Advertisement

ಇಂದಿನಿಂದ ಆ್ಯತ್ಲೆಟಿಕ್ಸ್‌ ; ಕಾಡುತ್ತಿದೆ ನೀರಜ್‌ ಚೋಪ್ರಾ ಗೈರು

11:15 PM Aug 01, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಕಾಮ ನ್ವೆಲ್ತ್‌ ಗೇಮ್ಸ್‌ನ ಅತೀ ಮುಖ್ಯ ಹಾಗೂ ಅತ್ಯಾಕರ್ಷಕ ಸ್ಪರ್ಧೆ ಯಾಗಿರುವ ಆ್ಯತ್ಲೆಟಿಕ್ಸ್‌ ಮಂಗಳವಾರದಿಂದ ಆರಂಭವಾಗಲಿದೆ. ಭಾರತವನ್ನು ಕಾಡುತ್ತಿರುವ ಚಿಂತೆಯೆಂದರೆ ಟೋಕಿಯೊ ಒಲಿಂಪಿಕ್ಸ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಗೈರು.

Advertisement

ಹೀಗಾಗಿ ಅವರಿಗೆ ಗೇಮ್ಸ್‌ ಚಿನ್ನವನ್ನು ಉಳಿಸಿಕೊಳ್ಳುವ ಅವಕಾಶ ಕೈತಪ್ಪಿತು. ಕಳೆದ ಗೋಲ್ಡ್‌ಕೋಸ್ಟ್‌ ಗೇಮ್ಸ್‌ ನಲ್ಲಿ ನೀರಜ್‌ ಬಂಗಾರ ಜಯಿಸಿದ್ದರು.

ನೀರಜ್‌ ಚೋಪ್ರಾ ಗೈರಲ್ಲಿ ಲಾಂಗ್‌ಜಂಪರ್‌ ಮುರಳಿ ಶ್ರೀಶಂಕರ್‌, ಸ್ಟೀಪಲ್‌ಚೇಸರ್‌ ಅವಿನಾಶ್‌ ಸಬ್ಲೆ, ಡಿಸ್ಕಸ್‌ ಎಸೆತಗಾರ್ತಿ ಸೀಮಾ ಪೂನಿಯ, ಜಾವೆಲಿನ್‌ ತ್ರೋವರ್‌ ಅನ್ನು ರಾಣಿ, ಕೊನೆಯ ಕ್ಷಣದಲ್ಲಿ ಸೇರ್ಪಡೆ ಗೊಂಡ ಹೈಜಂಪರ್‌ ತೇಜಸ್ವಿನ್‌ ಶಂಕರ್‌ ಮೇಲೆ ಭಾರತ ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಬೇಕಿದೆ.

ಮೂವರು ಟ್ರಿಪಲ್‌ ಜಂಪರ್ ಕೂಡ ಭಾರತವನ್ನು ಪ್ರತಿನಿಧಿಸಲಿದ್ದು, ಇವರಿಂದ ಕನಿಷ್ಠ ಒಂದು ಪದಕವನ್ನು ನಿರೀಕ್ಷಿಸಲಾಗಿದೆ. ಇವರೆಂದರೆ ಪ್ರವೀಣ್‌ ಚಿತ್ರವೇಲ್‌, ಅಬ್ದುಲ್ಲ ಅಬೂಬಕರ್‌ ಮತ್ತು ಪೌಲ್‌. ಇವರಲ್ಲಿ ಪೌಲ್‌ ಕಳೆದ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ಗೆ ತೇರ್ಗಡೆಯಾಗಿದ್ದರು.

ಲಾಂಗ್‌ಜಂಪ್‌ ಆ್ಯಕ್ಷನ್‌
ಮಂಗಳವಾರ ಲಾಂಗ್‌ಜಂಪ್‌ ಅರ್ಹತಾ ಸುತ್ತಿನ ಮೂಲಕ ಭಾರತದ ಆ್ಯಕ್ಷನ್‌ ಮೊದಲ್ಗೊಳ್ಳಲಿದೆ. ಇಲ್ಲಿ ಶ್ರೀಶಂಕರ್‌, ಮುಹಮ್ಮದ್‌ ಅನೀಸ್‌ ಯಾಹಿಯಾ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ. ಶ್ರೀಶಂಕರ್‌ 8 ಮೀಟರ್‌ಗೂ ಅಧಿಕ ದೂರದ ಸಾಧನೆಗೈದಿದ್ದು, ಉತ್ತಮ ಫಾರ್ಮ್ ನಲ್ಲಿದ್ದಾರೆ.. ಕಳೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 7.96 ಮೀಟರ್‌ನೊಂದಿಗೆ 7ನೇ ಸ್ಥಾನಿಯಾಗಿದ್ದರು. ವೈಯಕ್ತಿಕ ಶ್ರೇಷ್ಠ ನಿರ್ವಹಣೆಯಾದ 8.36 ಮೀ. ಸಾಧನೆಯನ್ನು ಪುನರಾವರ್ತಿಸಿದರೆ ಕನಿಷ್ಠ ಕಂಚ ನ್ನಾದರೂ ಗೆಲ್ಲಬಹುದು.

Advertisement

ಯಾಹಿಯಾ ಕೂಡ ಈ ಋತುವಿನಲ್ಲಿ 5 ಸಲ 8 ಪ್ಲಸ್‌ ಮೀಟರ್‌ ದೂರ ನೆಗೆದಿದ್ದಾರೆ. ಹೀಗಾಗಿ ಇವರ ಮೇಲೂ ಪದಕ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಫೈನಲ್‌ ಸ್ಪರ್ಧೆ ಆ. 4ರಂದು ಏರ್ಪಡಲಿದೆ.

ಇಂದು ಡಿಸ್ಕಸ್‌ ನಿರೀಕ್ಷೆ…
ಮೊದಲ ದಿನ ಭಾರತ ಡಿಸ್ಕಸ್‌ ಪದಕವನ್ನು ಎದುರು ನೋಡುತ್ತಿದೆ. ಸೀಮಾ ಪುನಿಯ, ನವಜೀತ್‌ ಕೌರ್‌ ಧಿಲ್ಲೋನ್‌ ಕಣಕ್ಕಿಳಿಯಲಿದ್ದಾರೆ. ಕಳೆದ ಸಲ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದ ಸಾಧನೆ ಇವರದಾಗಿದೆ.

ಸೀಮಾ ಅವರಂತೂ ಗೇಮ್ಸ್‌ ನಿಂದ ಖಾಲಿ ಕೈಯಲ್ಲಿ ಮರಳಿದ್ದೇ ಇಲ್ಲ. ಪಾಲ್ಗೊಂಡ ಐದೂ ಗೇಮ್ಸ್‌ ಗಳಲ್ಲಿ ಪದಕ ಗೆದ್ದ ಸಾಧಕಿ (3 ಬೆಳ್ಳಿ, 2 ಕಂಚು). ಪ್ರಸಕ್ತ ಋತುವಿನಲ್ಲಿ 57.09 ಮೀ. ದೂರದ ಅತ್ಯುತ್ತಮ ಸಾಧನೆ ದಾಖಲಿಸಿದ್ದಾರೆ. ಕಳೆದ ಗೇಮ್ಸ್‌ನಲ್ಲಿ 60.41 ಮೀ. ಸಾಧನೆಗೈದಿದ್ದರು. ಆದರೆ ಧಿಲ್ಲೋನ್‌ ಈವರೆಗೆ 60 ಮೀ. ಗಡಿ ದಾಟಿದವರಲ್ಲ.

ವನಿತೆಯರ 4×400 ರಿಲೇ ತಂಡದಲ್ಲಿ ದ್ಯುತಿ ಚಂದ್‌, ಹಿಮಾ ದಾಸ್‌, ಸ್ರಾಬನಿ ನಂದಾ ಮತ್ತು ಎನ್‌.ಎಸ್‌. ಸಿಮಿ ಮಾತ್ರವೇ ಇದ್ದಾರೆ. ಧನಲಕ್ಷ್ಮೀ ಗೈರು ಭಾರತವನ್ನು ಕಾಡಲಿದೆ.

ದಿಲ್ಲಿಯಲ್ಲಿ ಅತ್ಯುತ್ತಮ ಸಾಧನೆ
ಗೇಮ್ಸ್‌ ಆ್ಯತ್ಲೆಟಿಕ್ಸ್‌ನಲ್ಲಿ ಭಾರತ ಈವರೆಗೆ 28 ಪದಕ ಜಯಿಸಿದೆ. 5 ಚಿನ್ನ, 10 ಬೆಳ್ಳಿ, 13 ಕಂಚು ಇದರಲ್ಲಿ ಸೇರಿದೆ. ಗೇಮ್ಸ್‌ ಇತಿಹಾಸ ದಲ್ಲಿ ಭಾರತದ ಅತ್ಯುತ್ತಮ ಆ್ಯತ್ಲೆಟಿಕ್ಸ್‌ ಸಾಧನೆ ದಾಖಲಾದದ್ದು 2010ರ ಹೊಸದಿಲ್ಲಿ ಕೂಟದಲ್ಲಿ. ಅಲ್ಲಿ ಭಾರತ 2 ಚಿನ್ನ, 3 ಬೆಳ್ಳಿ ಮತ್ತು 7 ಕಂಚು ಜಯಿಸಿತ್ತು. ಅನಂತರದ ಅತ್ಯುತ್ತಮ ಸಾಧನೆ ಕಂಡುಬಂದದ್ದು 2014 ಮತ್ತು 2018ರ ಆವೃತ್ತಿಗಳಲ್ಲಿ. ಭಾರತ ತಲಾ ಒಂದು ಚಿನ್ನ, ಒಂದು ಬೆಳ್ಳಿ, ಒಂದು ಕಂಚು ಗೆದ್ದಿತ್ತು.

ಪದಕ ರೇಸ್‌ನಲ್ಲಿ ಮುರಳಿ ಶ್ರೀಶಂಕರ್‌, ಅವಿನಾಶ್‌ ಸಬ್ಲೆ, ಸೀಮಾ ಪೂನಿಯ, ಅನ್ನು ರಾಣಿ, ತೇಜಸ್ವಿನ್‌ ಶಂಕರ್‌, ಟ್ರಿಪಲ್‌ ಜಂಪರ್, ವನಿತಾ ರಿಲೇ ತಂಡ

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next