ಮದ್ದೂರು: ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳದ ಸ್ಥಳೀಯ ಶಾಸಕರು ಹಾಗೂ ಗ್ರಾ.ಪಂ. ಆಡಳಿತದ ವಿರುದ್ಧ ಕೊಪ್ಪ ಗ್ರಾಮ ದಲ್ಲಿ ಸ್ಥಳೀಯರು ಕೆಸರು ತುಂಬಿದ ರಸ್ತೆಯಲ್ಲಿ ಭತ್ತದ ನಾಟಿ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಹೋಬಳಿ ಕೇಂದ್ರ ಕೊಪ್ಪ ಗ್ರಾಮದ ಸಂತೆ ಮೈದಾನದ ಬಳಿ ಹಾದುಹೋಗಿರುವ ಮುಖ್ಯರಸ್ತೆಯು ಕಳೆದ ವರ್ಷದಿಂದೀಚೆಗೆ ಕಿತ್ತು ನಿಂತಿದ್ದು, ಮಳೆ ಸುರಿದ ಹಿನ್ನೆಲೆಯಲ್ಲಿ ಕೆಸರುಗದ್ದೆಯಂತಾಗಿ ಸಂಚಾರಕ್ಕೆ ತೊಡಕುಂಟಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೊಪ್ಪ ಗ್ರಾಪಂ ಕಚೇರಿ ಬಳಿ ಜಮಾಯಿಸಿದ ಸ್ಥಳೀಯರು ಆಡಳಿತ ಮಂಡಳಿ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಕೂಡಲೇ ರಸ್ತೆ ದುರಸ್ತಿಗೊಳಿಸುವಂತೆ ಒತ್ತಾಯಿಸಿದರು.ಸದರಿ ರಸ್ತೆಯಲ್ಲಿ ಸಂತೆ ಮೈದಾನ, ಶುದ್ಧ ಕುಡಿಯುವ ನೀರಿನ ಘಟಕ, ದೇವಾಲಯ, ಗ್ರಾಪಂ ಕಚೇರಿ ಪೊಲೀಸ್ ಠಾಣೆ ಸೇರಿದಂತೆ ನಿತ್ಯ ಸಾವಿರಾರು ಮಂದಿ ಸಂಚರಿಸುವ ಪ್ರಮುಖ ರಸ್ತೆಯಾಗಿದ್ದು, ಪಿಡಿಒಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯ ವಹಿಸಿದ್ದಾರೆಂದು ದೂರಿದರು.
ಸ್ಥಳೀಯ ಗ್ರಾಪಂ ಕಚೇರಿಗೆ ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು ಬಂದು ಹೋಗುತ್ತಿದ್ದು ಕಚೇರಿ ಆವರಣದಲ್ಲಿ ಅಶುಚಿತ್ವ ತಾಂಡವವಾಡುವ ಜತೆಗೆ ವಿಷ ಜಂತುಗಳ ವಾಸಸ್ಥಾನವಾಗಿ ನಿರ್ಮಾಣಗೊಂಡಿದ್ದರೂ ಚುನಾಯಿತ ಪ್ರತಿನಿಧಿಗಳು ಇತ್ತ ಗಮನಹರಿಸದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ರಸ್ತೆ ದುರಸ್ತಿಗೊಳಿಸುವ ಜತೆಗೆ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡದಿದ್ದಲ್ಲಿ ಗ್ರಾಪಂ ಕಚೇರಿ ಬಳಿ ನಿರಂತರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆ ವೇಳೆ ಮುಖಂಡರಾದ ಕುಮಾರ್, ಪ್ರವೀಣ್, ನವೀನ್, ನಾಗೇಶ್, ರಾಘವಾ, ವೆಂಕಟೇಶ್, ಲಿಂಗೇಗೌಡ ನೇತೃತ್ವ ವಹಿಸಿದ್ದರು.