ಹುಣಸೂರು: ಬಾಲ್ಯ ವಿವಾಹ ನಿಷೇಧ, ಮಹಿಳೆಯರ ಸಂರಕ್ಷಣೆ ಬಗ್ಗೆ ಕಾಯ್ದೆ ಜಾರಿಯಲ್ಲಿದೆ. ಆದರೂ, ಆಗಾಗ್ಗೆ ಬಾಲ್ಯವಿವಾಹಗಳು ನಡೆಯುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ಆದ್ದರಿಂದ ಮಹಿಳಾ ಸಂಘಗಳು ಕಾನೂನಿನ ಬಗ್ಗೆ ಅರಿವು ಹೊಂದಿರಬೇಕೆಂದು ತಾಲೂಕು ಮಹಿಳಾ ಸಂರಕ್ಷಣಾಧಿಕಾರಿ ರಂಗಮಣಿ ಆತಂಕ ಅಭಿಪ್ರಾಯಪಟ್ಟರು.
ತಾಲೂಕಿನ ಬಿಳಿಕೆರೆ ಹೋಬಳಿಯ ಶಾಂತಿಪುರದಲ್ಲಿರುವ ಒಡಿಪಿ ಸಂಸ್ಥೆ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಮಾತನಾಡಿದರು. ಹಳ್ಳಿಗಳಲ್ಲಿ ಇಂದಿಗೂ ಬಾಲ್ಯವಿವಾಹ ನಡೆಯುತ್ತಿದೆ. ಬಾಲಕಿಯರನ್ನು ಸಂರಕ್ಷಿಸುವ ಜವಾಬ್ದಾರಿ ಮಹಿಳಾ ಸಂಘಗಳ ಮೇಲಿದೆ ಎಂದರು.
ಮಹಿಳೆಯರು ಕಾನೂನು ನೆರವಿನಿಂದ ಕಿರುಕುಳ ಪ್ರಕರಣಗಳನ್ನು ಎದುರಿಸಬೇಕು. ಸಮಸ್ಯೆ ಹೊಂದಿದ್ದಲ್ಲಿ ಸಿಡಿಪಿಒ ಕಚೇರಿಗೆ ಮಾಹಿತಿ ನೀಡಬೇಕು. ಸ್ವ ಸಹಾಯ ಸಂಘಗಳ ಮಹಿಳೆಯರು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದು ಕೋರಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಆರೋಗ್ಯ ಇಲಾಖೆಯಿಂದ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ, ಪೌಷ್ಟಿಕಾಂಶ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯಗಳು ಹಾಗೂ ಮಹಿಳೆಯರ ವೈಯಕ್ತಿಕ ಶುಚಿತ್ವ, ರೋಗನಿರೋಧಕ ಚುಚ್ಚುಮದ್ದುಗಳ ಮಹತ್ವದ ಬಗ್ಗೆ ತಿಳಿಸಿದರು.
ಒಡಿಪಿ ಸಂಸ್ಥೆಯ ಸುನೀತಾ, ರಶ್ಮಿ ಸೇರಿದಂತೆ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.