Advertisement

ನಾಲ್ವರಿಗೆ ಸಮಾನ ಅಂಕ ಬಂದಿದ್ದರೂ ರ್‍ಯಾಂಕ್‌ ಮಾತ್ರ ಒಬ್ಬರಿಗೇ! : ಯಾಕೆ ಗೊತ್ತಾ?

09:40 PM Sep 08, 2022 | Team Udayavani |

ನವದೆಹಲಿ: ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್‌)ನಲ್ಲಿ ಈ ಬಾರಿ ನಾಲ್ವರು ಅಭ್ಯರ್ಥಿಗಳು 720ರ ಪೈಕಿ 715 ಅಂಕಗಳನ್ನು ಗಳಿಸಿದ್ದಾರೆ. ಆದರೆ, ಕಳೆದ ವರ್ಷದಂತೆ ಈ ಬಾರಿ ಈ ನಾಲ್ವರು ಟಾಪ್‌ ರ್‍ಯಾಂಕ್‌ ಹಂಚಿಕೊಂಡಿಲ್ಲ. ಯಾಕೆ ಗೊತ್ತಾ?

Advertisement

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ಈ ಬಾರಿ ಅನುಸರಿಸಿದ ಹೊಸ ಟೈ-ಬ್ರೇಕರ್‌ ನೀತಿಯೇ ಇದಕ್ಕೆ ಕಾರಣ. ಈ ನೀತಿಯ ಅನುಸಾರವೇ ಎನ್‌ಟಿಎ ರಾಜಸ್ಥಾನದ ತನಿಷ್ಕಾಗೆ ಮೊದಲ ರ್‍ಯಾಂಕ್‌ ನೀಡಿದೆ. ದೆಹಲಿಯ ವತ್ಸಾ ಆಶಿಷ್‌ ಬಾತ್ರಾರಿಗೆ ದ್ವಿತೀಯ ರ್‍ಯಾಂಕ್‌, ಕರ್ನಾಟಕದ ಹೃಷಿಕೇಶ್‌ ನಾಗಭೂಷಣ್‌ ಗಂಗುಲೆ ಮತ್ತು ರುಚಾ ಅವರಿಗೆ ಕ್ರಮವಾಗಿ ತೃತೀಯ ಮತ್ತು 4ನೇ ರ್‍ಯಾಂಕ್‌ ನೀಡಲಾಗಿದೆ.

9 ಅಂಶಗಳ ಪರಿಗಣನೆ:

ಒಟ್ಟು 9 ಅಂಶಗಳನ್ನು ಆಧರಿಸಿ (ಜೀವಶಾಸ್ತ್ರದಲ್ಲಿ ಹೆಚ್ಚಿನ ಅಂಕ, ರಸಾಯನಶಾಸ್ತ್ರದಲ್ಲಿ ಹೆಚ್ಚು ಅಂಕ, ಭೌತಶಾಸ್ತ್ರದಲ್ಲಿ ಹೆಚ್ಚು ಅಂಕ, ತಪ್ಪು ಉತ್ತರಗಳ ಸಂಖ್ಯೆ ಕಡಿಮೆಯಿರುವ ಅಭ್ಯರ್ಥಿಗಳು, ನೀಟ್‌ ಅರ್ಜಿಗೆ ಅನುಗುಣವಾಗಿ ವಯಸ್ಸಲ್ಲಿ ಹಿರಿಯರು ಇತ್ಯಾದಿ) ರ್‍ಯಾಂಕ್‌ ಹಂಚಿಕೆ ಮಾಡಲಾಗಿದೆ. ಕೌನ್ಸೆಲಿಂಗ್‌ ಉದ್ದೇಶಕ್ಕಾಗಿ ಪ್ರತಿಯೊಬ್ಬ ಅಭ್ಯರ್ಥಿಯೂ ಭಿನ್ನ ಭಿನ್ನ ರ್‍ಯಾಂಕ್‌ ಹೊಂದಿರಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಟೈ ಬ್ರೇಕರ್‌ ನಿಯಮ ಅನುಸರಿಸಲಾಗಿದೆ ಎಂದು ಎನ್‌ಟಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಮೂವರು ನೀಟ್‌ ಅಭ್ಯರ್ಥಿಗಳು ಮೊದಲ ರ್‍ಯಾಂಕ್‌ ಹಂಚಿಕೊಂಡಿದ್ದರು. ಕಳೆದ ವರ್ಷದವರೆಗೂ ಮೂರು ಅಂಶಗಳ ಟೈ ಬ್ರೇಕರ್‌ ನೀತಿಯನ್ನು ಅನುಸರಿಸಿ ರ್‍ಯಾಂಕ್‌ ನೀಡಲಾಗುತ್ತಿತ್ತು.

Advertisement

ಚೆನ್ನೈನ ವಿದ್ಯಾರ್ಥಿನಿ ಆತ್ಮಹತ್ಯೆ:

ನೀಟ್‌ ಪರೀಕ್ಷೆಯಲ್ಲಿ ಅನುತ್ತೀರ್ಣಳಾದ ಕಾರಣಕ್ಕೆ ತಮಿಳುನಾಡಿನ ಅಂಬತ್ತೂರಿನ 19 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬುಧವಾರ ನೀಟ್‌ ಫ‌ಲಿತಾಂಶ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಯುವತಿಯು ಆತ್ಮಹತ್ಯೆ ಮಾಡಿಕೊಂಡಿದ್ದು, ಕೂಡಲೇ ಆಕೆಯನ್ನು ಆಸ್ಪತ್ರೆಗೆ ಒಯ್ಯಲಾಯಿತಾದರೂ, ಅಷ್ಟರಲ್ಲಿ ಆಕೆ ಕೊನೆಯುಸಿರೆಳೆದಿದ್ದಳು. ಕಳೆದ ಜುಲೈನಲ್ಲಿ ನೀಟ್‌ ಪರೀಕ್ಷೆಗೂ ಮುನ್ನ ವಿದ್ಯಾರ್ಥಿನಿಯೊಬ್ಬಳು, ಪರೀಕ್ಷೆಗೆ ಹೆದರಿ ಸುಸೈಡ್‌ ಮಾಡಿಕೊಂಡಿದ್ದಳು.

Advertisement

Udayavani is now on Telegram. Click here to join our channel and stay updated with the latest news.

Next