Advertisement

ನೆರೆ ಪರಿಹಾರ ಕೇಂದ್ರ: ಕಾರ್ಯಪ್ಪ ಕಾಲೇಜು ಎನ್‌ಸಿಸಿ ಕೆಡೆಟ್‌ಗಳ ಮಾದರಿ ಸೇವೆ

08:17 PM Aug 21, 2019 | mahesh |

ಮಡಿಕೇರಿ: ನಗರದ 19ನೇ ಕರ್ನಾಟಕ ಬೆಟಾಲಿಯನ್‌ನ ಕಮಾಂಡಿಂಗ್‌ ಆಫೀಸರ್‌ ವಿ.ಎಂ.ನಾಯಕ್‌ ಅವರ ಮಾರ್ಗದರ್ಶನದಲ್ಲಿ ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಕಾಲೇಜ್‌ನ‌ 50ಕ್ಕೂ ಹೆಚ್ಚು ಎನ್‌ಸಿಸಿ ಕೆಡೆಟ್‌ಗಳು ಎನ್‌ಸಿಸಿ ಅಧಿಕಾರಿ ಮೇಜರ್‌ ರಾಘವ ಬಿ. ಅವರ ನೇತೃತ್ವದಲ್ಲಿ ಕಳೆದ 8 ದಿನಗಳಿಂದ ಜಿಲ್ಲೆಯ ವಿವಿಧೆಡೆ ಸಂತ್ರಸ್ತರು ಆಶ್ರಯ ಪಡೆದಿರುವ ಪರಿಹಾರ‌ ಕೇಂದ್ರಗಳಲ್ಲಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದ್ದಾರೆ.

Advertisement

ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಂತ್ರಸ್ತರಿಗೆ ಧೈರ್ಯ ತುಂಬುತ್ತಾ ನೊಂದವರಿಗೆ ಯಾವುದೇ ರೀತಿಯಲ್ಲಿ ಕೊರತೆಗಳು ಉಂಟಾಗದಂತೆ ನಿಗಾ ವಹಿಸುತ್ತಿದ್ದಾರೆ. ಆಹಾರ ಸಾಮಾಗ್ರಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ತಲುಪಿಸುವಲ್ಲಿ ಇತರ ಅಧಿಕಾರಿಗಳೊಂದಿಗೆ ಸಹಕರಿಸುತ್ತಿದ್ದಾರೆ. ಆಹಾರ ಮತ್ತು ನಾಗರಿಕ ಸೇವಾ ಇಲಾಖೆಯ ಮೂಲಕ ನೀಡಲಾಗುವ ಪಡಿತರವನ್ನು ತಲುಪಿಸುವುದು, ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸುವುದು ಮತ್ತು ವಿತರಿಸುವುದು, ಪರಿಹಾರ ಕೇಂದ್ರಗಳ ಶುಚಿತ್ವವನ್ನು ಕಾಪಾಡುವುದು ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ಫ‌ಲಾಪೇಕ್ಷೆ ಇಲ್ಲದೆ ಕೆಡೆಟ್‌ಗಳು ತಮ್ಮನ್ನು ತೊಂಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ನಿಸ್ವಾರ್ಥ ಸೇವೆಗೆ ಸಂತ್ರಸ್ತರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಹಾರ ಕೇಂದ್ರಗಳಾದ ಚೆಯ್ಯಂಡಾಣೆ, ನಾಪೋಕ್ಲು, ವಾಟೆಕಾಡು, ಮರಗೋಡು, ಮೂರ್ನಾಡು, ಗುಹ್ಯ, ಕೊಂಡಂಗೇರಿ ಪ್ರದೇಶಗಳಿಗೆ ಕೆಡೆಟ್‌ಗಳ ತಂಡ ತೆರಳಿ ಮುಂದಿನ ದಿನಗಳಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಯಾವ ರೀತಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಬಗ್ಗೆ ಕೆಡೆಟ್‌ಗಳು ಜನರಲ್ಲಿ ಜಾಗೃತಿ ಮೂಡಿಸಿದರು.

ಫೀ.ಮಾ.ಕಾರ್ಯಪ್ಪ ಕಾಲೇಜ್‌ನ ಎನ್‌ಸಿಸಿ ಅಧಿಕಾರಿ ಮೇಜರ್‌ ರಾಘವ ಮಾತನಾಡಿ, ಕಾರ್ಯಪ್ಪ ಕಾಲೇಜ್‌ನಲ್ಲಿ ಎನ್‌ಸಿಸಿ ಕೆಡೆಟ್‌ಗಳಾಗಿದ್ದ 9 ವಿದ್ಯಾರ್ಥಿಗಳು ಭಾರತೀಯ ಸೈನ್ಯಕ್ಕೆ ಭರ್ತಿಯಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಎನ್‌ಸಿಸಿ ವಿದ್ಯಾರ್ಥಿಗಳು ಸಮಾಜ ಸೇವೆಯ ಜೊತೆಗೆ ದೇಶ ಸೇವೆಯಲ್ಲೂ ತೊಡಗುವುದು ಹೆಮ್ಮೆಯ ವಿಚಾರವೆಂದರು.

ಕಾಲೇಜು ಪ್ರಾಂಶುಪಾಲ ಡಾ.ಜಗತ್‌ ತಿಮ್ಮಯ್ಯ ಅವರ ಸಹಕಾರದಿಂದ ನಮ್ಮ ಸೇವೆ ಯಶಸ್ವಿಯಾಗಿದೆ ಎಂದು ವಿದ್ಯಾರ್ಥಿಗಳು ತೃಪ್ತಿ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next