Advertisement

ಪಕ್ಷ ನಿಷ್ಠರ ನಿರ್ಲಕ್ಷ್ಯ?

11:20 PM Aug 20, 2019 | Lakshmi GovindaRaj |

ಬೆಂಗಳೂರು: ಕರ್ನಾಟಕ ಬಿಜೆಪಿಯ ಭದ್ರ ಕೋಟೆಯಾಗಿರುವ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಶಾಸಕರಾದ ಎಸ್‌.ಅಂಗಾರ ಹಾಗೂ ಹಾಲಾಡಿ ಶ್ರೀನಿವಾಸ್‌ ಶೆಟ್ಟಿಯವರನ್ನು ಸಚಿವ ಸ್ಥಾನದಿಂದ ಹೊರಗಿಟ್ಟಿರುವುದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ಪಕ್ಷನಿಷ್ಠರನ್ನು ನಿರ್ಲಕ್ಷಿಸಲಾಗುತ್ತಿದೆ ಎಂಬ ಕೂಗುಗಳು ಕೇಳಿಬಂದಿದೆ.

Advertisement

ಉಡುಪಿ ಜಿಲ್ಲೆಯ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಐದನೇ ಬಾರಿ ಶಾಸಕರು. 2008ರಲ್ಲಿ ಮಂತ್ರಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿತ್ತು. ರಾಜಭವನಕ್ಕೂ ಹೋಗಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಹೆಸರು ಕೈತಪ್ಪಿತ್ತು. ಇದರಿಂದ ಬೇಸರಗೊಂಡು ಬಿಜೆಪಿ ಬಿಟ್ಟು, 2013ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಪ್ರಚಂಡ ಬಹುಮತದಿಂದ ಗೆದ್ದಿದ್ದರು.

2018ರ ವಿಧಾನಸಭೆ ಚುನಾವಣೆ ಮೊದಲು ಬಿಜೆಪಿಗೆ ಸೇರಿಕೊಂಡಿದ್ದರು. ಕುಂದಾಪುರ ಕ್ಷೇತ್ರದಿಂದ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ನೂತನ ಸಚಿವರ ಪಟ್ಟಿಯಲ್ಲಿ ಇವರ ಹೆಸರೇ ಇರಲಿಲ್ಲ. ಕರಾವಳಿ ಬಂಟ ಸಮುದಾಯದ ಪ್ರಭಾವಿ ನಾಯಕರೂ ಆಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಹೆಸರು ಸಚಿವ ಸ್ಥಾನದಿಂದ ಕೈಬಿಟ್ಟಿರುವುದಕ್ಕೆ ಅಸಮಾಧಾನ ಭುಗಿಲೆದ್ದಿದೆ.

ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಮೂರನೇ ಬಾರಿ ಶಾಸಕರು. ಪಕ್ಷ ಸಂಘಟನೆ ಹಾಗೂ ಯುವ ಸಂಘಟನೆಯಲ್ಲಿ ರಾಜ್ಯಮಟ್ಟದಲ್ಲಿ ಹೆಸರು ಮಾಡಿದವರು. ಕಾರ್ಕಳ ತಾಪಂ, ಜಿಪಂನಲ್ಲಿ ಬಿಜೆಪಿ ಕ್ಲೀನ್‌ ಸ್ಪೀಪ್‌ ಮಾಡಿಕೊಳ್ಳಲು ಸಾಕಷ್ಟು ಶ್ರಮಪಟ್ಟವರು. ಹಾಲಾಡಿ ಶ್ರೀನಿವಾಸ್‌ ಶೆಟ್ಟಿ ಅಥವಾ ಸುನಿಲ್‌ ಕುಮಾರ್‌ ಅವರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾತುಗಳಿದ್ದವು. ಆದರೆ ಈಗ ಅವೆಲ್ಲವೂ ಹುಸಿಯಾಗಿದೆ.

ಅಂಗಾರ ಅವರಿಗೆ ಅದೃಷ್ಟ ಕೈತಪ್ಪಿತೇ?: ಸುಳ್ಯ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಅಂಗಾರ ಆರನೇ ಬಾರಿ ಶಾಸಕರಾಗಿ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2008ರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತಾದರೂ, ಸಚಿವ ಸ್ಥಾನ ಸಿಕ್ಕಿರಲಿಲ್ಲ. ಈ ಬಾರಿಯೂ ಸಚಿವಸ್ಥಾನ ನೀಡದೇ ಇರುವುದಕ್ಕೆ ಸಾತ್ವಿಕವಾಗಿಯೇ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಉಳಿದಂತೆ ಈ ಬಾರಿ ಹರೀಶ್‌ ಪೂಂಜಾ, ವೇದವ್ಯಾಸ ಕಾಮತ್‌, ಡಾ.ಭರತ್‌ ಶೆಟ್ಟಿ, ಉಮಾನಾಥ್‌ ಕೋಟ್ಯಾನ್‌, ಸಂಜೀವ್‌ ಮಟ್ಟಂದೂರು ಮತ್ತು ಸಂತೋಷ್‌ ನಾಯ್ಕ ಮೊದಲ ಬಾರಿ ಶಾಸಕರಾಗಿದ್ದಾರೆ. ಸಂಘ ಪರಿವಾರದ ಸಂಘಟನೆ ಹಾಗೂ ಮೂಲ ಬಿಜೆಪಿಗರೇ ಆಗಿರುವ 9 ಪಕ್ಷ ನಿಷ್ಠ ಶಾಸಕರಲ್ಲಿ ಒಬ್ಬರಿಗೂ ಸಚಿವ ಸ್ಥಾನ ನೀಡದೇ ಇರುವುದು ರಾಜ್ಯ ಬಿಜೆಪಿ ನಾಯಕರ ವಿರುದ್ಧದ ಆಕ್ರೋಶಕ್ಕೆ ಕಾರಣವಾಗಿದೆ.

ಕೊಡಗಲ್ಲೂ ಅಸಮಾಧಾನ: ಕೊಡಗು ಬಿಜೆಪಿ ಭದ್ರಕೋಟೆ. ಇಲ್ಲಿರುವ ಎರಡು ಕ್ಷೇತ್ರದಲ್ಲೂ ಬಿಜೆಪಿಯ ಶಾಸಕರಿದ್ದು, ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಸದರಿದ್ದಾರೆ. ಕೆ.ಜಿ.ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್‌ ಜಿಲ್ಲೆಯ ಅನುಭವಿ ಶಾಸಕರಾಗಿದ್ದು, ಬಿಜೆಪಿಯನ್ನು ಸಂಘಟನಾತ್ಮಕವಾಗಿ ಬೆಳೆಸಿರುವ ಕೀರ್ತಿಯೂ ಇವರಿಗಿದೆ. ಆದರೆ, ಸಂಪುಟದ ವಿಸ್ತರಣೆ ಸಂದರ್ಭದಲ್ಲಿ ಇವರಿಬ್ಬರನ್ನು ಪರಿಗಣಿಸದಿರುವುದು ಜಿಲ್ಲೆಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಉತ್ತರ ಕನ್ನಡದಲ್ಲಿ ಅನುಭವಿಗಳಿಲ್ಲ?: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ನಾಲ್ವರು ಬಿಜೆಪಿ ಶಾಸಕರ ಪೈಕಿ ಮೂವರು ಹೊಸಬರು. ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಹಿರಿತದ ಆಧಾರದಲ್ಲಿ ಸ್ಪೀಕರ್‌ ಮಾಡಿಯಾಗಿದೆ. ಯಲ್ಲಾಪುರ ಶಾಸಕ ಶಿವರಾಮ್‌ ಹೆಬ್ಟಾರ್‌ ಅವರು ಕಾಂಗ್ರೆಸ್‌ ಬಿಟ್ಟಿರುವುದರಿಂದ ಅನರ್ಹ ಗೊಂಡಿದ್ದಾರೆ. ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದ್ದು, ಮುಂದೆ ಇವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next