Advertisement
ಕಡೇ ಕ್ಷಣದ ತಯಾರಿ ಮಾಡಲು ಹೋಗಬೇಡಿ:
Related Articles
Advertisement
ಕಡೇ ಕ್ಷಣದ ತಯಾರಿ ಬೇಡ: ಪ್ರತಿಯೊಬ್ಬ ನೀಟ್ ಬರೆಯುವ ಆಕಾಂಕ್ಷಿಗೆ ಹೇಳುವುದಿಷ್ಟೇ; ಕಡೇ ಕ್ಷಣದ ತಯಾರಿಯಿಂದ ರ್‍ಯಾಂಕ್ ಬರಲು ಸಾಧ್ಯವೇ ಇಲ್ಲ. ಮೊದಲ ದಿನದಿಂದಲೇ ಓದಲು ಶುರು ಮಾಡಬೇಕು. ಕ್ಲಾಸ್‌ನಲ್ಲಿ ಕಲಿಯುವ ಜತೆಜತೆಗೆ
ಕಲಿತದ್ದನ್ನು ಪುನರ್‌ಮನನ ಮಾಡಿಕೊಳ್ಳಬೇಕು. ಅಲ್ಲದೆ, ಪುಟ್ಟದಾಗಿ ನೋಟ್ಸ್ ಗಳನ್ನೂ ಮಾಡಿಕೊಳ್ಳಬೇಕು ಎಂದು ತನಿಷ್ಕಾ ಹೇಳುತ್ತಾರೆ.
ಏಮ್ಸ್ ಗುರಿ: ನಾನು ದಿಲ್ಲಿಯಲ್ಲಿರುವ ಏಮ್ಸ್‌ನಲ್ಲಿ ಎಂಬಿಬಿಎಸ್ ಸೇರಬೇಕು ಅಂದುಕೊಂಡಿದ್ದೇನೆ. ಕಾರ್ಡಿಯೋ, ನ್ಯೂರೋ ಅಥವಾ ಅಂಕಾಲಜಿ ವಿಷಯದಲ್ಲಿ ವಿಶೇಷ ತಜ್ಞೆಯಾಗಬೇಕು ಅಂದುಕೊಂಡಿದ್ದೇನೆ ಎಂದಿದ್ದಾರೆ ತನಿಷ್ಕಾ.
ಅಣಕು ಪರೀಕ್ಷೆಗಳಿಂದ ಹೆಚ್ಚಿನ ಸಹಾಯವಾಯಿತು :
(ವತ್ಸ ಆಶೀಶ್ ಭಾತ್ರಾ 2ನೇ ರ್‍ಯಾಂಕ್ 715 ಅಂಕ)
ಇನ್ನು ನೀಟ್‌ನಲ್ಲಿ ದ್ವಿತೀಯ ರ್‍ಯಾಂಕ್ ಗಳಿಸಿಕೊಂಡಿರುವ ದಿಲ್ಲಿಯ ವತ್ಸ ಆಶೀಶ್ ಭಾತ್ರಾಗೆ ಮುಂದೆ ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಂಡು ಐಎಎಸ್ ಅಧಿಕಾರಿಯಾಗುವಾಸೆ ಇದೆ ಯಂತೆ. ನನ್ನ ಜೀವನದಲ್ಲಿ ಈ ರ್‍ಯಾಂಕ್ ಯಾವುದೇ ಪರಿಣಾಮ ಬೀರುವುದಿಲ್ಲ. ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿರುವುದರಿಂದ ಉತ್ತಮ ಕಾಲೇಜಿ ನಲ್ಲಿ ಎಂಬಿಬಿಎಸ್ ಸೀಟು ಸುಲಭವಾಗಿ ಸಿಗುತ್ತದೆ ಎಂದಿದ್ದಾರೆ. ಹಾಗೆಯೇ ದಿಲ್ಲಿಯ ಏಮ್ಸ್‌ನಲ್ಲೇ ಎಂಬಿ ಬಿಎಸ್ ಓದುತ್ತೇನೆ ಎಂದಿದ್ದಾರೆ ಅವರು. ಇವರ ತಂದೆ ಕೂಡ ನಾಗರಿಕ ಸೇವೆಯಲ್ಲಿದ್ದಾರೆ. ಹೀಗಾಗಿ ಅಪ್ಪನಂತೆ ಐಎಎಸ್ ಅಧಿಕಾರಿಯಾಗುವಾಸೆ ಇವರದ್ದು. ಸದ್ಯ ಎಂಬಿಬಿಎಸ್ ಮಾಡುತ್ತೇನೆ. ಬಳಿಕ ವೈದ್ಯನಾಗುವುದೋ ಅಥವಾ ನಾಗರಿಕ ಸೇವೆಗೆ ಸೇರುವುದೋ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದೂ ಹೇಳಿದ್ದಾರೆ.
ಸಿದ್ಧತೆ ಹೇಗಿತ್ತು?: ತಾವು ಸೇರಿದ್ದ ಕೋಚಿಂಗ್ ಸಂಸ್ಥೆಯು ನೀಡಿದ್ದ ಅಧ್ಯಯನ ಸಾಮಗ್ರಿಗಳ ಜತೆಗೆ, ಕಳೆದ ಎರಡು ತಿಂಗಳುಗಳಿಂದ ಅಣಕು ಪರೀಕ್ಷೆ ತೆಗೆದುಕೊಳ್ಳುತ್ತಿದ್ದೆ. ಕಳೆದ ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಬರೆಯುವ ಯತ್ನ ನಡೆಸಿದ್ದೆ. ಹಾಗೆಯೇ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಓದುತ್ತಿದ್ದೆ ಎಂದಿದ್ದಾರೆ.
ಜತೆಗೆ, ಮೊದಲ ದಿನದಿಂದಲೇ ತಯಾರಿ ನಡೆಸಬೇಕು, ಪರೀಕ್ಷೆ ಹಿಂದಿನ ದಿನ ಓದಲು ಕುಳಿತರೆ ಆಗುವುದಿಲ್ಲ. ಕ್ರಮಬದ್ಧವಾಗಿ ಅಧ್ಯಯನ ನಡೆಸಬೇಕು, ವಾರಕ್ಕೊಮ್ಮೆಯಾದರೂ ಅಣಕು ಪರೀಕ್ಷೆ ಬರೆಯಬೇಕು ಎಂದು ಹೇಳುತ್ತಾರೆ. ಇದರಿಂದ ಪುನರ್‌ಮನನದ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಅಂದಿನ ಪಾಠ ಅಂದೇ ಓದಿ ಮುಗಿಸಿಕೊಳ್ಳುತ್ತಿದ್ದೆ…
(ಹೃಷಿಕೇಶ್ ನಾಗಭೂಷಣ್, 3ನೇ ರ್‍ಯಾಂಕ್ 715 ಅಂಕ)
ತಮ್ಮ ಗುರಿ ಸಾಧಿಸುವುದಕ್ಕಾಗಿ ವಿದ್ಯಾರ್ಥಿಗಳು ನಿರಂತರ ಕಲಿಕೆ, ತಪ್ಪು ತಿದ್ದಿಕೊಳ್ಳುವುದು ಮತ್ತು ಮತ್ತೆ ಮತ್ತೆ ಪುನರಾವರ್ತನೆ ಮಾಡುವುದರಿಂದ ಪರೀಕ್ಷೆಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಬಹುದುದಾಗಿದೆ ಎನ್ನುತ್ತಾರೆ ನೀಟ್‌ನಲ್ಲಿ ರಾಜ್ಯಕ್ಕೆ ಮೊದಲ ರ್‍ಯಾಂಕ್ ಪಡೆದಿರುವ ಮತ್ತು ಅಖೀಲ ಭಾರತ ಮಟ್ಟದಲ್ಲಿ 3ನೇ ರಾಂÂಕ್ ಪಡೆದಿರುವ ಹೃಷಿಕೇಶ್ ನಾಗಭೂಷಣ್ ಗಂಗುಲೇ.
ಪ್ರತೀ ದಿನ ಇಂತಿಷ್ಟೇ ಸಮಯ ಓದಬೇಕೆಂದು ನಿರ್ಧಾರ ಮಾಡುತ್ತಿರಲಿಲ್ಲ. ಆದರೆ, ಅಂದಿನ ಪಾಠಗಳನ್ನು ಅಂದೇ ಮುಗಿಸಿ ಮುಖ್ಯವಾದ ಅಂಶಗಳನ್ನು ಬರೆದಿಟ್ಟುಕೊಳ್ಳುತ್ತಿದ್ದೆ. ಗೊಂದಲ ಉಂಟಾದರೆ ಶಿಕ್ಷಕರ ಬಳಿ ಕೇಳಿ ಮಾಹಿತಿ ಪಡೆದುಕೊಳ್ಳುತ್ತಿದ್ದ ಅಭ್ಯಾಸ ಪರೀಕ್ಷೆ ಸಮಯದಲ್ಲಿ ಸಹಕಾರಿಯಾಯಿತು ಎಂದು ಹೇಳುತ್ತಾರೆ.
ಸಾಮಾನ್ಯವಾಗಿ ನೀಟ್, ಸಿಇಟಿ ಮತ್ತು ಜೆಇಇ ಪರೀಕ್ಷೆಗಳನ್ನು ಎನ್‌ಸಿಇಆರ್‌ಟಿ ಪಠ್ಯದಲ್ಲಿರುವ ಪ್ರಶ್ನೆಗಳನ್ನೇ ನೀಡುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಎನ್‌ಸಿಇಆರ್‌ಟಿ ಪಠ್ಯಕ್ಕೆ ಮೊದಲ ಆದ್ಯತೆ ನೀಡಿ ಓದಿದರೆ, ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ.
ನಾನು ಓದಿನ ಜತೆಗೆ ಕಾದಂಬರಿಗಳನ್ನು ಓದುವುದು, ಚಿತ್ರ ಬಿಡಿಸುವುದು, ನ್ಯಾಶನಲ್ ಜಿಯಾಗ್ರಫಿನಲ್ಲಿ ಪ್ರಾಣಿ ನೋಡುವುದು ನನ್ನ ಹವ್ಯಾಸಗಳಾಗಿವೆ. ಸದ್ಯ ದಿಲ್ಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಮಾಡುವುದು ನನ್ನ ಉದ್ದೇಶ. ಅನಂತರ ಹೃದಯ ತಜ್ಞನಾಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದರು.
ಹೊರಗೆ ಎಲ್ಲಿಯೂ ತರಬೇತಿ ಪಡೆಯಲಿಲ್ಲ…
(ರಿಚಾ ಪಾವಸೆ 4 ನೇ ರ್‍ಯಾಂಕ್ 715 ಅಂಕ)
ನೀಟ್ ಪರೀಕ್ಷೆಯಲ್ಲಿ ನನ್ನ ಈ ಅತ್ಯಂತ ಹೆಮ್ಮೆ ಪಡುವ ಯಶಸ್ಸಿನ ಬಗ್ಗೆ ನನಗೆ ತುಂಬಾ ಸಂತೋಷವಾಗಿದ್ದರೂ ಇದರ ಎಲ್ಲ ಶ್ರೇಯಸ್ಸು ಹಾಗೂ ಫಲಕ್ಕೆ ನನ್ನ ಹೆತ್ತವರ ಆಶೀರ್ವಾದ, ಮಾರ್ಗದರ್ಶನ, ಮುಖ್ಯವಾಗಿ ನನ್ನ ಹಿರಿಯ ಸಹೋದರ ಡಾ|ಪ್ರಥಮೇಶ ಪಾವಸೆ ಮಾರ್ಗದರ್ಶನ ಕಾರಣ. ನನಗೆ ಈಗ ಬಂದಿರುವ ರ್‍ಯಾಂಕ್ ಅವರಿಗೇ ಸಮರ್ಪಣೆ.
ನೀಟ್ ಪರೀಕ್ಷೆಯಲ್ಲಿ 715 ಅಂಕಗಳನ್ನು ಪಡೆದು ದೇಶಕ್ಕೆ ನಾಲ್ಕನೇ ರ್‍ಯಾಂಕ್ ಹಾಗೂ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಗಳಿಸಿರುವ ಬೆಳಗಾವಿಯ ರಿಚಾ ಮೋಹನ್ ಪಾವಸೆ ಹೆಮ್ಮೆಯ ಮಾತಿದು. ನೀಟ್ ಪರೀಕ್ಷೆಯ ಸಾಧನೆ ಬಗ್ಗೆ “ಉದಯವಾಣಿ’ ಜತೆ ತಮ್ಮ ಸಂತಸ ಹಂಚಿಕೊಂಡ ರಿಚಾ, ನಾನು ಭವಿಷ್ಯದಲ್ಲಿ ಒಳ್ಳೆಯ ವೈದ್ಯಳಾಗುತ್ತೇನೆ. ನಿಸ್ವಾರ್ಥದಿಂದ ಸಾರ್ವಜನಿಕ ಸೇವೆ ಮಾಡುತ್ತೇನೆ ಎಂದರು. ಸಹೋದರ ಪ್ರಥಮೇಶ ಎಂಬಿಬಿಎಸ್ ಮಾಡುತ್ತಿರುವುದು ನನಗೆ ಅನುಕೂಲವಾಯಿತು. ಒಂದು ವರ್ಷ ಡ್ರಾಪ್ ತೆಗೆದುಕೊಂಡಿದ್ದ. ಹೊರಗಡೆ ಎಲ್ಲಿಯೂ ಹೆಚ್ಚಿನ ತರಬೇತಿಗೆ ಹೋಗಲಿಲ್ಲ. ಮನೆಯಲ್ಲೇ ಸಹೋದರ ಎಲ್ಲ ರೀತಿಯ ಪಾಠ ಹೇಳಿಕೊಟ್ಟರು. ಜತೆಗೆ ಮುಂಬಯಿ, ಪುಣೆ ಮತ್ತು ರಾಜಸ್ಥಾನದಿಂದ ಅಭ್ಯಾಸಕ್ಕೆ ಬೇಕಾದ ಎಲ್ಲ ಪುಸ್ತಕಗಳನ್ನು ತರಿಸಿಕೊಂಡು ಮನೆಯಲ್ಲಿಯೇ ಬೇಕಾದ ತರಬೇತಿ ಪಡೆದುಕೊಂಡು ಅಭ್ಯಾಸ ಮಾಡಿದ್ದೇನೆ ಎಂದಿದ್ದಾರೆ ರಿಚಾ.
ಸಹೋದರ ಪ್ರಥಮೇಶ ಪಾವಸೆ, ತಂದೆ ಮೋಹನ್ ಪಾವಸೆ, ತಾಯಿ ಸ್ಮಿತಾ ಪಾವಸೆ ಕೂಡ ವೈದ್ಯರಾಗಿದ್ದಾರೆ. ಮನೆಯಲ್ಲೇ ಎಲ್ಲರೂ ವೈದ್ಯರಾಗಿರುವುದು ರಿಚಾರಿಗೆ ಸಹಾಯವಾಯಿತಂತೆ.
ವೇಗವಾಗಿ ಉತ್ತರ ಬರೆಯಬೇಕು…
(ಕೃಷ್ಣ ಎಸ್.ಆರ್. 8 ನೇ ರ್‍ಯಾಂಕ್ 710 ಅಂಕ)
ಪ್ರಥಮ ಪಿಯುಸಿ ಆಯ್ಕೆ ವೇಳೆ ಮುಂದಿನ ಎರಡು ವರ್ಷದಲ್ಲಿ ತಾನು ಏನು ಮಾಡಬೇಕೆಂದು ಮೊದಲು ನಿರ್ಧರಿಸಬೇಕು ಮತ್ತು ಅದಕ್ಕೆ ಬೇಕಾದ ಪರಿ ಶ್ರಮ ಹಾಕಿದಾಗ ಮಾತ್ರ ಗುರಿ ಮುಟ್ಟಲು ಸಾಧ್ಯ ವಾಗಲಿದೆ. ಆದ್ದರಿಂದ ಮೊದಲು ತಮ್ಮ ಕನಸು ಏನೆಂದು ನಿರ್ಧರಿ ಸಬೇಕು ಎನ್ನುತ್ತಾರೆ ಅಖೀಲ ಭಾರತ ಮಟ್ಟದಲ್ಲಿ ನೀಟ್‌ನಲ್ಲಿ 8ನೇ ರ್‍ಯಾಂಕ್ ಮತ್ತು ರಾಜ್ಯ ಮಟ್ಟದಲ್ಲಿ 3ನೇ ರ್‍ಯಾಂಕ್ ಪಡೆದಿ ರುವ ಕೃಷ್ಣ ಎಸ್.ಆರ್. ಒಂದು ವೇಳೆ ನೀಟ್ ಪರೀಕ್ಷೆ ಎದುರಿಸಬೇಕು ಎಂದಾದರೆ, ಆರಂಭದಿಂದಲೇ ನಿರಂತರವಾಗಿ ಓದಬೇಕು. ವೇಗವಾಗಿ ಉತ್ತರಿಸುವ ಚಾಕಚಕ್ಯ ಮತ್ತು ಸುಲಭವಾಗಿ ನೆನಪಿನಲ್ಲಿಟ್ಟುಕೊಳ್ಳುವ ತಂತ್ರಗಳನ್ನು ರೂಢಿಸಿಕೊಳ್ಳಬೇಕು. ಪರೀಕ್ಷೆಯನ್ನು ಯಾವ ರೀತಿಯಲ್ಲಿ ಎದುರಿಸಬೇಕು ಮತ್ತು ಹೇಗೆ ಎದುರಿಸಬೇಕು ಎಂದು ಕಾಲೇಜಿನಲ್ಲಿ ಬೋಧನೆ ಜತೆಗೆ ಟ್ಯೂಷನ್‌ನಲ್ಲಿ ತಿಳಿಸುತ್ತಿದ್ದ ತಂತ್ರಗಳು ಸಹಕಾರಿಯಾದವು. ಮುಂದೆ ದಿಲ್ಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಮಾಡಲು ಸಿದ್ಧತೆ ನಡೆಸಿದ್ದೇನೆ. ಅನಂತರ ಮುಂದೇನು ಎಂಬುದರ ಬಗ್ಗೆ ಯೋಜನೆ ಮಾಡಿಲ್ಲ. ಸದ್ಯ ನನ್ನ ಗುರಿ ಎಂಬಿಬಿಎಸ್ ಮಾಡುವುದು ಎಂದು ತಿಳಿಸುತ್ತಾರೆ.
ಕುಳಿತಲ್ಲಿ, ನಿಂತಲ್ಲಿ ಎಲ್ಲೆಲ್ಲೂ ಓದುತ್ತಿದ್ದೆವು… :
(ವೃಜೇಶ್ ವೀಣಾಧರ್ ಶೆಟ್ಟಿ 13 ನೇ ರ್‍ಯಾಂಕ್ 710 ಅಂಕ)
ನೀಟ್‌ನಲ್ಲಿ ರ್‍ಯಾಂಕ್ ಪಡೆಯಲೇಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಹೀಗಾಗಿ ಪದವಿ ಪೂರ್ವ ಶಿಕ್ಷಣ ಪಡೆದ ಎರಡು ವರ್ಷಗಳ ಕಾಲ ಮೊಬೈಲ್ ಅನ್ನೇ ಮುಟ್ಟಿರಲಿಲ್ಲ. ಹೀಗಾಗಿ ನೀಟ್‌ನಲ್ಲಿ ರ್‍ಯಾಂಕ್ ಪಡೆಯಲು ಸಾಧ್ಯವಾಯಿತು ಎನ್ನುತ್ತಾರೆ ಅಖೀಲ ಭಾರತ ಮಟ್ಟದಲ್ಲಿ 13ನೇ ರ್‍ಯಾಂಕ್ ಹಾಗೂ ಕರ್ನಾಟಕದಲ್ಲಿ 4ನೇ ರಾಂÂಕ್ ಪಡೆದಿರುವ ವೃಜೇಶ್ ವೀಣಾಧರ್ ಶೆಟ್ಟಿ.
ಪ್ರತೀ ದಿನ 8ರಿಂದ ಅಪರಾಹ್ನ 3 ಗಂಟೆ ವರೆಗೂ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದೆ. ಅನಂತರ ಮಧ್ಯಾಹ್ನ 3ರಿಂದ ರಾತ್ರಿ 8 ಗಂಟೆ ವರೆಗೂ ಟ್ಯೂಷನ್‌ಗೆ ಹೋಗುತ್ತಿದ್ದೆ. ಅಲ್ಲಿಂದ ಮನೆಗೆ ಬಂದು ಊಟ ಮಾಡಿ ಮತ್ತೆ ರಾತ್ರಿ 12.30ರ ವರೆಗೂ ವ್ಯಾಸಂಗ ಮಾಡುತ್ತಿದ್ದೆ ಎಂದು ಹೇಳಿದರು.
ಎರಡು ವರ್ಷ ಸಮಯವನ್ನು ವ್ಯರ್ಥ ಮಾಡಿಲ್ಲ. ಕುಳಿತಲ್ಲಿ ನಿಂತಲ್ಲಿ ಓದುವುದು, ಜ್ಞಾನ ಸಂಪಾದನೆ ಮಾಡಿಕೊಳ್ಳುವುದೇ ನನ್ನ ಜೀವನವಾಗಿತ್ತು. ಹೆಚ್ಚೆಂದರೆ ಅರ್ಧಗಂಟೆ ಕಾಲ ಕ್ರಿಕೆಟ್ ಆಡುತ್ತಿದ್ದೆ . ಊಟದ ಸಮಯದಲ್ಲಿ ಟಿವಿ ನೋಡುತ್ತಿದ್ದೆ. ಮೊಬೈಲ್ ಬಳಸುತ್ತಿರಲಿಲ್ಲ, ಆನ್‌ಲೈನ್ ಶಿಕ್ಷಣಕ್ಕಾಗಿ ಕಂಪ್ಯೂಟರ್ ಬಳಸುತ್ತಿದ್ದೆ ಅಷ್ಟೇ ಎನ್ನುತ್ತಾರೆ ವೃಜೇಶ್. ಏಮ್ಸ್‌ನಲ್ಲಿ ಎಂಬಿಬಿಎಸ್ ಮಾಡುವುದು ವೃಜೇಶ್ ಗುರಿಯಾಗಿದೆ.
ದಿನವಿಡೀ ಓದುತ್ತಿದ್ದೆ; ಇದೇ ಪರೀಕ್ಷೆಗೆ ಸಹಾಯವಾಯಿತು :
(ಶುಭಾ ಕೌಶಿಕ್ 17ನೇ ರ್‍ಯಾಂಕ್ 705 ಅಂಕ)
ಮೆಡಿಕಲ್ ಓದಬೇಕೆಂಬುದು ನನ್ನ ಕನಸಾಗಿತ್ತು. ಪರಿಶ್ರಮಕ್ಕೆ ತಕ್ಕಂತೆ ಈಗ ರ್‍ಯಾಂಕ್ ಬಂದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ ಎನ್ನುತ್ತಾರೆ ಅಖೀಲ ಭಾರತ ಮಟ್ಟದಲ್ಲಿ ನೀಟ್‌ನಲ್ಲಿ 17 ಮತ್ತು ರಾಜ್ಯದಲ್ಲಿ 5ನೇ ರ್‍ಯಾಂಕ್ ಪಡೆದಿರುವ ಶುಭಾ ಕೌಶಿಕ್.
ಶುಭಾ, ಪ್ರತೀ ವಾರ ಕಾಲೇಜಿನಲ್ಲಿ ನಡೆಸುತ್ತಿದ್ದ ಪರೀಕ್ಷೆಗಳು ಹಾಗೂ ಪ್ರತೀ ದಿನ ಅಂದಿನ ಪಾಠವನ್ನು ಅಂದೇ ಓದುತ್ತಿದ್ದೆ. ಇದು ಪರೀಕ್ಷೆ ಸಮಯ ಸಾಕಷ್ಟು ಸಹಕಾರಿಯಾಯಿತು.
ಕಾಲೇಜುಗಳಲ್ಲಿ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ವ್ಯಾಸಂಗ ಮಾಡುತ್ತಿದ್ದೆ. ಅಲ್ಲಿಯೇ ಪರೀಕ್ಷೆಗೆ ಬೇಕಾದ ಸಾಕಷ್ಟು ವಿಷಯಗಳು, ಮೆಟೀರಿಯಲ್ಸ್ ಸಿಗುತ್ತಿತ್ತು. ಮನೆಯಲ್ಲಿ ಬೆಳಗಿನ ಜಾವ 4ರಿಂದ 6 ಗಂಟೆಯವರೆಗೂ ವ್ಯಾಸಂಗ ಮಾಡುತ್ತಿದ್ದೆ. ಪರೀಕ್ಷಾ ಸಮಯದಲ್ಲಿ ಹಿಂದಿನದನ್ನು ಮನನ ಮಾಡಿಕೊಳ್ಳುತ್ತಿದ್ದೆ ಎಂದರು.
ಓದಿನ ಜತೆಗೆ 12 ವರ್ಷದಿಂದ ಭರತನಾಟ್ಯ ನೃತ್ಯ ನನ್ನ ಹವ್ಯಾಸವಾಗಿದೆ. ಸಮಯ ಸಿಕ್ಕಾಗ ಅಥವಾ ಓದಿನ ಮಧ್ಯೆ ವಿಶ್ರಾಂತಿ ತೆಗೆದುಕೊಳ್ಳಲು, ವಾರಾಂತ್ಯದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತೇನೆ. ಸದ್ಯ ದಿಲ್ಲಿಯ ಏಮ್ಸ್‌ನಲ್ಲಿ ಎಂಬಿಬಿಎಸ್ ಓದುವುದು ನನ್ನ ಗುರಿಯಾಗಿದೆ ಎಂದು ಹೇಳುತ್ತಾರೆ.