ನವದೆಹಲಿ: ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ(ನೀಟ್) ಫಲಿತಾಂಶ 2020ರ ಅಕ್ಟೋಬರ್ 16ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಘೋಷಿಸಲಿದೆ ಎಂದು ಕೇಂದ್ರ ಸರ್ಕಾರ ಸೋಮವಾರ (ಅಕ್ಟೋಬರ್ 12, 2020) ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ಈ ಕುರಿತು ಟ್ವೀಟ್ ಮಾಡಿದ್ದು, ನೀಟ್ ಫಲಿತಾಂಶ ಅಕ್ಟೋಬರ್ 16ರಂದು ಘೋಷಣೆಯಾಗಲಿದ್ದು, ನಿಖರ ಸಮಯವನ್ನು ಬಳಿಕ ತಿಳಿಸುವುದಾಗಿ ಹೇಳಿದ್ದಾರೆ. ಎಲ್ಲಾ ಅಭ್ಯರ್ಥಿಗಳಿಗೂ ನಾನು ಅಭಿನಂದನೆ ಸಲ್ಲಿಸುವುದಾಗಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಎನ್ ಟಿಎಗೆ ಈ ಮೊದಲು ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ 2020ರ ನೀಟ್ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ 20ರಂದು ಘೋಷಿಸಲು ತಿಳಿಸಿತ್ತು. ಕೋವಿಡ್ 19 ಸೋಂಕಿನಿಂದಾಗಿ ಯಾರಿಗೆ ನೀಟ್ 2020 ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲವೋ ಅವರಿಗೆ ಅಕ್ಟೋಬರ್ 14ರಂದು ನಡೆಸುವ ಪರೀಕ್ಷೆಯಲ್ಲಿ ಅವಕಾಶ ನೀಡಬೇಕೆಂದು ಹೇಳಿತ್ತು.
ಕೋವಿಡ್ 19 ಸೋಂಕಿನ ನಡುವೆಯೇ 2020ನೇ ಸಾಲಿನ ನೀಟ್ ಪರೀಕ್ಷೆಗಳು ಸೆಪ್ಟೆಂಬರ್ 13ರಂದು ಕೊನೆಗೊಂಡಿತ್ತು. ಸುಮಾರು 15.97 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 13 ಲಕ್ಷ ಅಭ್ಯರ್ಥಿಗಳು ನೀಟ್ ಪರೀಕ್ಷೆ ಬರೆದಿರುವುದಾಗಿ ಪೋಖ್ರಿಯಾಲ್ ತಿಳಿಸಿದ್ದಾರೆ.