Advertisement

ನೀರಿನ ಸಮಸ್ಯೆ ನಿವಾರಣೆಯಲ್ಲಿ ನಿರ್ಲಕ್ಷ್ಯ

03:52 PM Jun 10, 2019 | Team Udayavani |

ಕೋಲಾರ: ನೀರಿನ ಸಮಸ್ಯೆ ನಿವಾರಿಸುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯ ಖಂಡಿಸಿ ಜಯನಗರದ 14ನೇ ವಾರ್ಡ್‌ನ ನಾಗರಿಕರು ಬುಧವಾರ ಬೆಳಗ್ಗೆ 10 ಗಂಟೆಗೆ ಟೇಕಲ್ ರಸ್ತೆಯ ಸಫಲಮ್ಮ ದೇಗುಲದ ಮುಂದೆ ರಸ್ತೆ ತಡೆ ನಡೆಸಲು ತೀರ್ಮಾನ ಕೈಗೊಂಡರು.

Advertisement

ಸಫಲಮ್ಮ ದೇವಾಲಯದ ಆವರಣದಲ್ಲಿ ಭಾನುವಾರ ಬೆಳಗ್ಗೆ ಕರೆಯಲಾಗಿದ್ದ ಈ ಭಾಗದ ನಾಗರಿಕರ ಸಭೆಯಲ್ಲಿ ಹೋರಾಟ ನಡೆಸಲು ಒಮ್ಮತದ ನಿರ್ಣಯ ಅಂಗೀಕರಿಸಲಾಯಿತು.

ನಾಗರಿಕ ಸಮಿತಿ ಅಧ್ಯಕ್ಷ ಎನ್‌.ಗೋವಿಂದಪ್ಪ, ಕಾರ್ಯದರ್ಶಿ ಪ್ರಮೋದ್‌ಕುಮಾರ್‌ ಮಾತನಾಡಿ, ಈ ಭಾಗದ ಜನತೆ ಸತತ ಆರು ತಿಂಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ, ಕೊಳಾಯಿಗಳ ಮೂಲಕ ನೀರು ಬರೋದಿಲ್ಲ, ಟ್ಯಾಂಕರ್‌ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಈಗಾಗಲೇ ನಾಲ್ಕಾರು ಬಾರಿ ನಗರಸಭೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.

ಪಂಪ್‌ಸೆಟ್ ನೀಡದೇ ನಿರ್ಲಕ್ಷ್ಯ: ನಿಕಟಪೂರ್ವ ನಗರಸಭಾ ಸದಸ್ಯ ಎಸ್‌.ಆರ್‌.ಮುರಳಿಗೌಡ, ನಮ್ಮ ವಾರ್ಡ್‌ಗೆ ನೀರು ಪೂರೈಕೆ ಮಾಡುವ ಕೊಳವೆ ಬಾವಿಗಳ ಪಂಪ್‌ ಮೋಟಾರ್‌ ಕೆಟ್ಟಿದ್ದರೂ ಸರಿಪಡಿಸದೇ ನಿರ್ಲಕ್ಷ್ಯ ತೋರಿದ್ದಾರೆ. ತಮ್ಮ ಅಧಿಕಾರ ಹೋಗಿ ಆಡಳಿತಾಧಿಕಾರಿ ನೇಮಕವಾದ ನಂತರ ನಮ್ಮ ಮಾತನ್ನು ಕೇಳುತ್ತಿಲ್ಲ ಎಂದರು.

Advertisement

ಕೊಳವೆ ಬಾವಿಗಳಲ್ಲಿ ನೀರಿದ್ದರೂ, ಸರಬರಾಜು ಆಗುತ್ತಿಲ್ಲ, ಪಂಪ್‌ಹೌಸ್‌ ನಿರ್ವಹಣೆಗೆ ಓರ್ವ ನಿರ್ವಾಹಕನ ನೇಮಕಕ್ಕೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಈಗ ಕೇವಲ ಬೆಳಗ್ಗಿನ ಹೊತ್ತು ಮಾತ್ರ ಸಿಬ್ಬಂದಿ ನೇಮಕ ಮಾಡಿದ್ದಾರೆ. ರಾತ್ರಿ ಹೊತ್ತು ನೀರೆತ್ತಲು ಸಾಧ್ಯವಾಗುತ್ತಿಲ್ಲ ಎಂದರು.

ಜನತೆಯೂ ನೀರಿನ ಮಿತ ಬಳಕೆ ಮತ್ತು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆಯಲು ಕ್ರಮ ವಹಿಸಬೇಕು, ನೀರಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ತಾವು ಭಾಗವಹಿಸುವುದಾಗಿ ತಿಳಿಸಿದರು.

ಈ ಭಾಗದ ಮುಖಂಡರಾದ ಗಿರೀಶ್‌, ಶ್ರೀನಿವಾಸ್‌, ಮಾರ್ಕೋಂಡಪ್ಪ, ಶಿವಣ್ಣ, ಶ್ರೀರಾಮಪ್ಪ ಮಾತನಾಡಿ, ಈ ಭಾಗದ ಜನತೆ ಸಮರ್ಪಕವಾಗಿ ನಗರಸಭೆಗೆ ತೆರಿಗೆ ಪಾವತಿಸುತ್ತಿದ್ದಾರೆ, ಆದರೂ ಇಂತಹ ಅನ್ಯಾಯ ಸರಿಯೇ ಎಂದು ಪ್ರಶ್ನಿಸಿದರು. ನಗರಸಭೆ ಅಧಿಕಾರಿಗಳ ಈ ಧೋರಣೆಯಿಂದಾಗಿ ಖಾಸಗಿ ಟ್ಯಾಂಕರ್‌ಗಳನ್ನೇ ಅವಲಂಬಿಸಬೇಕಾಗಿದ್ದು, ಸಮಸ್ಯೆ ನಿವಾರಣೆಯಾಗುವವರೆಗೂ ಉಗ್ರ ಹೋರಾಟ ನಡೆಸಲು ತೀರ್ಮಾನ ಕೈಗೊಳ್ಳಿ ಎಂದು ಆಗ್ರಹಿಸಿದರು.

ಸೇರಿದ್ದ ನೂರಾರು ಮಂದಿ ನಾಗರಿಕರು, ಮಹಿಳೆಯರು ಬುಧವಾರ ಸಫಲಮ್ಮ ದೇವಾಲಯದ ಮುಂದೆ ಟೇಕಲ್ ರಸ್ತೆ ಬಂದ್‌ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡೋಣ, ನ್ಯಾಯ ಸಿಗದಿದ್ದರೆ ಹೋರಾಟ ತೀವ್ರಗೊಳಿಸೋಣ ಎಂದು ಒಮ್ಮತದ ತೀರ್ಮಾನ ಕೈಗೊಂಡರು.ಸಭೆಯಲ್ಲಿ ಈ ಭಾಗದ ಮುಖಂಡರಾದ ನಿವೃತ್ತ ಪೋಸ್ಟ್‌ ಮಾಸ್ಟರ್‌ ಶ್ರೀರಾಮಪ್ಪ, ಎಸ್‌.ಮನೋರವಿಕುಮಾರ್‌, ಮಂಜುನಾಥರೆಡ್ಡಿ, ನಾಗರಾಜ್‌, ವೆಂಕಟಕೃಷ್ಣ, ಕೃಷ್ಣೇಗೌಡ, ಪರಮೇಶ್‌, ರಾಜಗೋಪಾಲ್, ಶ್ರೀನಿವಾಸ್‌, ಗಿರೀಶ್‌, ವೆಂಕಟೇಶಪ್ಪ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next