Advertisement

ಸರಕಾರದಿಂದ ಕಾರ್ಯಪಡೆ ರಚನೆ : ಶಾಲಾಹಂತದಿಂದಲೇ ಎನ್‌ಇಪಿ ಅನುಷ್ಠಾನ

02:09 AM Sep 18, 2021 | Team Udayavani |

ಬೆಂಗಳೂರು : ಶಾಲಾ ಹಂತದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಅಗತ್ಯ ಯೋಜನೆ ರೂಪಿಸಲು ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ನೇತೃತ್ವದಲ್ಲಿ 21 ಸದಸ್ಯರ ಕಾರ್ಯಪಡೆಯನ್ನು ರಾಜ್ಯ ಸರಕಾರ ರಚನೆ ಮಾಡಿದೆ.

Advertisement

ಪ್ರಸಕ್ತ ಸಾಲಿನಿಂದಲೇ ಉನ್ನತ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳಲ್ಲಿ ಸಿದ್ಧತೆ ನಡೆದಿದೆ. ಆದರೆ ಶಾಲಾ ಹಂತದಲ್ಲಿ ಎನ್‌ಇಪಿ ಅನುಷ್ಠಾನಕ್ಕೆ ಸರಕಾರ ಈವರೆಗೆ ಯಾವುದೇ ಯೋಜನೆ ರೂಪಿಸಿರಲಿಲ್ಲ. ಇತ್ತೀಚೆಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರು ಈ ಬಗ್ಗೆ ಅಧಿಕಾರಿಗಳ ಜತೆ ಸುದೀರ್ಘ‌ ಚರ್ಚೆ ನಡೆಸಿ, ಕಾರ್ಯಪಡೆ ರಚಿಸುವ ತೀರ್ಮಾನ ಮಾಡಿದ್ದರು.

ಕಾರ್ಯಪಡೆ ಸದಸ್ಯರು
ಶಿಕ್ಷಣ ಇಲಾಖೆ ಆಯುಕ್ತರು, ಶಿಕ್ಷಣ ತಜ್ಞರಾದ ಡಾ| ಪ್ರವೀಣ್‌ ಕುಮಾರ್‌ ಸಯ್ಯಪ್ಪರಾವ್‌, ಡಾ| ಪದ್ಮಾವತಿ, ಅಜೀಂ ಪ್ರೇಮ್‌ಜಿ ಪ್ರತಿಷ್ಠಾನದ ಋಷಿಕೇಶ್‌, ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನ ನಿರ್ದೇಶಕರು, ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಬೆಳ್ಳಶೆಟ್ಟಿ, ಬೆಂಗಳೂರು ವಿ.ವಿ.ಯ ನಿವೃತ್ತ ಕುಲಪತಿ ಡಾ| ಶಕುಂತಲಾ ಪತ್ರೆ, ವಿವಿಧ ಕಾಲೇಜುಗಳ ಪ್ರಾಂಶು ಪಾಲರು, ನಿವೃತ್ತ ಅಧಿಕಾರಿಗಳು, ಶಿಕ್ಷಣ ತಜ್ಞರು ಸೇರಿ 21 ಮಂದಿಯನ್ನು ಕಾರ್ಯಪಡೆಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ನಿರ್ದಿಷ್ಟ ಕಾಲಮಿತಿಯೊಳಗೆ ವರದಿ ಸಲ್ಲಿಸಲು ಸರಕಾರ ಸೂಚಿಸಿದೆ.

ಕಾರ್ಯಪಡೆಗೆ ಏನು ಕೆಲಸ?
– ಅಗತ್ಯಕ್ಕೆ ಅನುಗುಣವಾಗಿ ಸಭೆ ನಡೆಸಿ, ಕರಡು ನೀತಿ ರಚನೆ.
– ಎನ್‌ಇಪಿ ಅನುಷ್ಠಾನದಿಂದ 2030ರ ವರೆಗೆ ಆಗುವ ಪರಿಣಾಮಗಳ ವಿಶ್ಲೇಷಣೆ.
– ಸರಕಾರಕ್ಕೆ ಅಗತ್ಯ ಮಾರ್ಗದರ್ಶನ ಮತ್ತು ಪರಿಹಾರ ರೂಪಿಸುವುದು.
– ಪೂರ್ವ ಪ್ರಾಥಮಿಕ ಮತ್ತು 1ರಿಂದ 12ನೇ ತರಗತಿ ವರೆಗಿನ ಪಠ್ಯಕ್ರಮ ಚೌಕಟ್ಟು ತಯಾರಿಸಲು ಮಾರ್ಗದರ್ಶನ.
– ಅನುಷ್ಠಾನಕ್ಕೆ ಅಗತ್ಯ ಕಾರ್ಯಗಳನ್ನು ಹಂಚಿಕೆ ಮಾಡಿ ಮೇಲುಸ್ತುವಾರಿ ವಹಿಸುವುದು.
– ಎಲ್ಲ ಭಾಗೀದಾರರೊಂದಿಗೆ ಚರ್ಚಿಸಿ ಕರಡು ಅನುಷ್ಠಾನಕ್ಕೆ ಸೂಕ್ತ ನಿಯಮ ರೂಪಿಸುವುದು.
– ಈ ನೀತಿ ಅನುಷ್ಠಾನಕ್ಕೆ ದೀರ್ಘಾವಧಿ ಯೋಜನೆಗಳನ್ನು ಸಿದ್ಧಪಡಿಸಲು ಸಹಕಾರ ನೀಡುವುದು.
– ಎನ್‌ಇಪಿ 2020 ಶಿಫಾರಸಿನ ಅನ್ವಯ ಸಮನ್ವಯ ಮತ್ತು ಸಮಾನ ಶಿಕ್ಷಣದ ಕಾರ್ಯತಂತ್ರ ರೂಪಿಸಬೇಕು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next