Advertisement

ಸರ್ಕಾರಿ ಜಾಹೀರಾತಿನಲ್ಲಿ ನೆಹರೂ ಇದ್ದಾರೆ: ಕಾಂಗ್ರೆಸ್‌ ನಾಯಕರಿಗೆ ಸಿಎಂ ತಿರುಗೇಟು

11:34 AM Aug 15, 2022 | Team Udayavani |

ಬೆಂಗಳೂರು: ಸ್ವಾತಂತ್ರ್ಯ ಅಮೃತ ಮಹೋತ್ಸವದ ಸರ್ಕಾರದ ಜಾಹೀರಾತಿನಲ್ಲಿ ನೆಹರೂ ಅವರನ್ನು ಕೈಬಿಟ್ಟಿರುವುದಕ್ಕೆ ತಗಾದೆ ತೆಗೆದಿರುವ ಕಾಂಗ್ರೆಸ್‌ಗೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ, ಜಾಹೀರಾತಿನಲ್ಲಿ ನೆಹರೂ ಇದ್ದಾರೆ. ಆದರೆ ಕಾಂಗ್ರೆಸ್‌ಗೆ ಯಾಕಿಷ್ಟು ಗಾಬರಿ ಎಂದು ಪ್ರಶ್ನಿಸಿದ್ದಾರೆ.

Advertisement

ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿದ್ದ ದೇಶ ವಿಭಜನೆಯ ದುರಂತ ಘಟನೆಗಳು ಎಂಬ ಪತ್ರಿಕಾ ವರದಿಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ, ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿದರು. ಕಾಂಗ್ರೆಸ್‌ನವರಿಗೆ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ. ಸಂವಿಧಾನ ಕೊಟ್ಟ ಅಂಬೇಡ್ಕರ್‌ ಅವರನ್ನು ಮರೆಸಿ ಬಿಟ್ಟಿದ್ರಲ್ಲಾ, ಅವರು ಎಲ್ಲೂ ಇಲ್ಲದಂಗೆ ಮಾಡಿದ್ರು. ಆಗ ಇವರಿಗೆ ನೆನಪಾಗಿಲ್ವಾ? ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸರ್ದಾರ್‌ ವಲ್ಲಭಾಯ್‌ ಪಟೇಲ್‌ ಅವರನ್ನು ಮರೆಸಿದ್ರು. ಯಾವುದೇ ಒಬ್ಬರಿಂದ ಸ್ವಾತಂತ್ರ್ಯ ಬಂದಿದೆ ಅನ್ನೋ ಪರಿಕಲ್ಪನೆ ತಪ್ಪು. ಅನೇಕ ಜನ ಪ್ರಾಣ ಬಲಿದಾನ ಮಾಡಿದ್ದಾರೆ ಎಂದರು.

75ನೇ ಸ್ವಾತಂತ್ರ್ಯೋತ್ಸವ ಅನಾಮಧೇಯ ಹೋರಾಟಗಾರರಿಗೆ ಮೀಸಲಿಟ್ಟಿದ್ದು, ಎಲ್ಲೇ ಹೋದರೂ ನೆಹರೂ ಹೆಸರು ಇಟ್ಟಿದ್ದೇವೆ. ಜಾಹೀರಾತಿನಲ್ಲೂ ನೆಹರೂ ಇದ್ದಾರೆ. ಆದರೂ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಗಾಬರಿ? ಅಂಬೇಡ್ಕರ್‌, ಭಗತ್‌ ಸಿಂಗ್‌, ಸುಭಾಷ್‌ ಚಂದ್ರಬೋಸ್‌, ಚಂದ್ರಶೇಖರ್‌ ಅಜಾದ್‌ ಇವರಿಗೆ ನೆನಪಾಗಿಲ್ಲ ತಿರುಗೇಟು ನೀಡಿದರು. ನಿಜವಾದ ಹೋರಾಟಗಾರರ ಸವಿನೆನಪು ಕರ್ನಾ ಟಕದಲ್ಲಿ ಮಾಡಿಕೊಟ್ಟಿದ್ದೇವೆ. ಅವರಿಗೆ ನಮನ ಸಲ್ಲಿಸಿದ್ದು ಕರ್ನಾಟಕದಲ್ಲಿ ಮಾತ್ರ.

ಹಿಂದೆಂದೂ ನೆನಪು ಮಾಡಿಕೊಂಡ ದಾಖಲೆಗಳು ಇಲ್ಲ. ಎಲ್ಲರನ್ನೂ ನೆನಪು ಮಾಡಿಕೊಂಡಿದ್ದೀವಿ, ಅದಕ್ಕೆ ಅಭಿನಂದನೆ ಸಲ್ಲಿಸಬೇಕು. ದಾದಾಬಾಯಿ ನವರೋಜಿ, ಹಡೇìಕರ್‌ ಅವರನ್ನು ನೆನಪು ಮಾಡಿಕೊಂಡಿದ್ದೇವೆ. ಅವರೆಲ್ಲ ಕಾಂಗ್ರೆಸ್‌ನವರೆ. ನಾವೇನು ಭೇದ ಭಾವ ಮಾಡಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

ಸಿದ್ದು ವಿರುದ್ಧ ಗರಂ: ಅಧಿಕಾರಕ್ಕೋಸ್ಕರ ಬೊಮ್ಮಾಯಿಯವರು ಆರ್‌ಎಸ್‌ಎಸ್‌ನವರ ಹಿಡಿತದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಪ್ರಾರಂಭದಲ್ಲಿ ಏಕವಚನದಲ್ಲೇ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಸಿದ್ದರಾಮಯ್ಯ ಆ ಹುಡುಗ ರಾಹುಲ್‌ ಗಾಂಧಿ ಮುಂದೆ ಕೈಕಟ್ಟಿಕೊಂಡು ನಿಂತ ಮೇಲೆ ಅವನದೆಲ್ಲ ಸ್ವಾಭಿಮಾನ ಮುಗಿದುಹೋಯ್ತು. ನಾವೆಲ್ಲ ಸಿದ್ದರಾಮಣ್ಣನ ಬಗ್ಗೆ ಬಹಳಷ್ಟು ಎತ್ತರಕ್ಕಿದ್ವಿ. ಅವನಿಗಿಂತ ಸಣ್ಣ
ವಯಸ್ಸಿನ ರಾಹುಲ್‌ ಗಾಂಧಿ ಮುಂದೆ ದೆಹಲಿಗೆ ಹೋಗಿ ಕೈಕಟ್ಟಿಕೊಂಡು ನಿಲ್ತಾರೆ, ದಿನಗಟ್ಟಲೇ ಕಾಯ್ತಾರೆ ಅವರ ಮೇಲಿದ್ದ ಗೌರವ, ಸ್ವಾಭಿಮಾನ ಅಲ್ಲಿಗೆ ಮುಗಿಯಿತು ಎಂದರು.

Advertisement

ಕರಾಳ ದಿನ: ಸಿಎಂ ಫೋಟೊ ವೀಕ್ಷಣೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾನುವಾರ ಬೆಂಗಳೂರಿನ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಆಯೋಜಿಸಲಾಗಿದ್ದ “ದೇಶ ವಿಭಜನೆಯ ದುರಂತ ಘಟನೆಗಳು’ ಎಂಬ ಪತ್ರಿಕಾ ವರದಿಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ರವಿಕುಮಾರ್‌, ಕೇಶವ ಪ್ರಸಾದ, ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮೊದಲ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ನೇತೃತ್ವದಲ್ಲಿ ಭಾಷ್ಯಂ ವೃತ್ತದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ದೇಶ ವಿಭಜನೆಯ ಕರಾಳ ದಿನದ ಅಂಗವಾಗಿ ಭಾಷ್ಯಂ ವೃತ್ತದಿಂದ ಮಲ್ಲೇಶ್ವರಂನ ಬಿಜೆಪಿ ಕಚೇರಿ ವರೆಗೂ ಮೌನ ಮೆರವಣಿಗೆ ನಡೆಸಲಾಯಿತು.

ಕರಾಳ ದಿನ ನೋಡಿದಾಗ ಕಣ್ಣಲ್ಲಿ ನೀರು ಬರುತ್ತೆ
ದೇಶ ವಿಭಜನೆಯ ಕರಾಳ ದಿನವನ್ನು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಪೂರ್ವ ಹಾಗೂ ಪಶ್ಚಿಮ ದೇಶ ವಿಭಜನೆ ಆದಾಗ 10 ಲಕ್ಷ ಜನರು ವಲಸೆ ಆದರು. ದೊಡ್ಡ ಹಿಂಸಾಚಾರ, ಸಾವು-ನೋವು ಆಯಿತು. ಬಹಳಷ್ಟು ಕಡೆ ಹಸಿವಿನಿಂದ ಸತ್ತರು. ಇದು ಯಾಕೆ ಆಯಿತು ಎಂದು ಇತಿಹಾಸದಲ್ಲಿ ದಾಖಲೆ ಇದೆ. ಇದಕ್ಕೆ ಯಾರೆಲ್ಲ ಕಾರಣ ಅಂತಾನೂ ದಾಖಲೆ ಇದೆ. ಇದೊಂದು ದೊಡ್ಡ ದುರಂತ. ಸ್ವಾತಂತ್ರ್ಯ ಪಡೆಯುವ ಸಂದರ್ಭದಲ್ಲಿ ದೇಶವನ್ನು ಒಡೆಯುವ ಕೆಲಸ ಆಗಿದೆ. ರಕ್ತ ಭೂಮಿಗೆ ಚಲ್ಲಿದ್ದಾರೆ. ಸ್ವಾತಂತ್ರ್ಯ ಸಮಯದಲ್ಲಿ ಪ್ರಾಣ ಹೋಯಿತು. ವಿಭಜನೆ ಸಮಯದಲ್ಲಿ ಪ್ರಾಣ ಹೋಯಿತು. ದೇಶ ಒಂದಾಗಿದ್ದರೆ ಇಂತಹ ಘಟನೆ ತಪ್ಪಿಸಬಹುದಿತ್ತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next