Advertisement

ನೇಪಾಳಕ್ಕೆ ತೆರಳಿ ಕನ್ನಗ್ಯಾಂಗ್‌ ಬಂಧಿಸಿದ ಖಾಕಿ

11:15 AM Apr 01, 2023 | Team Udayavani |

ಬೆಂಗಳೂರು: ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್‌ ಮಾಡಿ ಚಿನ್ನಾಭರಣ ಕದಿಯುತ್ತಿದ್ದ ನೇಪಾಳಿ ಗ್ಯಾಂಗ್‌ನ ಐವರು ಸದಸ್ಯರು ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Advertisement

ನೇಪಾಳ ಮೂಲದ ಮೋಹನ್‌ ಬಿಸ್ವಕರ್ಮ, ಜನಕ್‌ ಜೈಶಿ, ಬಿಬೇಕ್‌ ರಾಜ್‌ ದೇವಕೂಟ, ಸೀತರಾಮ್‌ ಜೈಸಿ, ಕಮಲ ಬಿಕೆ ಬಂಧಿತರು. ಆರೋಪಿಗಳಿಂದ 35.80 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ, ಬೈಕ್‌ ಜಪ್ತಿ ಮಾಡಲಾಗಿದೆ.

ಪೊಲೀಸರು ನೇಪಾಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಮುಂಬೈ, ಬೆಂಗಳೂರಿನ ಮಹದೇವಪುರ, ಆರ್‌.ಟಿ. ನಗರ, ಕೋರಮಂಗಲ, ಯಲಹಂಕ ಉಪ ನಗರ ಠಾಣೆಗಳಲ್ಲಿ ನಡೆದಿದ್ದ ಮನೆಗಳ್ಳತನ ಪ್ರಕರಣಗಳು ಬೆಳಕಿಗೆ ಬಂದಿವೆ. ಬಂಧಿತ ಐವರ ಗ್ಯಾಂಗ್‌ ದೇಶದ ವಿವಿಧ ಪ್ರಮುಖ ನಗರಗಳಿಗೆ ತೆರಳಿ ಬೀಗ ಹಾಕಿರುವ ಮನೆ ಗುರುತಿಸಿ ಕ್ಷಣ ಮಾತ್ರದಲ್ಲಿ ಚಿನ್ನಾಭರಣ ಕದ್ದು ಪರಾರಿಯಾಗುತ್ತಿತ್ತು. ಮಹಾರಾಷ್ಟ್ರ , ಮುಂಬೈ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.

5 ವರ್ಷಗಳಿಂದ ಹಲವು ಬಾರಿ ಮನೆಗಳ್ಳತನ ಪ್ರಕರಣಗಳಲ್ಲಿ ಆಗಾಗ ಜೈಲು ಸೇರುತ್ತಿದ್ದ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರ ಬಂದು ಮತ್ತೆ ಹಳೆ ಚಾಳಿ ಮುಂದುವರಿಸುತ್ತಿದ್ದರು.

ಆರೋಪಿಗಳು ಸಿಕ್ಕಿ ಬಿದ್ದಿದ್ದು ಹೇಗೆ?: ಮಾ.3ರಂದು ವಿದ್ಯಾರಣ್ಯಪುರದ ಎಎಂಎಸ್‌ ಬಡಾವಣೆ ನಿವಾಸಿ ನಂದನ್‌ ಕುಮಾರ್‌ ಕುಟುಂಬದ ಜತೆ ದೊಡ್ಡಬಳ್ಳಾಪುರಕ್ಕೆ ಹೋಗಿದ್ದರು. ಕೆಲ ದಿನಗಳ ಹಿಂದೆ ನಗರಕ್ಕೆ ಆಗಮಿಸಿದ್ದ ಗ್ಯಾಂಗ್‌ನ ಸದಸ್ಯರು ಇವರ ಮನೆಯ ಬೀಗ ಮುರಿದು ಲಾಕರ್‌ನಲ್ಲಿಟ್ಟಿದ್ದ 989.58 ಗ್ರಾಂ ಚಿನ್ನಾಭರಣ, 6.5 ಕೆಜಿ ಬೆಳ್ಳಿ ಕದಿದ್ದರು. ಈ ಕುರಿತು ನಂದ ಕುಮಾರ್‌ ದೂರು ನೀಡಿದ್ದರು. ಕೃತ್ಯ ನಡೆದ ಸ್ಥಳದ ಆಸು-ಪಾಸಿನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಆರೊಪಿಗಳ ಸುಳಿವು ಸಿಕ್ಕಿತ್ತು.

Advertisement

ಈ ಆಧಾರದ ಮೇಲೆ ನೇಪಾಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆ ತಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next