Advertisement

ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಟ ಅಗತ್ಯ

11:54 AM Jul 31, 2017 | |

ಬೆಂಗಳೂರು: ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಹೋರಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. ಇಂತಹ ಚಟುವಟಿಕೆಗಳ ನಿಯಂತ್ರಣಕ್ಕೆ ನಾಗರಿಕರು ಸಹಕಾರ ನೀಡಬೇಕು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಆರ್‌.ಕೆ.ದತ್ತ ತಿಳಿಸಿದ್ದಾರೆ. 

Advertisement

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಯೂನಿಸೆಫ್ ಸಹಕಾರದೊಂದಿಗೆ ಭಾನುವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ “ಫ್ರೀಡಂ ರೈಡ್‌’ ಮಕ್ಕಳ ಸಾಗಾಣಿಕೆ ತಡೆ ಕುರಿತ ಜಾಗೃತಿ ಬೈಕ್‌ ರ್ಯಾಲಿಗೆ ಚಾಲನೆ ನೀಡಿದ ಅವರು, “ದೇಶದಲ್ಲಿ ನಡೆಯುತ್ತಿರುವ ಮಾನವ ಕಳ್ಳ ಸಾಗಾಣೆಯಲ್ಲಿ 2/3 ರಷ್ಟು ಮಹಿಳೆಯರು ಮತ್ತು ಮಕ್ಕಳಿದ್ದಾರೆ.

ಅವರನ್ನು ಹೆಚ್ಚಾಗಿ ಲೈಂಗಿಕ ಶೋಷಣೆ ಮತ್ತು ಬಿಕ್ಷಾಟನೆಗೆ ಬಳಸಿಕೊಳ್ಳಲಾಗುತ್ತಿದೆ. ಮಾನವ ಕಳ್ಳ ಸಾಗಾಣಿಕೆಯಲ್ಲಿ ದೇಶದಲ್ಲಿಯೇ ಕರ್ನಾಟಕ 5ನೇ ಸ್ಥಾನದಲ್ಲಿದೆ. ಇಂಥ ಚಟುವಟಿಕೆಗಳ ತಡೆಗೆ ಪೊಲೀಸ್‌ ಇಲಾಖೆ ಅಗತ್ಯ ಕ್ರಮಕೈಗೊಂಡಿದೆ,’ ಎಂದು ಭರವಸೆ ವ್ಯಕ್ತಪಡಿಸಿದರು. 

“ಮಾನವ ಕಳ್ಳ ಸಾಗಾಣಿಕೆಯ ವಿರುದ್ಧ ಪ್ರತಿಯೊಬ್ಬ ನಾಗರಿಕನೂ ಹೋರಾಡಬೇಕು. ಸಂತ್ರಸ್ತರನ್ನು ರಕ್ಷಿಸಿ ಇಂತಹ ಕೃತ್ಯಗಳನ್ನು ಎಸಗುವರ ವಿರುದ್ಧ ನಾಗರಿಕರು ಪ್ರಕರಣಗಳನ್ನು ದಾಖಲಿಸಬೇಕು. ಪೊಲೀಸ್‌ ಇಲಾಖೆಯಲ್ಲಿಯೂ ಮಾನವ ಕಳ್ಳ ಸಾಗಾಣಿಕೆ ತಡೆಗೆ ಪ್ರತ್ಯೇಕ ವಿಭಾಗವಿದೆ. ಅದು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಸುವುದು ಅಗತ್ಯ,’ ಎಂದು ತಿಳಿಸಿದರು. 

“ಮಕ್ಕಳ ಕಳ್ಳ ಸಾಗಾಣಿಕೆಗೆ ಒಳಗಾದ ಮಕ್ಕಳು ಕಂಡುಬಂದಲ್ಲಿ ನಾಗರಿಕರು ಪೊಲೀಸ್‌ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವಿಷಯ ತಿಳಿಸುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯಬೇಕು. ಪೊಲೀಸ್‌ ಇಲಾಖೆಯಲ್ಲಿರುವ ಪ್ರತ್ಯೇಕ ವಿಭಾಗದ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಪರಿಶೀಲನಾ ಸಭೆ ನಡೆಸಿ ಮಾಹಿತಿ ಕಲೆ ಹಾಕಲಾಗುವುದು,’ ಎಂದು ದತ್ತ ಮಾಹಿತಿ ನೀಡಿದರು. 

Advertisement

ನಂತರ ಮಾತನಾಡಿದ ಆಯೋಗದ ಅಧ್ಯಕ್ಷೆ ಡಾ.ಕೃಪಾ ಅಮರ್‌ ಆಳ್ವ, “ಮಾನವ ಕಳ್ಳ ಸಾಗಾಣೆ ತಡೆಯುವಲ್ಲಿ ಯುವ ಜನತೆಯ ಪಾತ್ರ ಪ್ರಮುಖ. ಹೀಗಾಗಿ ಮಾನವ ಕಳ್ಳ ಸಾಗಾಣಿಕೆಯಂತಹ ಪ್ರಕರಣಗಳು ಕಂಡು ಬಂದರೆ ಕೂಡಲೇ ಪೊಲೀಸರ ಸಹಾಯ ಪಡೆದು ಸಂತ್ರಸ್ತರನ್ನು ರಕ್ಷಿಸುವ ಕೆಲಸ ಮಾಡಬೇಕು,’ ಎಂದು ಯುವಕರಿಗೆ ಕಿವಿಮಾತು ಹೇಳಿದರು. 

“ಮಾನವ ಕಳ್ಳ ಸಾಗಾಣಿಕೆಗೆ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು ಸಿಲುಕುತ್ತಿದ್ದಾರೆ. ಮಕ್ಕಳನ್ನು ಬಿಕ್ಷಾಟನೆಗೆ ಹಾಗೂ ಮಹಿಳೆಯನ್ನು ಲೈಂಗಿಕ ಶೋಷಣೆಗೆ ಒಳಪಡಿಸಲಾಗುತ್ತಿದೆ. ಒಂದೊಮ್ಮೆ ಮಕ್ಕಳು ದಿನಕ್ಕೆ 400-500 ರೂ. ಸಂಪಾದನೆ ಮಾಡದಿದ್ದರೆ ಅವರಿಗೆ ದೈಹಿಕ ಹಿಂಸೆ ಹಾಗೂ ಊಟ ನೀಡಲಾಗುವುದಿಲ್ಲ ಎಂಬ ಅಂಶವನ್ನು ಮಾನವ ಕಳ್ಳ ಸಾಗಾಣಿಕೆಗೆ ಒಳಗಾಗಿದ್ದ ಬಾಲಕಿಯೊಬ್ಬಳು ತಮ್ಮೊಂದಿಗೆ ಹಂಚಿಕೊಂಡಿದ್ದಾಳೆ,’ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಯೂನಿಸೆಫ್ನ ಅಧಿಕಾರಿ ಸೋನಿಕಟ್ಟಿ ಜಾರ್ಜ್‌, ನಿವೃತ್ತ ಪೊಲೀಸ್‌ ಅಧಿಕಾರಿ ಜಿ.ಎ.ಭಾವ ಇದ್ದರು. 

ಜಾಗೃತಿಗಾಗಿ ಬೈಕ್‌ ರ್ಯಾಲಿ
ಮಾನವ ಕಳ್ಳ ಸಾಗಾಣಿಕೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಗದಿಂದ ಆಯೋಜಿಸಿರುವ “ಫ್ರೀಡಂ ರೈಡ್‌’ ಕಾರ್ಯಕ್ರಮದಲ್ಲಿ 250 ಮಂದಿ ಬೈಕ್‌ ಸವಾರರು ಪಾಲ್ಗೊಂಡಿದ್ದು, ಒಟ್ಟಾರೆ 505 ಕಿ.ಮೀ. ರ್ಯಾಲಿ ನಡೆಸಲಿದ್ದಾರೆ. ಬೆಂಗಳೂರಿನಿಂದ ಹೊರಟ ಬೈಕ್‌ ಸವಾರರು ದಾವಣಗೆರೆ ಮೂಲಕ ಬೆಳಗಾವಿಯನ್ನು ತಲುಪಲಿದ್ದು, ಅಲ್ಲಿ ಸಮಾರೋಪ ಸಮಾರಂಭ ಆಯೋಜನೆ ಮಾಡಲಾಗಿದೆ. 

ಸಾಗಾಣಿಕೆಯಲ್ಲಿ 2ನೇ ಸ್ಥಾನ
ದಿ ನ್ಯಾಷನಲ್‌ ಕ್ರೈಂ ರೆಕಾರ್ಡ್‌ ಬ್ಯೂರೋ 2016ರ ವರದಿ ಪ್ರಕಾರ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಾನವ ಕಳ್ಳ ಸಾಗಾಣಿಕೆಯಾಗುತ್ತಿದ್ದು, ಕರ್ನಾಟಕ 2ನೇ ಸ್ಥಾನದಲ್ಲಿದೆ. ನೆರೆಯ ರಾಜ್ಯ ತಮಿಳುನಾಡಿನಲ್ಲಿ 434 ಪ್ರಕರಣಗಳು ನಡೆದಿದ್ದು, ರಾಜ್ಯದಲ್ಲಿ 404 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next