Advertisement

ಮಧುಮೇಹ ನಿವಾರಣೆಗೆ ಮಹಿಳೆಯರ ನಿರ್ಲಕ್ಷ್ಯ

11:36 AM Nov 15, 2017 | |

ಬೆಂಗಳೂರು: ಮಧುಮೇಹ ಒಂದು ಗಂಭೀರ ಆರೋಗ್ಯ ಸಮಸ್ಯೆ ಅದನ್ನು ಉತ್ತಮ ಜೀವನ ಶೈಲಿಯಿಂದ ನಿವಾರಿಸಬಹುದು ಎಂದು ನಗರದ ಶೇ. 70ರಷ್ಟು ಜನ ಹೇಳುತ್ತಾರೆ. ಹೀಗಿದ್ದರೂ ಶೇ. 65ರಷ್ಟು ಮಂದಿ ಅದರ ನಿಯಂತ್ರಣಕ್ಕೆ ಅವಶ್ಯವಿರುವ ವ್ಯಾಯಾಮವನ್ನೇ ಮಾಡುತ್ತಿಲ್ಲ.

Advertisement

ಮಂಗಳವಾರ ವಿಶ್ವ ಮಧುಮೇಹ ದಿನ. ಈ ವರ್ಷದ ಮಧುಮೇಹ ದಿನವನ್ನು “ಮಹಿಳೆ ಮತ್ತು ಮಧುಮೇಹ, ಆರೋಗ್ಯಕರ ಭವಿಷ್ಯ ನಮ್ಮ ಹಕ್ಕು’ ಎಂಬ ವಿಷಯದಡಿ ವಿಶ್ವಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನೊವೋ ನಾರ್ಡಿಸ್ಕ್ ಇಂಡಿಯಾ ಎಂಬ ಮಧುಮೇಹ ಆರೈಕೆ ಕಂಪನಿ ಬೆಂಗಳೂರು ಸೇರಿದಂತೆ ದೇಶದ 14 ಮಹಾನಗರಗಳ ಮಹಿಳೆಯರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಹೊರಬಂದಿದೆ.

ವಿಕಾಸಸೌಧದಲ್ಲಿ ಮಂಗಳವಾರ ಈ ಕುರಿತ ವರದಿ ಬಿಡುಗಡೆ ಮಾಡಲಾಗಿದ್ದು, ನೊವೋ ನಾರ್ಡಿಸ್ಕ್ ಇಂಡಿಯಾ ಸಂಸ್ಥೆಯ ವೈದ್ಯೆ ಡಾ.ಭಾರತಿ ಈ ಕುರಿತು ಮಾಹಿತಿ ನೀಡಿದರು. ನಗರ ಪ್ರದೇಶಗಳ 15ರಿಂದ 55 ವರ್ಷಗದೊಳಗಿನ 1055 ಮಹಿಳೆಯರ ಸಮೀಕ್ಷೆ ಮಾಡಲಾಗಿದೆ.

ಅವರಿಗೆ ಮಧುಮೇಹ ಸಮಸ್ಯೆ ಮತ್ತು ಅದಕ್ಕೆ ಕಾರಣಗಳ ಅರಿವಿದ್ದರೂ ಸಮಸ್ಯೆ ನಿವಾರಿಸಲು ಅವಶ್ಯಕವಿರುವ ಕ್ರಮಗಳನ್ನು ಅನುಸರಿಸುತ್ತಿಲ್ಲ. ಅದೇರೀತಿ ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಮತ್ತು ಅದರಿಂದ ಆಗುವ ಸಮಸ್ಯೆಗಳ ಬಗ್ಗೆ ಶೇ. 73ರಷ್ಟು ಮಹಿಳೆಯರಿಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದರು.

ಡಾ.ಶೈಲಾ ಭಟ್ಟಾಚಾರ್ಯ ಮಾತನಾಡಿ, ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಭಾರತದಲ್ಲಿ 7.21 ಕೋಟಿ ಜನ ಮಧುಮೇಹಿಗಳಿದ್ದಾರೆ. ಮಧುಮೇಹಕ್ಕೆ ಜಾಗೃತಿಗೆ ಆದ್ಯತೆ ನೀಡದೇ ಇದ್ದಲ್ಲಿ 2045ರ ವೇಳೆಗೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 13 ಕೋಟಿ ದಾಟಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.

Advertisement

ಇದೇವೇಳೆ ಚೇಂಜಿಂಗ್‌ ಡಯಾಬಿಟೀಸ್‌ ರಾಯಭಾರಿ, ಹಿರಿಯ ಕ್ರಿಕೆಟಿಗ ಅನಿಲ್‌ ಕುಂಬ್ಳೆ ಅವರು ಮಧುಮೇಹ ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಮತ್ತು ಅದರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ನೋವೋ ನಾರ್ಡಿಸ್ಕ್ ಇಂಡಿಯಾದ ಆಡಳಿತ ಟ್ರಸ್ಟಿ ಮೆಲ್ವಿನ್‌ ಡಿಸೋಜ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಿ.ಮಂಜೇಗೌಡ ಇತರರಿದ್ದರು.

ಜಾಗೃತಿ ಅಭಿಯಾನ, ತಪಾಸಣೆ: ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ಸಚಿವಾಲಯ ನೌಕರರ ಸಂಘ ಮತ್ತು ನೊವೋ ನಾರ್ಡಿಸ್ಕ್ ಇಂಡಿಯಾ ಸಹಯೋಗದಲ್ಲಿ ಸಚಿವಾಲಯ ನೌಕರರಿಗೆ ವಿಕಾಸಸೌಧದಲ್ಲಿ ಜಾಗೃತಿ ಅಭಿಯಾನ ಮತ್ತು ಮಧುಮೇಹ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next