Advertisement

ಸಂಧಾನ ವಿಫ‌ಲ: ಕೋಲಾರ, ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಹೈಕಮಾಂಡ್‌ ಅಂಗಳಕ್ಕೆ

12:09 AM Mar 24, 2024 | Team Udayavani |

ಬೆಂಗಳೂರು: ಹಲವು ಕಾರಣಗಳಿಂದ ಬಾಕಿ ಉಳಿಸಿಕೊಂಡಿದ್ದ 4 ಲೋಕಸಭಾ ಕ್ಷೇತ್ರಗಳ ಪೈಕಿ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್‌ ಅಂತಿಮಗೊಳಿಸಲು ಶನಿವಾರ ನಡೆದ ರಾಜಿ ಸಂಧಾನ ಕೈಕೊಟ್ಟ ಹಿನ್ನೆಲೆಯಲ್ಲಿ ಈಗ ಅಂತಿಮವಾಗಿ ಟಿಕೆಟ್‌ ಅಂತಿಮಗೊಳಿಸುವ ವಿಷಯವನ್ನು ಕಾಂಗ್ರೆಸ್‌ ಹೈಕಮಾಂಡ್‌ ಅಂಗಳಕ್ಕೆ ತಳ್ಳಲಾಗಿದೆ.

Advertisement

ಕೋಲಾರದಿಂದ ಆಹಾರ ಸಚಿವ ಕೆ.ಎಚ್‌.ಮುನಿಯಪ್ಪ ಅವರು ತಮ್ಮ ಅಳಿಯ ಚಿಕ್ಕಪೆದ್ದಣ್ಣ ಪರವಾಗಿ ಲಾಬಿ ನಡೆಸುತ್ತಿದ್ದರೆ, ಮಾಜಿ ಸ್ಪೀಕರ್‌ ರಮೇಶ್‌ಕುಮಾರ್‌ ಬಣ ರಾಜ್ಯಸಭೆಯ ಮಾಜಿ ಸದಸ್ಯ ಡಾ| ಎಲ್‌.ಹನುಮಂತಯ್ಯ ಪರ ಬ್ಯಾಟಿಂಗ್‌ ನಡೆಸುತ್ತಿದೆ. ಈ ಎರಡು ಬಣಗಳನ್ನು ಒಟ್ಟಿಗೆ ಸೇರಿಸಿ ಟಿಕೆಟ್‌ ಅಂತಿಮಗೊಳಿಸಲು ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ನಡೆದ ರಾಜಿ ಸಂಧಾನ ಸಭೆ ಒಮ್ಮತಕ್ಕೆ ಬರಲು ವಿಫ‌ಲವಾಗಿದೆ.

ಕಾಂಗ್ರೆಸ್‌ ಪಕ್ಷ ಈಗಾಗಲೇ 24 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದ್ದು, ಅದರಲ್ಲಿ 16 ಕ್ಷೇತ್ರಗಳಲ್ಲಿ ಸಚಿವರ ಮಕ್ಕಳು, ಸಂಬಂಧಿಗಳಿಗೆ ಟಿಕೆಟ್‌ ದೊರೆತಿದೆ. ಅದೇ ಮಾನದಂಡದಡಿ ತಮ್ಮ ಅಳಿಯನಿಗೂ ಟಿಕೆಟ್‌ ಕೊಡಬೇಕೆಂದು ಮುನಿಯಪ್ಪ ಪಟ್ಟು ಹಿಡಿದಿದ್ದಾರೆ.

ಇತ್ತೀಚೆಗೆ ದಿಲ್ಲಿಯಲ್ಲೂ ನಡೆದ ಸಭೆಯಲ್ಲಿ ಒಮ್ಮತ ಮೂಡಿರಲಿಲ್ಲ. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ಅವರು ಹನುಮಂತಯ್ಯ ಅವರಿಗೆ ಟಿಕೆಟ್‌ ಕೊಡಬಹುದೆಂದು ತಮ್ಮ ಅಭಿಪ್ರಾಯ ಹೇಳಿ ಬೆಂಗಳೂರಿಗೆ ಮರಳಿದ್ದರು. ಆದರೆ ಮೊನ್ನೆ ಪ್ರಕಟಿಸಿದ ಪಟ್ಟಿಯಲ್ಲಿ ಕೋಲಾರ ಸಹಿತ 4 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ ನಡೆಯುವ ಕ್ಷೇತ್ರಗಳ ಉಸ್ತುವಾರಿ ಸಚಿವರು, ಶಾಸಕರು, ಅಭ್ಯರ್ಥಿಗಳ ಸಭೆ ಕರೆಯಲಾಗಿತ್ತು. ಅದೇ ಸಭೆಯಲ್ಲಿ ಪ್ರತ್ಯೇಕವಾಗಿ ಕೋಲಾರದ ಬಗ್ಗೆಯೂ ಸುದೀರ್ಘ‌ ಚರ್ಚೆ ನಡೆದರೂ ಉಭಯ ಬಣಗಳು ಪಟ್ಟು ಸಡಿಲಿಸಲಿಲ್ಲ.

ಚಿಕ್ಕಬಳ್ಳಾಪುರದ ವಿಷಯದಲ್ಲೂ ಕಗ್ಗಂಟು ಮುಂದುವರಿದಿದೆ. ಮಾಜಿ ಸಿಎಂ ಎಂ.ವೀರಪ್ಪ ಮೊಲಿ ತನಗೆ ಇದು ಕೊನೆಯ ಚುನಾವಣೆ, ಈ ಸಲ ಗೆಲ್ಲುವ ಅವಕಾಶವಿದ್ದು ಟಿಕೆಟ್‌ ಕೊಡಬೇಕೆಂದು ಹೈಕಮಾಂಡ್‌ ಹಂತದಲ್ಲಿ ಪ್ರಬಲ ಲಾಬಿ ನಡೆಸುತ್ತಿದ್ದಾರೆ. ಮತ್ತೂಂದೆಡೆ ಮಾಜಿ ಸಚಿವ ಎಂ.ಆರ್‌.ಸೀತಾರಾಂ ಪುತ್ರ ಹಾಗೂ ಯುವ ಕಾಂಗ್ರೆಸ್‌ ಮುಖಂಡ ರಕ್ಷಾ ರಾಮಯ್ಯ ಪರವಾಗಿ ಸಿಎಂ ಸಿದ್ದರಾಮಯ್ಯ ಸಹಿತ ರಾಜ್ಯದ ನಾಯಕರು ಪ್ರಬಲ ಬ್ಯಾಟಿಂಗ್‌ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next