, ಉಪಾಧ್ಯಕ್ಷ ದಾಮೋದರ ಎಸ್. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಂದರ ಯು. ಪೂಜಾರಿ, ಗೌರವ ಕೋಶಾಧಿಕಾರಿ ಸುರೇಶ್ ಜಿ. ಶೆಟ್ಟಿ, ಜತೆ ಕಾರ್ಯದರ್ಶಿ ಹರಿ ಎಲ್. ಶೆಟ್ಟಿ, ಜತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್ ಮಾಡ, ವಿಶ್ವಸ್ಥರುಗಳಾದ ರವಿ ಆರ್. ಶೆಟ್ಟಿ, ರಿತೇಶ್ ಜಿ. ಕುರುಪು, ಡಾ| ಶಿವ ಮೂಡಿಗೆರೆ, ಪ್ರಕಾಶ್ ಮಹಾಡಿಕ್, ಖಾಂದೇಶ್ ಭಾಸ್ಕರ್ ಶೆಟ್ಟಿ, ಹರೀಶ್ ಎನ್. ಶೆಟ್ಟಿ, ಮಹೇಶ್ ಡಿ. ಪಟೇಲ್, ನರೇನ್ ಭಾç ಪಟೇಲ್ ಹಾಗೂ ಸದಸ್ಯರುಗಳಾದ ರಾಮಕೃಷ್ಣ ಎಸ್. ಶೆಟ್ಟಿ, ಅಣ್ಣಪ್ಪ ಕೋಟೆಗಾರ್, ಸುರೇಂದ್ರ ಆರ್. ಶೆಟ್ಟಿ, ನಿತ್ಯಾನಂದ ವಿ. ಶೆಟ್ಟಿ, ಸದಾಶಿವ ಎನ್. ಶೆಟ್ಟಿ, ಮೋಹನ್‌ದಾಸ್ ಕೆ. ರೈ, ಮೇಘರಾಜ್ ಎಸ್. ಶೆಟ್ಟಿ, ಸುರೇಶ್ ಆರ್. ಶೆಟ್ಟಿ, ವಿಶ್ವನಾಥ ಡಿ. ಶೆಟ್ಟಿ, ಇಂದಿರಾ ಎಸ್. ಶೆಟ್ಟಿ, ರಘು ವಿ. ಶೆಟ್ಟಿ, ಹಾಗೂ ನೆರೂಲ್ ಶ್ರೀ ಮಣಿಕಂಠ ಸೇವಾ ಸಂಘ, ಧರ್ಮಶಾಸ್ತ ಭಕ್ತವೃಂದ ಚಾರಿಟೆಬಲ್ ಟ್ರಸ್ಟ್ ನವಿಮುಂಬಯಿ ಸರ್ವ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವೃಂದದವರು ಪಾಲ್ಗೊಂಡು ಸಹಕರಿಸಿದರು. ನಗರದ ವಿವಿಧ ಜಾತೀಯ ಹಾಗೂ ಕನ್ನಡ-ತುಳುಪರ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಸಮಾಜ ಸೇವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಇಂದಿನ ಕಾರ್ಯಕ್ರಮ
ಜ. 18ರಂದು ಬೆಳಗ್ಗೆ 8ರಿಂದ ಪ್ರಸಾದ ಪ್ರತಿಷ್ಠೆ, ನಪುಂಸಕಶಿಲಾ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ರತ್ನಾನ್ಯಾಸ, ಭಾಗ್ಯಸೂಕ್ತ ಯಾಗ ಆರಂಭ, ಪೂರ್ವಾಹ್ನ 10.55ರಿಂದ ಶ್ರೀ ಅಯ್ಯಪ್ಪ, ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿಯ ಬಿಂಬ ಪ್ರತಿಷ್ಠೆ, ಅಷ್ಟಬಂಧ ಪ್ರತಿಷ್ಠೆ, ಕುಂಭೇಶ ನಿದ್ರಾಕಲಶಾಭಿಷೇಕ, ತತ್ವಕಲಶಾಭಿಷೇಕ, ಪ್ರತಿಷ್ಠಾಂಗ ತತ್ವನ್ಯಾಸ, ಪ್ರಾಣನ್ಯಾಸಾದಿಗಳು, ಪ್ರತಿಷ್ಠಾ ಪೂಜೆ, ನಿತ್ಯ ನೈಮಿತ್ತಿಕ ಪೂಜಾ ವಿಧಿ, ವಿಧಾನಗಳ ಪ್ರತಿಜ್ಞಾ ಸ್ವೀಕಾರ, ಪೂರ್ವಾಹ್ನ 11.30ರಿಂದ ಮಹಾಪೂರ್ಣಾಹುತಿ, ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಮಧ್ಯಾಹ್ನ 1 ರಿಂದ ಅನ್ನಸಂತರ್ಪಣೆ, ಸಂಜೆ 5 ರಿಂದ ಗಣಪತಿ ದೇವರಿಗೆ 108 ಕಲಶಾಧಿವಾಸ, ಅಧಿವಾಸ ಹೋಮ, ಗಣಪತಿ ದೇವರ ಭದ್ರಕ ಪೂಜೆಯನ್ನು ಆಯೋಜಿಸಲಾಗಿದೆ.