ಕೊರಟಗೆರೆ: ಜಿಪಂ ಮತ್ತು ಗ್ರಾಪಂ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಕೊಚ್ಚಿಹೋದ ಕಾವರ್ಗಲ್ ಕಂಬದಹಳ್ಳಿ ಕೆರೆ.. ಕೆರೆಯ ಏರಿ ಒಡೆದು 25ಕ್ಕೂ ಅಧಿಕ ರೈತರ 40ಎಕರೆಗೂ ಅಧಿಕ ಬೆಳೆನಷ್ಟ.. ಅಂತರ್ಜಲ ಅಭಿವೃದ್ದಿ ಮತ್ತು ನೀರಾವರಿಗೆ ಸಹಕಾರಿ ಆಗಿದ್ದ ಕೆರೆಯ ನೀರು ಸಂಪೂರ್ಣ ಖಾಲಿ.. ಪ್ರಾಣಿಪಕ್ಷಿ ಮತ್ತು ಜಾನುವಾರುಗಳಿಗೆ ಆಸರೆಯಾಗಿದ್ದ ಕೆರೆಯಲ್ಲಿ ಈಗ ನೀರಿಲ್ಲದೇ ಬರಡು ಭೂಮಿಯಾಗಿ ರೈತರಿಗೆ ಮತ್ತೆ ಬರಗಾಲದ ಸಂಕಷ್ಟ ಎದುರಾಗಿದೆ.
ಕೊರಟಗೆರೆ ತಾಲೂಕು ಚನ್ನರಾಯನದುರ್ಗ ಹೋಬಳಿ ಜೆಟ್ಟಿಅಗ್ರಹಾರ ಗ್ರಾಪಂ ವ್ಯಾಪ್ತಿಯ ಕಾವರ್ಗಲ್ ಕಂಬದಹಳ್ಳಿ ಕೆರೆಯ ಏರಿಯಲ್ಲಿ ಮಂಗೆಬಿದ್ದು ಕೆರೆಯು ಹೊಡೆದು ಹೋಗಿದೆ. ಕೆರೆಯ ಏರಿಯ ಮೇಲೆ ಜಾಲಿ, ಬೇಲಿ ಮತ್ತು ಜಂಗಲ್ ಗಿಡಗಳ ಹಾವಳಿಯಿಂದ ಕೆರೆಯ ಏರಿಯೇ ಮುಚ್ಚಿಹೋಗಿದೆ. ಕೆರೆಯ ಎರಡು ಕಡೆಯ ತೋಬು ಶಿಥಿಲವಾಗಿ ಕೋಡಿಯು ಸಹ ಅವೈಜ್ಞಾನಿಕ ಆಗಿರುವ ಪರಿಣಾಮವೇ ಕೆರೆಗೆ ಹಾನಿ ಉಂಟಾಗಿದೆ.
ಕಾವರ್ಗಲ್ ಕಂಬದಹಳ್ಳಿ ಕೆರೆಯ ಏರಿಯಲ್ಲಿ ಕಳೆದ ೨೦ದಿನದ ಹಿಂದೆಯು ಬಿರುಕು ಕಾಣಿಸಿಕೊಂಡಿದೆ. ಸ್ಥಳೀಯ ರೈತರು ಜಿಪಂ ಮತ್ತು ಗ್ರಾಪಂಗೆ ಕೆರೆಯ ಹಾನಿಯ ಬಗ್ಗೆ ಮಾಹಿತಿ ನೀಡಿದ್ರು ಸಹ ಅಧಿಕಾರಿವರ್ಗ ಕಚೇರಿಯನ್ನು ಬಿಟ್ಟು ಸ್ಥಳಕ್ಕೆ ಹೋಗುವಲ್ಲಿ ವಿಳಂಬ ಮತ್ತು ನಿರ್ಲಕ್ಷ ಮಾಡಿರುವ ಪರಿಣಾಮವೇ ಕೆರೆಯ ಕೋಡಿಹೊಡೆದು ರೈತರು ಬೆಳೆದಿರುವ ಅಡಿಕೆ, ತೆಂಗು, ಬಾಳೆ, ಗದ್ದೆ, ಹೂವು ನಾಶವಾಗಿ ಕೊಳವೆ ಬಾವಿಗಳಿಗೆ ಹಾನಿಯಾಗಿವೆ.
ಎಚ್ಚೆತ್ತುಕೊಳ್ಳದ ಗ್ರಾಪಂ..
24 ಗ್ರಾಪಂಗಳ 82 ಕೆರೆಗಳ ನರೇಗಾ ಅನುಧಾನ ಬಳಕೆಗೆ 24 ಗ್ರಾಪಂ ಗಳ 20ಕೆರೆಗಳಿಗೆ ತುರ್ತು ನಿರ್ವಹಣೆ ಅಗತ್ಯದ ಮಾಹಿತಿ ಲಭ್ಯವಿದ್ದರೂ ಸಹ ಜಿಪಂ ಮತ್ತು ಗ್ರಾಪಂಯ ಅಧಿಕಾರಿವರ್ಗ ಪರಿಶೀಲನೆ ನಡೆಸದೇ ನಿರ್ಲಕ್ಷ ವಹಿಸಿದ ಪರಿಣಾಮವೇ ಈಗ ಕಂಬದಹಳ್ಳಿ ಕೆರೆಯು ಬಲಿಯಾಗಿದೆ.
Related Articles
24 ಗ್ರಾಪಂಗಳ 82 ಕೆರೆಗಳಿಗೂ ಆಪತ್ತು..
24 ಗ್ರಾಪಂಗಳ 82 ಕೆರೆಗಳಿಗೆ ಈಗಾಗಲೇ ಸಂಕಷ್ಟ ಎದುರಾಗಿದೆ. ಕೆರೆಗಳ ತೋಬು, ಕೋಡಿ ಮತ್ತು ಏರಿಗಳು ಸಂಪೂರ್ಣವಾಗಿ ಶಿಥಿಲವಾಗಿವೆ. ಕೆರೆಗಳ ಮೇಲೆ ಜಾಲಿಗಿಡ ಮತ್ತು ಜಂಗಲ್ ಬೆಳೆದು ಏರಿಗಳು ಬಿರುಕುಬಿಟ್ಟಿವೆ. 20 ವರ್ಷಗಳಿಂದ ಮಳೆಯಿಲ್ಲದೇ ಅಭಿವೃದ್ದಿ ಮತ್ತು ನಿರ್ವಹಣೆ ಇಲ್ಲದ ಪರಿಣಾಮ ಅರ್ಧದಷ್ಟು ಕೆರೆಗಳು ಒತ್ತುವರಿಗೆ ಬಲಿಯಾಗಿ ಗ್ರಾಪಂಗಳ ಅಧಿಕಾರಿಗಳಿಗೆ ಪ್ರಾಣಸಂಕಟ ಎದುರಾಗಿದೆ.
ಕಾಡಿನ ಪ್ರಾಣಿಪಕ್ಷಿ ಮತ್ತು ಜಾನುವಾರುಗಳ ಆಸರೆಯಾಗಿದ್ದ ಕೆರೆಯಲ್ಲಿನ ನೀರು ಖಾಲಿಯಾಗಿದೆ. ಕೃಷಿಭೂಮಿ ಮತ್ತು ಅಡಿಕೆತೋಟ ನಾಶವಾಗಿ ರೈತರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ೧೫ದಿನದ ಹಿಂದೆಯೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರು ಪರಿಶೀಲನೆ ನಡೆಸಿಲ್ಲ. ಕೊರಟಗೆರೆಯ ಸಾಕಷ್ಟು ಕೆರೆಗಳು ಅಪಾಯದ ಹಂಚಿನಲ್ಲಿವೆ. ಜಿಪಂ ಮತ್ತು ಗ್ರಾಪಂಯ ಅಧಿಕಾರಿವರ್ಗ ಕಚೇರಿಬಿಟ್ಟು ಗ್ರಾಮೀಣ ಕೆರೆಗಳ ಪರಿಸ್ಥಿತಿ ಆಲಿಸಬೇಕಿದೆ.
– ದಾಳಿನರಸಿಂಹ. ಸ್ಥಳೀಯ ರೈತ. ಕಂಬದಹಳ್ಳಿ
೫೦ಎಕರೆ ಜಮೀನು ಜಲಾವೃತವಾಗಿ ೨೫ಎಕರೇಗೂ ಅಧಿಕ ಬೆಳೆನಷ್ಟ ಆಗಿದೆ. ಕೆರೆಗಳ ನಿರ್ಮಾಣಕ್ಕೆ ನೀಡಿದಷ್ಟು ಆಧ್ಯತೆ ನಿರ್ವಹಣೆಗೆ ನೀಡಬೇಕಿದೆ. ಕೊರಟಗೆರೆ ಕ್ಷೇತ್ರಗಳ ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ದಿಗೆ ಅನುದಾನ ನೀಡುವಂತೆ ಸರಕಾರಕ್ಕೆ ಪತ್ರ ಬರೆಯುತ್ತೇನೆ. ರೈತರಿಗೆ ಬೆಳೆನಷ್ಟದ ಪರಿಹಾರ ನೀಡುವಂತೆ ತುಮಕೂರು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ.
-ಅನಿಲ್‌ಕುಮಾರ್. ನಿವೃತ್ತ ಐಎಎಸ್ ಅಧಿಕಾರಿ. ಕೊರಟಗೆರೆ
ಕೊರಟಗೆರೆಯ 24 ಗ್ರಾಪಂಗಳ 82 ಕೆರೆಗಳ ಸಮಸ್ಯೆಯ ಬಗ್ಗೆ ಗ್ರಾಪಂ ಪಿಡಿಓಗಳಿಂದ ಮಾಹಿತಿ ಪಡೆಯುತ್ತೇನೆ. ತುರ್ತು ಕೆಲಸ ಅಗತ್ಯವಿದ್ದರೇ ತಕ್ಷಣ ಕ್ರಮಕ್ಕೆ ಸೂಚಿಸುತ್ತೇನೆ. ಕಂಬದಹಳ್ಳಿ ಕೆರೆಯ ಪುನಶ್ಚೇತನ ಮತ್ತು ಅಭಿವೃದ್ದಿಗೆ ಈಗಾಗಲೇ ಸರಕಾರದ ಗಮನಕ್ಕೆ ತರಲಾಗಿದೆ. ಗ್ರಾಪಂ ವ್ಯಾಪ್ತಿಯ ಕೆರೆಗಳ ನಿರ್ವಹಣೆಗೆ ಸರಕಾರದ ಅನುಧಾನ ಅಗತ್ಯವಾಗಿ ಅವಶ್ಯಕತೆ ಇದೆ.
ಡಾ.ವಿದ್ಯಾಕುಮಾರಿ. ಜಿಪಂ ಸಿಇಓ. ತುಮಕೂರು
ಸಿದ್ದರಾಜು. ಕೆ ಕೊರಟಗೆರೆ