Advertisement

ಸ್ವಾವಲಂಬನೆ, ಕೌಶಲವೃದ್ಧಿಗೆ ಎನ್‌ಇಪಿ ಅಗತ್ಯ: ಸಚಿವ ಬಿ.ಸಿ. ನಾಗೇಶ್‌

12:32 AM Jul 03, 2022 | Team Udayavani |

ಮಂಗಳೂರು: ಕಳೆದ ಏಳು ದಶಕಗಳಲ್ಲಿ ಜಾರಿಯಲ್ಲಿದ್ದ ಶಿಕ್ಷಣ ವ್ಯವಸ್ಥೆಯಿಂದ ಒಂದಷ್ಟು ಯಶಸ್ಸು ಲಭಿಸಿರಬಹುದು, ಆದರೆ ಅದಕ್ಕೆ ಸ್ಪಷ್ಟತೆ ಎಂಬುದಿಲ್ಲ, ಗೊಂದಲಗಳು ಹಲವಾರಿವೆ. ಶಿಕ್ಷಿತರಲ್ಲಿ ಸ್ವಾವಲಂಬನೆ ಸಾಧ್ಯವಾಗುತ್ತಿಲ್ಲ. ಕಲಿತವರಿಂದ ಸಾಮಾಜಿಕ ಸ್ಪಂದನೆಯೂ ಕಾಣುತ್ತಿಲ್ಲ. ಇದುವರೆಗಿನದು ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಎಂಬಂತಿದೆ.

Advertisement

ದೇಶದಲ್ಲಿ ಐಐಟಿಗಳನ್ನು ಸೇರುವ ಸಂಶೋಧನಾಸಕ್ತ ವಿದ್ಯಾರ್ಥಿಗಳ ಕೊರತೆ ಇದೆ. ಇದು ಯುವ ಸಮುದಾಯ ವನ್ನು ಸ್ವೋದ್ಯೋಗ ಮತ್ತು ದೇಶದ ಬಗೆಗಿನ ಚಿಂತನೆಯಿಂದ ದೂರ ಮಾಡುತ್ತಿದೆ. ಇಂತಹ ಶಿಕ್ಷಣದಿಂದ ಸಮಾಜ ಮತ್ತು ದೇಶಕ್ಕೆ ಪ್ರಯೋಜನ ಇಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಸರಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ನಗರದ ಶಕ್ತಿ ಪದವಿಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಪ.ಪೂ. ಕಾಲೇಜು ಪ್ರಾಂಶುಪಾಲರ ಸಂಘ, ಚಾಣಕ್ಯ ವಿ.ವಿ. ಮತ್ತು ವಿದ್ಯಾಭಾರತಿಗಳ ಆಶ್ರಯದಲ್ಲಿ ಶನಿವಾರ ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶು ಪಾಲರಿಗೆ ಏರ್ಪಡಿಸಿದ “ರಾಷ್ಟ್ರೀಯ ಶಿಕ್ಷಣ ನೀತಿ-2020′ ಕಾರ್ಯಾಗಾರ ಸಮಾರೋಪದಲ್ಲಿ ಅವರು ಮಾತನಾಡಿದರು.

ಹೊಸ ಶಿಕ್ಷಣ ನೀತಿಯಡಿ ಭವಿಷ್ಯದಲ್ಲಿ ಶಿಕ್ಷಕರ ನೇಮಕಾತಿಯಲ್ಲೂ ಬದಲಾವಣೆ ತರಬೇಕಾದ ಅಗತ್ಯ ಬರಬಹುದು ಎಂದರು.

ತತ್‌ಕ್ಷಣಕ್ಕೆ ವೃಂದ ಮತ್ತು ನೇಮಕಾತಿಗೆ ಬದಲಾವಣೆ ತರುವುದಿಲ್ಲ. ಪ್ರಸಕ್ತ ಇರುವ ಶಿಕ್ಷಕರಿಗೆ ತರಬೇತಿ ನೀಡಿ ಹೊಸ ಶಿಕ್ಷಣ ನೀತಿಗೆ ಹೊಂದಿಕೊಳ್ಳುವಂತೆ ಮಾಡಲಾಗುವುದು. ಈ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವಶ್ಯವಾದರೆ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದರು.

Advertisement

ಹೊಸ ಶಿಕ್ಷಣ ನೀತಿಯ ಅನ್ವಯ ಕಲಿಕೆಯ ಜತೆಗೆ ಕೌಶಲವೃದ್ಧಿಗೂ ಉತ್ತೇಜನ ನೀಡಲಾಗುತ್ತದೆ. ಕಲಿಕಾ ಅವಧಿಯನ್ನೂ ಪರಿಷ್ಕರಿಸಲಾಗಿದೆ. ಕೇವಲ ಉದ್ಯೋಗಕ್ಕೆ ಸೀಮಿತವಾಗುವ ಓದುವಿಕೆ ಆಗದೆ ಸ್ವಂತ ಉದ್ಯೋಗ, ಸಮಾಜಸೇವೆಗೆ ಪೂರಕವಾಗುವ ಶಿಕ್ಷಣದ ಅಗತ್ಯವಿದೆ. ಇದನ್ನು ಪರಿಷ್ಕೃತ ಪಠ್ಯಕ್ರಮದಲ್ಲಿ ಕಾಣಬಹುದಾಗಿದೆ ಎಂದರು.

ಉಪನ್ಯಾಸಕರ ಸ್ಪಂದನೆ ಸಾಲದು
ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮುನ್ನ ಪ.ಪೂ. ಕಾಲೇಜು ಗಳ ಉಪನ್ಯಾಸಕರಿಂದಲೂ ಸಲಹೆ ಕೇಳಲಾ
ಗಿತ್ತು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರತಿಸ್ಪಂದನೆ ಬಂದಿಲ್ಲ. ಶಿಕ್ಷಣ ಇಲಾಖೆಯ ಪೋರ್ಟಲ್‌ನಲ್ಲಿ ಇನ್ನೂ ಸಲಹೆ ನೀಡಲು ಅವಕಾಶ ಇದೆ. ಈ ಸಲಹೆಗಳನ್ನು ಪರಿಶೀಲಿಸಿ ಉತ್ತಮವಾಗಿದ್ದರೆ ಅಳವಡಿಸಿ ಕೊಳ್ಳಬಹುದು ಎಂದರು.

ಕ್ಯಾನ್ಸರ್‌ ಜಾಗೃತಿಯ
ವಿದ್ಯಾರ್ಥಿನಿಗೆ ಸಮ್ಮಾನ
ಕ್ಯಾನ್ಸರ್‌ ರೋಗಿಗಳಿಗೆ ಕೇಶ ದಾನ ಮಾಡುವ ಮೂಲಕ ಕ್ಯಾನ್ಸರ್‌ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಶಕ್ತಿ ಪಿಯು ಕಾಲೇಜು ವಿದ್ಯಾರ್ಥಿನಿ ಆದ್ಯ ಸುಲೋಚನಾ ಮುಳಿಯ ಅವರನ್ನು ಸಚಿವರು ಗೌರವಿಸಿದರು.

ಸಂಪನ್ಮೂಲ ವ್ಯಕ್ತಿ ಡಾ| ಗೌರೀಶ್‌, ಪಿಯು ಉಪನಿರ್ದೇಶಕ ಜಯಣ್ಣ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುಧಾಕರ್‌, ಉಪನಿರ್ದೇಶಕಿ ಅಭಿವೃದ್ಧಿ ವಿಭಾಗ ರಾಜಲಕ್ಷ್ಮೀ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್‌, ಜಿಲ್ಲಾ ಪಿಯು ಪ್ರಾಂಶುಪಾಲರ ಸಂಘ ಅಧ್ಯಕ್ಷ ಗಂಗಾಧರ ಆಳ್ವ, ಪದಾಧಿಕಾರಿಗಳಾದ ವಿನಾಯಕ್‌, ಯೂಸುಫ್, ಕವಿತಾ, ವೆಂಕಟೇಶ್‌, ಶಕ್ತಿ ಕಾಲೇಜು ಆಡಳಿತಾಧಿಕಾರಿ
ರಮೇಶ್‌ ಇದ್ದರು.

ಕಯ್ಯಾರ , ನಾರಾಯಣಗುರು ಪಠ್ಯ ಕೈಬಿಟ್ಟಿಲ್ಲ
ಪರಿಷ್ಕೃತ ಪಠ್ಯಕ್ರಮದಲ್ಲಿ ಹಿರಿಯ ಕವಿ ಕಯ್ಯಾರ ಕಿಂಞ್ಞಣ್ಣ ರೈ ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಪಾಠವನ್ನು ಕೈಬಿಟ್ಟಿಲ್ಲ. ನಾರಾಯಣಗುರುಗಳ ಬಗ್ಗೆ 5ನೇ ತರಗತಿಯಲ್ಲಿ ಹಿಂದಿಗಿಂತಲೂ ವಿಸ್ತೃತವಾಗಿ ಕಲಿಸಲಾಗುತ್ತದೆ. ಕಯ್ಯಾರರ ವಿಚಾರವನ್ನೂ ಕೈಬಿಟ್ಟಿಲ್ಲ ಎಂದು ಸಚಿವ ನಾಗೇಶ್‌ ಸ್ಪಷ್ಟಪಡಿಸಿದರು. ಶಿಕ್ಷಣ ಇಲಾಖೆ ಪ್ರಕಟಿಸಿದ ತಜ್ಞರ ಸಮಿತಿಗಳ ಪಠ್ಯಪುಸ್ತಕಗಳ ಪಿಡಿಎಫ್ ಪ್ರತಿಯಲ್ಲಿ ಇದನ್ನು ಪರಿಶೀಲಿಸಬಹುದು. ಹೊಸ ಪಠ್ಯಕ್ರಮ ಅಳವಡಿಸುವಾಗ ತಪ್ಪುಗಳಾಗಿದ್ದಲ್ಲಿ ಸರಿಪಡಿಸಲಾಗುವುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next