Advertisement

NEET ಅಕ್ರಮ: ಪರೀಕ್ಷಾ ಸಂಸ್ಥೆ ವಿರುದ್ಧವೇ ತನಿಖೆ!

12:06 AM Jun 21, 2024 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌)ಗಳಲ್ಲಿ ಅಕ್ರಮಗಳು ಕಂಡುಬಂದ ಹಿನ್ನೆಲೆಯಲ್ಲಿ ಈ ಪರೀಕ್ಷೆಗಳನ್ನು ನಡೆಸುವ ಹೊಣೆ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯ ವಿರುದ್ಧವೇ ತನಿಖೆ ಕೈಗೊಳ್ಳಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

Advertisement

ಗುರುವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಕ್ರಮದ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾಸಂಸ್ಥೆ (ಎನ್‌ಟಿಎ) ಕಾರ್ಯನಿರ್ವಹಣೆಯ ಕುರಿತು ಪರಾಮರ್ಶಿಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಶೂನ್ಯ ಪ್ರಮಾದದ ಪರೀಕ್ಷೆಗಳನ್ನು ನಡೆಸಲು ನಾವು ಬದ್ಧರಾಗಿದ್ದೇವೆ’ ಎಂದು ಹೇಳಿದರು. ಇದೇ ವೇಳೆ, ಯುಜಿಸಿ ನೆಟ್‌ ಪ್ರಶ್ನೆ ಪತ್ರಿಕೆಯು ಡಾರ್ಕ್‌ನೆಟ್‌ ಮತ್ತು ಟೆಲಿಗ್ರಾಮ್‌ನಲ್ಲಿ ಸೋರಿಕೆಯಾದ ಬಗ್ಗೆ ತಿಳಿದುಬಂದ ಕೂಡಲೇ ನಾವು ಪರೀಕ್ಷೆಯನ್ನು ರದ್ದು ಮಾಡಿದೆವು ಎಂದೂ ತಿಳಿಸಿದರು.

ವ್ಯವಸ್ಥೆ ಸರಿಪಡಿಸುವ ಹೊಣೆನಮ್ಮ ಪರೀಕ್ಷಾ ವ್ಯವಸ್ಥೆ ಮೇಲೆ ನಂಬಿಕೆ ಇಡಿ. ಯಾವುದೇ ಅಕ್ರಮ ಅಥವಾ ನಕಲು ಮಾಡುವುದನ್ನು ನಮ್ಮ ಸರಕಾರ ಸಹಿಸುವುದಿಲ್ಲ. ವ್ಯವಸ್ಥೆಯನ್ನು ಸರಿಪಡಿಸುವ ಹೊಣೆ ನಮ್ಮದು. ಈ ವಿಷಯದಲ್ಲಿ ಯಾರೂ ರಾಜಕೀಯ ಮಾಡು ವುದು ಬೇಡ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ಟೀಕೆಗೆ ಸಚಿವ ಪ್ರಧಾನ್‌ ಸೂಚ್ಯವಾಗಿ ಉತ್ತರಿಸಿದರು.

ಶೀಘ್ರ ಶಿಫಾರಸು ನಿರೀಕ್ಷೆ
ಎನ್‌ಟಿಎ ಸಂರಚನೆ, ಕಾರ್ಯನಿರ್ವಹಣೆ, ಪರೀûಾ ಪ್ರಕ್ರಿಯೆಗಳು, ಪಾರದರ್ಶಕತೆ ಮತ್ತು ಡೇಟಾ ಸುರಕ್ಷೆ ಕುರಿತು ಉನ್ನತ ಮಟ್ಟದ ಸಮಿತಿಯಿಂದ ಶಿಫಾರಸುಗಳನ್ನು ನಿರೀಕ್ಷಿಸಲಾಗುವುದು. ತಪ್ಪಿತಸ್ಥರು ಎಂದು ಕಂಡುಬರುವ ಎನ್‌ಟಿಎಯ ಯಾವುದೇ ಅಧಿಕಾರಿಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಭರವಸೆ ನೀಡಿದರು.
ಸರಕಾರ ವಿದ್ಯಾರ್ಥಿಗಳ ಹಿತರಕ್ಷಣೆಗೆ ಬದ್ಧವಾಗಿದೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಪರೀಕ್ಷೆ ನಡೆಸುವ ವಿಷಯದಲ್ಲಿ ಪಾರದರ್ಶಕತೆಗೆ ಸಂಬಂಧಿಸಿದಂತೆ ಯಾವುದೇ ರಾಜಿಯನ್ನು ಮಾಡಿಕೊಳ್ಳುವುದಿಲ್ಲ ಎಂದರು.

ಹಿಂದಿನ ರಾತ್ರಿಯೇ ಪ್ರಶ್ನೆಪತ್ರಿಕೆ ಸೋರಿಕೆ ಆಗಿತ್ತು: ಆರೋಪಿ ತಪ್ಪೊಪ್ಪಿಗೆ
ಪಟ್ನಾ: ನೀಟ್‌-ಯುಜಿ ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ನಿಜ ಎಂದು ನಾಲ್ವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಪರೀಕ್ಷೆಯ ಹಿಂದಿನ ದಿನ ರಾತ್ರಿಯೇ ನಮಗೆ ಪ್ರಶ್ನೆಪತ್ರಿಕೆ ನೀಡಿ, ಉತ್ತರ ಬಾಯಿಪಾಠ ಮಾಡಿಸಲಾಗಿತ್ತು. ಮಾರನೇ ದಿನ ಪರೀಕ್ಷೆ ವೇಳೆ ಅದೇ ಪ್ರಶ್ನೆಗಳನ್ನು ಕೇಳಲಾಗಿತ್ತು ಎಂದು ಬಂಧಿತ ನೀಟ್‌ ಆಕಾಂಕ್ಷಿ ಹೇಳಿದ್ದಾನೆ.

Advertisement

ನಿರ್ದಿಷ್ಟ ಪ್ರದೇಶದಲ್ಲಿ ನೀಟ್‌ ಅಕ್ರಮ
ಪ್ರಾಥಮಿಕ ತನಿಖೆಯ ಪ್ರಕಾರ ನೀಟ್‌ ಪರೀಕ್ಷೆಯ ಅಕ್ರಮವು ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ನಡೆದಿರುವ ಸಾಧ್ಯತೆಗಳಿವೆ. ಈ ಕುರಿತು ನಾವು ಬಿಹಾರ ಸರಕಾರದಿಂದ ಮಾಹಿತಿ ಪಡೆದುಕೊಂಡಿದ್ದೇವೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಪಟ್ನಾ ಪೊಲೀಸರು ಈಗಾಗಲೇ ಆಳವಾಗಿ ತನಿಖೆ ಕೈಗೊಂಡಿದ್ದು, ಶೀಘ್ರವೇ ಕೇಂದ್ರಕ್ಕೆ ವರದಿ ನೀಡಲಿದ್ದಾರೆ ಎಂದು ಸಚಿವ ಪ್ರಧಾನ್‌ ಹೇಳಿದರು.

ಡಾರ್ಕ್‌ನೆಟ್‌, ಟೆಲಿಗ್ರಾಮ್‌ನಲ್ಲಿ ನೆಟ್‌ ಪ್ರಶ್ನೆಪತ್ರಿಕೆ ಸೋರಿಕೆ
2024ರ ಯುಜಿಸಿ ನೆಟ್‌ ಪ್ರಶ್ನೆ ಪತ್ರಿಕೆಯು ಡಾರ್ಕ್‌ನೆಟ್‌ ಮತ್ತು ಟೆಲಿಗ್ರಾಮ್‌ನಲ್ಲಿ ಸೋರಿಕೆಯಾಗಿತ್ತು. ಹಾಗಾಗಿ ಪರೀಕ್ಷೆಯನ್ನು ರದ್ದು ಮಾಡಲಾಯಿತು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು. ಡಾರ್ಕ್‌ನೆಟ್‌ನಲ್ಲಿದ್ದ ನೆಟ್‌ ಪ್ರಶ್ನೆಪತ್ರಿಕೆಯು ಒರಿಜನಲ್‌ ಪ್ರಶ್ನೆ ಪತ್ರಿಕೆ ನಡುವೆ ಸಾಮ್ಯತೆ ಇದ್ದಿದ್ದರಿಂದ ನಾವು ಪರೀಕ್ಷೆ ರದ್ದು ಮಾಡಲು ನಿರ್ಧರಿಸಿದೆವು ಎಂದು ಸಚಿವ ಪ್ರಧಾನ್‌ ಅವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next