Advertisement

ಕೊಳವೂರಿಗೆ ಬರಲಿ ಸಮಗ್ರ ಯೋಜನೆಗಳ ತೇರು!

10:39 AM Sep 19, 2022 | Team Udayavani |

ಬಜಪೆ: ಕವಲೊಡೆದು ಹರಿಯುವ ಫ‌ಲ್ಗುಣಿ ನದಿ, ಹಸುರು ಬೆಟ್ಟ ಗುಡ್ಡಗಳು, ಫ‌ಲವತ್ತಾಗಿರುವ ಕೃಷಿ ಭೂಮಿಯಿಂದಾಗಿ ನೈಸರ್ಗಿಕ ಸೌಂದರ್ಯವನ್ನು ತುಂಬಿಕೊಂಡಿರುವ ಕೊಳವೂರು ಗ್ರಾಮವು ಕೃಷಿ ಉತ್ತೇಜನ ಚಟುವಟಿಕೆಗಳು, ಪ್ರವಾಸೋದ್ಯಮ ಯೋಜನೆಗಳಿಗೆ ಎದುರು ನೋಡುತ್ತಿದೆ.

Advertisement

ಮಂಗಳೂರು ನಗರದಿಂದ ಸುಮಾರು 32 ಕಿ.ಮೀ. ದೂರದಲ್ಲಿರುವ ಕೊಳವೂರು ಗ್ರಾಮ 1,069.43 ಎಕರೆ ವಿಸ್ತೀರ್ಣ, 2011ರ ಜನಗಣತಿಯಂತೆ 1,875 ಜನಸಂಖ್ಯೆಯನ್ನು ಹೊಂದಿದೆ. ಕುಪ್ಪೆಪದವು ಗ್ರಾಮ ಪಂಚಾಯತ್‌ ನಿಂದ 2015ರಲ್ಲಿ ವಿಭಜನೆಗೊಂಡ ಕೊಳವೂರು ಮತ್ತು ಮುತ್ತೂರು ಗ್ರಾಮಗಳೆರಡು ಪ್ರತ್ಯೇಕ ಮುತ್ತೂರು ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಸೇರಿಕೊಂಡಿತು.

ಪ್ರತಿ ವರ್ಷವೂ ಈ ಕಾಲುವೆಯ ಹೂಳು, ಮಣ್ಣು ತೆಗೆಯಲು ಸುಮಾರು 5 ರಿಂದ 8 ಲಕ್ಷ ರೂ. ಅನ್ನು ಸಣ್ಣ ನೀರಾವರಿ ಇಲಾಖೆ ವ್ಯಯಿಸುತ್ತಿದೆ. ಕಾಲುವೆಯ ಎರಡು ಬದಿಯ ದಂಡೆಗೆ ತಡೆಗೋಡೆ ನಿರ್ಮಾಣದ ಜತೆಗೆ ಅದರ ದಂಡೆಯಲ್ಲಿರುವ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿದಲ್ಲಿ ಕೃಷಿಕರಿಗೆ ಅನುಕೂಲವಾಗಲಿದೆ. ವರ್ಷವೂ ಹೂಳು ತೆಗೆಯುವ ಖರ್ಚು ಕಡಿಮೆಯಾಗಲಿದೆ. ರಸ್ತೆ ನಿರ್ಮಾಣದಿಂದ ಗದ್ದೆ, ತೋಟಗಳಿಂದ ಫ‌ಸಲುಗಳನ್ನು ನೇರ ವಾಹನದಲ್ಲಿ ಕೊಂಡೊಯ್ಯಲು ಸಾಧ್ಯವಾಗುವುದರಿಂದ ಸಾಗಾಟ ವೆಚ್ಚವೂ ಕಡಿಮೆಯಾಗಲಿದೆ ಎನ್ನುತ್ತಾರೆ ಇಲ್ಲಿನ ಕೃಷಿಕರು.

ದೊಡ್ಡಳಿಕೆ ಕುದ್ರು ಪ್ರವಾಸಿ ತಾಣವಾಗಲಿ

ಫ‌ಲ್ಗುಣಿ ನದಿ ಇಲ್ಲಿನ ಪ್ರಮುಖ ಆಕರ್ಷಣೀ ಯ ತಾಣ. ಫ‌ಲ್ಗುಣಿ ನದಿ ಕೊಳವೂರು ಗ್ರಾಮದ ದೊಡ್ಡಳಿಕೆ ಕುದ್ರು ಪ್ರದೇಶದಲ್ಲಿ ಕವ ಲೊಡೆದು ಹರಿಯುತ್ತದೆ. ಮಧ್ಯದ ಕುದ್ರು ಪ್ರದೇಶ ರಮಣೀಯವಾಗಿದ್ದು, ಹಸುರು ಗುಡ್ಡಗಳಿಂದ ಕೂಡಿದೆ. ಪ್ರವಾಸೋದ್ಯಮಕ್ಕೆ ಹೆಚ್ಚು ಅನುಕೂಲಕರವಾಗಿರುವ ಇಲ್ಲಿ ನದಿಯ ಅಭಿವೃದ್ಧಿಗೆ ಒತ್ತು ನೀಡಿದರೆ ಪ್ರವಾಸೋದ್ಯಮ ಹಾಗೂ ಕೃಷಿಗೆ ವರದಾನವಾಗಲಿದೆ.

Advertisement

ದೊಡ್ಡಳಿಕೆ ಡ್ಯಾಮ್‌ನಿಂದ ಮಾರ್ಗದಂಗಡಿ ಯವರೆಗೆ ಸುಮಾರು 12 ಕಿ.ಮೀ. ದೂರ ಕೃಷಿ ನೀರು ಕಾಲುವೆ ಇದ್ದು, ಇದರಲ್ಲಿ ಮಣ್ಣು, ಹೂಳು ತುಂಬಿಕೊಂಡಿರುವುದರಿಂದ ನೀರು ಹರಿಯಲು ತೊಂದರೆಯಾಗುತ್ತಿದೆ. ಇದರಿಂದ ಕಾಲುವೆಯಲ್ಲಿ ಸುಮಾರು 9 ಕಿ.ಮೀ. (ನೊಣಾಲ್‌) ವರೆಗೆ ಮಾತ್ರ ನೀರು ಹರಿಯುತ್ತದೆ. ಕಾಲುವೆಯ ಪಕ್ಕದಲ್ಲಿ ಕೃಷಿ ಭೂಮಿ, ತೋಟಗಳಿವೆ.

ತಡೆಗೋಡೆ ನಿರ್ಮಾಣದ ಅಗತ್ಯ

ದೊಡ್ಡಳಿಕೆ -ಮೂಲರಪಟ್ಣ ಸೇತುವೆವರೆಗೆ ನೆರೆ ನೀರಿನ ಹಾವಳಿಯಿಂದ ಫ‌ಲ್ಗುಣಿ ನದಿ ಬದಿಯಲ್ಲಿರುವ ರೈತರ ಕೃಷಿ ಭೂಮಿ ನದಿ ಪಾಲಾಗುತ್ತಿದೆ. ಈ ಪ್ರದೇಶದಲ್ಲಿ ತಡೆಗೋಡೆ ನಿರ್ಮಾಣವಾಗಬೇಕು. ಅಟ್ಟೆ ಪದವಿನಲ್ಲಿ 1991- 92ರಲ್ಲಿ ಸೈಟ್‌ ನೀಡಲಾಗಿದ್ದು, ಸ್ಥಳೀಯ ನಿವಾಸಿಗಳು ಮಣ್ಣು ಕುಸಿತದ ಭೀತಿಯಲ್ಲಿದ್ದಾರೆ. ಅದಕ್ಕೆ ತಡೆಗೋಡೆ ನಿರ್ಮಾಣವಾಗಬೇಕು, ಕುಂಡಿಮಾರ್‌ ರಸ್ತೆ, ಸಣ್ಣ ಕಾಯಿ ರಸ್ತೆ, ಉಗ್ರಾಯಿ ರಸ್ತೆ, ಅಗರಿ ರಸ್ತೆ, ಬಳ್ಳಾಜೆ ಪಲ್ಕೆ ರಸ್ತೆ ಮಳೆಯಿಂದ ಹಾನಿಗೊಳಗಾಗಿದ್ದು, ಕಾಂಕ್ರೀಟಿಕರಣಗೊಳಿಸಬೇಕಿದೆ. 65 ಮಂದಿಗೆ ಹಕ್ಕು ಪತ್ರ ನೀಡಿರುವ ಬಳ್ಳಾಜೆ ಸೈಟ್‌ನಲ್ಲಿ ಸಮತಟ್ಟು ಕಾರ್ಯವಾಗಿದ್ದು, ಮಳೆಗೆ ಮಣ್ಣು ಕೊಚ್ಚಿ ಹೋಗಿದೆ. ಹೀಗಾಗಿ ಶೀಘ್ರದಲ್ಲೇ ಇಲ್ಲಿ ತಡೆಗೋಡೆ ನಿರ್ಮಾಣವಾಗಬೇಕು ಜತೆಗೆ ಆಟದ ಮೈದಾನವನ್ನೂ ನಿರ್ಮಿಸಬೇಕು ಎಂಬುದು ಇಲ್ಲಿನ ನಿವಾಸಿಗಳ ಬೇಡಿಕೆಯಾಗಿದೆ.

ಕುಲ ಬಳ್ಳಿ ಯಿಂದ ಕೊಳವೂರು

ಹಿಂದೆ ಕುಲವೂರು ಎಂದು ಕರೆಯಲ್ಪಡುತ್ತಿದ್ದ ಗ್ರಾಮವೀಡಿ ಕುಲ ಎಂಬ ಹೆಸರಿನ ಬಳ್ಳಿ ಕಾಣಿಸುತ್ತಿತ್ತು. ಇದು ನಾಟಿ ಮದ್ದಿಗೆ ಹೆಚ್ಚು ಉಪಯೋಗವಾಗುತ್ತಿತ್ತು. ಕುಲ ಬಳ್ಳಿಯಿರುವ ಊರು ಕುಲವೂರು ಎಂದು ಹೆಸರಿನಿಂದ ಕರೆದು ಈಗ ಕೊಳವೂರು ಆಗಿದೆ. ಈ ಬಳ್ಳಿಯಿಂದ ಊರೆಲ್ಲ ತುಂಬಿರುವ ಕಾರಣ ಈ ಊರು ತಂಪಾಗಿತ್ತು. ಈ ಬಳ್ಳಿ ಜಾನುವಾರುಗಳಿಗೆ ಮೇವಾಗಿ ಹೆಚ್ಚು ಉಪಯೋಗಿಸುತ್ತಾರೆ. ಹೆಚ್ಚು ಕೃಷಿ ಪ್ರದೇಶವಿರುವ ಗ್ರಾಮ ಫಲವತ್ತತೆಯಿಂದ ಕೂಡಿದೆ.

ರಸ್ತೆಗೆ ಬೇಡಿಕೆ: ಗ್ರಾಮದ ಬಳ್ಳಾಜೆ ಸನ್ನಿಕಾಯಿ ಬಳಿ ಡ್ಯಾಮ್‌ನಲ್ಲಿ ವಾಹನ ಓಡಾಟಕ್ಕೆ ಅನುಕೂಲಕರವಾಗಿದೆ. ಆದರೆ ಡ್ಯಾಮ್‌ ದಾಟಿ ಮುಂದೆ ಸಂಪರ್ಕ ರಸ್ತೆ ಇಲ್ಲವಾಗಿದೆ. ಬಳ್ಳಾಜೆ, ಸನ್ನಿಕಾಯಿ, ಬೊಳಿಯ, ಅಟ್ಟೆಪದವು, ಗುಂಡಿಮಾರು, ಕೊಳವೂರು ಭಾಗದ ಜನರಿಗೆ ಧರ್ಮಸ್ಥಳ, ಕಪೆì, ಸಿದ್ದಕಟ್ಟೆ, ಬಿ.ಸಿ. ರೋಡ್‌ಗೆ ಹೋಗಲು ಸರಿಯಾದ ಮಾರ್ಗ ಇಲ್ಲದಿರುವುದರಿಂದ ಅಲ್ಲಿ ಸಂಪರ್ಕ ರಸ್ತೆ ನಿರ್ಮಾಣದ ಅಗತ್ಯವಿದೆ. ಉಡುಪಿ- ಕಾಸರಗೋಡು 400 ಕೆ.ವಿ. ವಿದ್ಯುತ್‌ ತಂತಿ ಈ ಪರಿಸರದಲ್ಲಿ ಹಾದುಹೋಗಿದ್ದು, ಕೃಷಿ ಪ್ರದೇಶ ಬಿಟ್ಟು ಸರಕಾರಿ ಜಾಗದಲ್ಲಿಯೇ ಹಾದುಹೋಗುವಂತೆ ಮಾಡಿದರೆ ಅನುಕೂಲವಾಗಲಿದೆ.

ಸರಕಾರಿ ಆಸ್ಪತ್ರೆ: ಅಗತ್ಯ ದೊಡ್ಡಳಿಕೆ ಡ್ಯಾಮ್‌ನಿಂದ ಮಾರ್ಗದಂಗಡಿಗೆ ನೀರು ಕಾಲುವೆ ಮೂಲಕ ಬರುತ್ತಿದೆ. ಕಾಂಕ್ರೀಟ್‌ ತಡೆಗೋಡೆ ಹಾಗೂ ರಸ್ತೆ ನಿರ್ಮಾಣ ಮಾಡಿದರೆ ಕೃಷಿಕರಿಗೆ ಸಾಗಾಟ ವೆಚ್ಚ ಹಾಗೂ ಇತರ ಖರ್ಚುಗಳು ಕಡಿಮೆಯಾಗಲಿದೆ. ಕೊಳವೂರಿಗೆ ಸರಕಾರಿ ಆಸ್ಪತ್ರೆಯೂ ಬೇಕಿದೆ.. – ಸತೀಶ್‌ ಬಳ್ಳಾಜೆ, ಅಧ್ಯಕ್ಷರು, ಮುತ್ತೂರು ಗ್ರಾಮ ಪಂಚಾಯತ್‌

ಸುಬ್ರಾಯ ನಾಯಕ್‌ ಎಕ್ಕಾರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next