ಕಠ್ಮಂಡು:ಭಾನುವಾರ ಪತನಗೊಂಡ ನೇಪಾಳದ ಯೇಟಿ ಏರ್‌ಲೈನ್ಸ್ ವಿಮಾನದಲ್ಲಿದ್ದ ನಾಲ್ವರ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ. ಘಟನಾ ಸ್ಥಳದಲ್ಲಿ ಇವರ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ. ಉಳಿದ 68 ಮಂದಿಯ ಮೃತದೇಹವನ್ನು ಈಗಾಗಲೇ ಹೊರತೆಗೆಯಲಾಗಿದೆ.
ಇದೇ ವೇಳೆ, ಸೋಮವಾರ ವಿಮಾನದ ಅವಶೇಷಗಳ ನಡುವೆ 2 ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದ್ದು, ಅವುಗಳನ್ನು ನೇಪಾಳದ ನಾಗರಿಕ ವಿಮಾನಯಾನ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಅವುಗಳ ಪರಿಶೀಲನೆಯ ಬಳಿಕ ಪತನಕ್ಕೆ ಕಾರಣವೇನು ಎಂಬುದು ತಿಳಿದುಬರಲಿದೆ.
ವಿಮಾನ ಮಲ್ಯ ಒಡೆತನದಲ್ಲಿತ್ತು!:
ಪತನಕ್ಕೀಡಾದ ಯೇಟಿ ಏರ್‌ಲೈನ್ಸ್‌ನ ವಿಮಾನವು ಈ ಹಿಂದೆ ವಿಜಯ ಮಲ್ಯ ನೇತೃತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್‌ನ ಕೈಯ್ಯಲ್ಲಿತ್ತು. 2007ರಲ್ಲಿ ಕಿಂಗ್‌ಫಿಶರ್ ಈ ವಿಮಾನವನ್ನು ಖರೀದಿಸಿತ್ತು. ಅದಾದ 6 ವರ್ಷಗಳ ನಂತರ ಥಾಯ್ಲೆಂಡ್‌ನ ಕಂಪನಿ ಅದನ್ನು ಕೊಂಡುಕೊಂಡಿತ್ತು. 2019ರಲ್ಲಿ ಈ ವಿಮಾನವನ್ನು ಏಟಿ ಏರ್‌ಲೈನ್ಸ್ ಖರೀದಿ ಮಾಡಿತ್ತು.
ಪತನಕ್ಕೆ ಬಲಿಯಾದ ಪೈಲಟ್ ದಂಪತಿ!
ವಿಮಾನ ಪತನದಿಂದ ಪೈಲಟ್‌ವೊಬ್ಬರು ಮೃತಪಟ್ಟ 16 ವರ್ಷಗಳ ಬಳಿಕ ಅವರ ಪತ್ನಿಯೂ ವಿಮಾನ ಪತನದಿಂದಲೇ ಅಸುನೀಗಿದ್ದಾರೆ. ಭಾನುವಾರ ನಡೆದ ಯೇಟಿ ಏರ್‌ಲೈನ್ಸ್ ದುರಂತದಲ್ಲಿ ನೇಪಾಳದ ಮಹಿಳಾ ಪೈಲಟ್ ಅಂಜು ಖತಿವಾಡ ಸಜೀವ ದಹನಗೊಂಡಿದ್ದಾರೆ. ನೇಪಾಳ ಸೇನೆಯಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದ ದೀಪಕ್ ಪೋಖರೆಲ್‌ರನ್ನು ಅಂಜು ವಿವಾಹವಾಗಿದ್ದರು. ನಂತರ ದೀಪಕ್ ಅವರು ಯೇಟಿ ಏರ್‌ಲೈನ್ಸ್‌ನಲ್ಲಿ ಪೈಲಟ್ ಆಗಿ ಸೇರಿದ್ದರು. 16 ವರ್ಷಗಳ ಹಿಂದೆ ಅಂದರೆ 2006ರಲ್ಲಿ ಯೇಟಿ ಏರ್‌ಲೈನ್ಸ್‌ನ ವಿಮಾನ ಪತನಗೊಂಡು ದೀಪಕ್ ಮೃತಪಟ್ಟಿದ್ದರು. ಈಗ ಅವರ ಪತ್ನಿಯೂ ಅಂಥದ್ದೇ ದುರಂತದಲ್ಲಿ ಕೊನೆಯುಸಿರೆಳೆದಂತಾಗಿದೆ.
Related Articles
ಹರಕೆ ತೀರಿಸಲು ಹೋಗಿದ್ದರು
ದುರಂತದಲ್ಲಿ ಮಡಿದ ಐವರು ಭಾರತೀಯರ ಪೈಕಿ ಒಬ್ಬರಾದ ಉತ್ತರಪ್ರದೇಶದ ಘಾಜಿಪುರದ ಸೋನು ಜೈಸ್ವಾಲ್(35) ಅವರು ಹರಕೆ ತೀರಿಸಲೆಂದು ನೇಪಾಳದ ಪಶುಪತಿನಾಥ ದೇಗುಲಕ್ಕೆ ತೆರಳಿದ್ದರು. ಮಗ ಹುಟ್ಟಲೆಂದು ಹರಕೆ ಹೊತ್ತಿದ್ದ ಜೈಸ್ವಾಲ್‌ಗೆ 6 ತಿಂಗಳ ಹಿಂದೆ ಗಂಡುಮಗುವಾಗಿತ್ತು. ಹೀಗಾಗಿ ಹರಕೆ ತೀರಿಸಲು ತಮ್ಮ ನಾಲ್ವರು ಗೆಳೆಯರೊಂದಿಗೆ ನೇಪಾಳಕ್ಕೆ ತೆರಳಿದ್ದರು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು.
ಬೆಚ್ಚಿಬೀಳಿಸಿದ ಕೊನೇ ಕ್ಷಣದ ವಿಡಿಯೋ!
ವಿಮಾನವು ಪತನಗೊಳ್ಳುವವರೆಗಿನ ಕೊನೇ ಕ್ಷಣದ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಇದನ್ನು ಮೃತ ಐವರು ಭಾರತೀಯರಲ್ಲಿ ಒಬ್ಬ ಚಿತ್ರೀಕರಿಸಿದ್ದ. ಫೇಸ್‌ಬುಕ್ ಲೈವ್ ಮೂಲಕ ವಿಮಾನ ಲ್ಯಾಂಡಿಂಗ್ ಆಗುವ ಕ್ಷಣಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಿರುತ್ತಾನೆ. ಏಕಾಏಕಿ ವಿಮಾನವು ಓಲಾಡಲು ಆರಂಭವಾಗುತ್ತಿದ್ದಂತೆ, ಅವರೆಲ್ಲರೂ “ಮರಾ ಮರಾ'(ನಾವು ಸತ್ತೆವು, ಸತ್ತೆವು) ಎಂದು ಕಿರುಚುತ್ತಾರೆ. ಕ್ಷಣಮಾತ್ರದಲ್ಲಿ ವಿಮಾನಕ್ಕೆ ಬೆಂಕಿ ಹತ್ತಿಕೊಳ್ಳುತ್ತದೆ. ಬೆಂಕಿಯ ಕೆನ್ನಾಲಿಗೆಯು ಇಡೀ ವಿಮಾನವನ್ನು ಆವರಿಸಿಕೊಂಡು ಎಲ್ಲವೂ ಸುಟ್ಟು ಕರಕಲಾಗುತ್ತವೆ. ಬೆಚ್ಚಿಬೀಳಿಸುವಂಥ ಈ ಇಡೀ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.