ಬೆಂಗಳೂರು: ಮನುಷ್ಯನ ಉದಾಸೀನತೆಯಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದ್ದು, ಭವಿಷ್ಯದ ದೃಷ್ಟಿಯಿಂದ ಯುವ ಸಮುದಾಯ ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದು ಬೆಂಗಳೂರು ಪರಿಸರ ಟ್ರಸ್ಟ್‌ನ ಅಧ್ಯಕ್ಷರಾದ ಪರಿಸರತಜ್ಞ ಡಾ.ಯಲ್ಲಪ್ಪರೆಡ್ಡಿ ಅಭಿಪ್ರಾಯಪಟ್ಟರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಮತ್ತು ಬೆಂಗಳೂರು ಪರಿಸರ ಟ್ರಸ್ಟ್, ಭಾನುವಾರ ಗಾಂಧಿ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಲಿವಿಂಗ್ ಇನ್ ದಿ ಪ್ರಸೆಂಟ್’ ಪುಸ್ತಕ ಬಿಡುಗಡೆಗೊಳಿಸಿದ ಅವರು “ಬೆಂಗಳೂರು ಪರಿಸರ ಮತ್ತು ನಾಗರಿಕರ ಸವಾಲುಗಳು’ ವಿಷಯದ ಮೇಲೆ ಬೆಳಕು ಚೆಲ್ಲಿದರು.
ಅಭಿವೃದ್ಧಿ ಹೆಸರಿನಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದ್ದು, ಈ ಬಗ್ಗೆ ಬೆಂಗಳೂರು ನಿವಾಸಿಗಳು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಂದು ಗಿಡ- ಮರಗಳಲ್ಲೂ ದೇವರನ್ನು ಕಾಣುವುದನ್ನು ರೂಢಿಸಿಕೊಳ್ಳಬೇಕು. ಮನುಷ್ಯರು ಕೂಡ ಪರಿಸರದ ಫಲ ಎಂಬ ಸತ್ಯ ಮೊದಲು ಅರಿವಿಗೆ ಬರಬೇಕು ಎಂದರು.
ದೇವರನ್ನು ಭಕ್ತಿಯಿಂದ ಪೂಜಿಸುವಂತೆ ಗಿಡ, ಮರಗಳನ್ನು ಪೂಜಿಸಿದರೆ ಆರೋಗ್ಯ, ನೆಮ್ಮದಿ ಸಿಗುತ್ತದೆ. ಪ್ರಕೃತಿಯಲ್ಲೂ ಆಧ್ಯಾತ್ಮಿಕ ಶಕ್ತಿಯಿದ್ದು, ಅದನ್ನು ಗ್ರಹಿಸಬೇಕು. ಪರಿಸರ ಉಳಿವಿಗಾಗಿ ನಗರ ನಿವಾಸಿಗಳು ಕೂಡ ತಮ್ಮದೇ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಅನಾದಿ ಕಾಲದಿಂದಲೂ ಭಾರತೀಯರು, ಪರಿಸರವನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಆದರೆ, ಈಗ ಅಭಿವೃದ್ಧಿ ಹೆಸರಿನಲ್ಲಿ ನದಿ, ಪರ್ವತಗಳು ಸೇರಿ ಇಡೀ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ ಎಂದು ದೂರಿದರು.
ಅಭಿವೃದ್ಧಿ ಮತ್ತು ತಂತ್ರಜ್ಞಾನ ಅನಿವಾರ್ಯವಾದಾಗ ಪರಿಸರಕ್ಕೆ ಹಾನಿಯುಂಟು ಮಾಡುವಂತಹ ಘಟನೆಗಳು ನಡೆಯುತ್ತವೆ. ಮನುಷ್ಯನ ಲೋಭವು ಎಲ್ಲದ್ದಕ್ಕಿಂತ ದೊಡ್ಡ ಮಾಲಿನ್ಯವಾಗಿದ್ದು, ಮನಸ್ಸನ್ನು ನಕಾರಾತ್ಮಕ ಭಾವನೆಗಳಿಂದ ದೂರಗೊಳಿಸಿ, ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳುವುದನ್ನು ಕಲಿಯಬೇಕಾದ ಅಗತ್ಯವಿದೆ ಎಂದು ಹೇಳಿದರು.
ನಿಮ್ಹಾನ್ಸ್ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್, ರಾಮಯ್ಯ ವೈದ್ಯಕೀಯ ಕಾಲೇಜಿನ ಡಾ.ಎ.ಆರ್. ಸೋಮಶೇಖರ್, ಪರಿಸರ ತಜ್ಞ ಡಾ.ಎಚ್.ಪರಮೇಶ್, ಸುವರ್ಣಮುಖೀ ಆಶ್ರಮದ ಡಾ.ನಾಗರಾಜು, ನಿವೃತ್ತ ಐಎಎಸ್ ಅಧಿಕಾರಿ ಡಾ.ಬಾಬೂರಾವ್ ಮುಡಬಿ ಮತ್ತಿತರರು ಉಪಸ್ಥಿತರಿದ್ದರು.