ಬಂಟ್ವಾಳ: ಲಕ್ಷಾಂತರ ರೂ. ಮೌಲ್ಯದ ಗಾಂಜಾ ಮಾರಾಟ ಮಾಡಲು ಯತ್ನ ನಡೆಸುತ್ತಿದ್ದ ನೇಪಾಳದ ಯುವಕನ ಸಹಿತ ಇಬ್ಬರು ಆರೋಪಿಗಳನ್ನು ಬುಧವಾರ ಬಂಟ್ವಾಳದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಿವಾಸಿ ಟಿ.ಪಿ ಫಾರೂಕ್ (50), ಹಾಗೂ ನೇಪಾಳ ನಿವಾಸಿ ಸಾಗರ್ ಸಿಂಗ್ (22), ಬಂಧಿತ ಆರೋಪಿಗಳು. ಬಂಧಿತರಿಂದ 10,32,900 ರೂ. ಮೌಲ್ಯದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಇಬ್ಬರು ವ್ಯಕ್ತಿಗಳು ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ ಗಿರಾಕಿಗಳಿಗೆ ಮಾರಾಟ ಮಾಡಲು ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ನಿರೀಕ್ಷಕ ಚೆಲುವರಾಜು ಸಿಬ್ಬಂದಿಯೊಂದಿಗೆ ಮೆಲ್ಕಾರ್ ಬಸ್ಸು ನಿಲ್ದಾಣದ ಬಳಿ ಕಾರನ್ನು ತಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಹಿರಿಯಡ್ಕದಲ್ಲಿ ಕಾರು ಮತ್ತು ಟಿಪ್ಪರ್ ನಡುವೆ ಢಿಕ್ಕಿ: ನಜ್ಜುಗುಜ್ಜಾದ ಕಾರು, ಓರ್ವ ಗಂಭೀರ
ನೇಪಾಳ ಮೂಲದ ಸಾಗರ್ ಸಿಂಗ್ ಪ್ರಸ್ತುತ ಮಂಗಳೂರು ಪಿಜಿಯಲ್ಲಿ ವಾಸ ಮಾಡುತ್ತಿದ್ದು, ಟಿ.ಪಿ ಫಾರೂಕ್ ಜೊತೆ ಸೇರಿ ಗಾಂಜಾ ಮಾರಾಟ ಮಾಡುತ್ತಿದ್ದರು.
ಕಾರ್ಯಾಚರಣೆಯನ್ನು ಡಿಸಿಐಬಿ ಪೊಲೀಸ್ ನಿರೀಕ್ಷಕ ಚೆಲುವರಾಜು ಬಿ ರವರ ನೇತ್ರತ್ವದಲ್ಲಿ ಡಿಸಿಐಬಿ ಸಿಬ್ಬಂದಿಗಳಾದ ಲಕ್ಷ್ಮಣ ಕೆ.ಜಿ, ಉದಯ ರೈ, ಪ್ರವೀಣ್ ಎಂ, ತಾರಾನಾಥ್, ಪ್ರವೀಣ್ ರೈ, ಶೋನ್‍ಶಾ, ಸುರೇಶ್ ನಡೆಸಿದ್ದಾರೆ.