ಸಾಗರ: ಕಾಗೋಡು ಸತ್ಯಾಗ್ರಹ ರೂವಾರಿ ಡಾ. ಎಚ್.ಗಣಪತಿಯಪ್ಪ ಅವರ ಹೋರಾಟದ ಬದುಕು, ಕಾಗೋಡು ಚಳುವಳಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಏ. 18 ರಂದು ಬೆಳಿಗ್ಗೆ 10-30ಕ್ಕೆ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಭೂಮಿ ಹಕ್ಕಿಗಾಗಿ ನಡೆದ ರೈತ ಚಳುವಳಿಯ 71ರ ನೆನಪು ಹಾಗೂ ನೇಗಿಲಯೋಗಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಎಚ್.ಗಣಪತಿಯಪ್ಪ ಸೇವಾ ಟ್ರಸ್ಟ್ ಅಧ್ಯಕ್ಷ ಉಮೇಶ್ ಹಿರೇನೆಲ್ಲೂರು ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಟ್ರಸ್ಟ್, ತಾಲ್ಲೂಕು ರೈತ ಸಂಘ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ಸಾಲಿನ ಡಾ. ಎಚ್.ಗಣಪತಿಯಪ್ಪ ನೇಗಿಲಯೋಗಿ ಪ್ರಶಸ್ತಿಯನ್ನು ಹಿರಿಯ ಸಾಹಿತಿ ವಿಷ್ಣುನಾಯ್ಕ್ ಅಂಕೋಲ ಅವರಿಗೆ ಪ್ರದಾನ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮವನ್ನು ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಉದ್ಘಾಟಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮಾಜಿ ಶಾಸಕ ಬಿ. ಸ್ವಾಮಿರಾವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶೃಂಗೇರಿ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ, ರೈತ ಸಂಘದ ಅಧ್ಯಕ್ಷ ದಿನೇಶ್ ಸಿರವಾಳ, ಸಂಚಾಲಕ ರಮೇಶ್ ಕೆಳದಿ, ಬಿ.ಡಿ.ರವಿಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.
ಕಾಗೋಡು ಸತ್ಯಾಗ್ರಹ ರೂವಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಗಣಪತಿಯಪ್ಪ ಅವರ ಹೋರಾಟದ ಬದುಕು ಜನಮಾನದಿಂದ ದೂರವಾಗಬಾರದು. ಈ ನಿಟ್ಟಿನಲ್ಲಿ ಟ್ರಸ್ಟ್ ಕಾಗೋಡು ಚಳುವಳಿಗೆ ಅಂಕುರಾರ್ಪಣೆ ಮಾಡಿದ ಏಪ್ರಿಲ್ 18ರಂದು ಪ್ರತಿವರ್ಷ ಬೇರೆಬೇರೆ ಕಾರ್ಯಕ್ರಮ ಮಾಡಿಕೊಂಡು ಬರುತ್ತಿದೆ. ಕಳೆದ ವರ್ಷ ದೊಡ್ಡೇರಿ ಈರಪ್ಪ ಮಂಡಗಳಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಈ ಬಾರಿ ವಿಷ್ಣುನಾಯ್ಕ್ ಅವರನ್ನು ಗುರುತಿಸಲಾಗಿದೆ. ಗಣಪತಿಯಪ್ಪ ಅವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಿಸಬೇಕು. ಸಾಗರದ ಪ್ರಮುಖ ರಸ್ತೆಗೆ ಅವರ ಹೆಸರು ನಾಮಕರಣ ಮಾಡಬೇಕು ಮತ್ತು ಅವರ ಹೋರಾಟದ ಬದುಕು ನೆನಪಿಸುವ ವಸ್ತುಪ್ರದರ್ಶನ ಸೇರಿದಂತೆ ಇನ್ನಿತರ ಚಟುವಟಿಕೆಗಾಗಿ ಸರ್ಕಾರ ಐದು ಎಕರೆ ಜಮೀನು ಮಂಜೂರು ಮಾಡಬೇಕು ಎಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ಹೊಯ್ಸಳ ಗಣಪತಿಯಪ್ಪ, ರಮೇಶ್ ಕೆಳದಿ, ಶಿವಪ್ಪ ಹಾಜರಿದ್ದರು.