Advertisement

ಗ್ರಾಮೀಣ ಖೇಲೋ ಇಂಡಿಯಾ ಬೇಕು

11:48 PM Aug 13, 2022 | Team Udayavani |

90ರ ದಶಕದಲ್ಲಿ ಭಾರತಕ್ಕೆ ಯಾವುದೇ ವಿಶ್ವಮಟ್ಟದ ಕ್ರೀಡಾ ಕೂಟಗಳಲ್ಲಿ ಹೇಳಿಕೊಳ್ಳುವಷ್ಟು ಪದಕಗಳು ಬರುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ ಅನಂತರ ಪರಿಸ್ಥಿತಿಯಲ್ಲಿ ತೀರಾ ಬದಲಾವಣೆಯಾಗಿದೆ. ಭಾರತ ವಿಶ್ವಮಟ್ಟದ ಕೂಟಗಳಲ್ಲಿ ಪದಕಗಳನ್ನು ಗೆಲ್ಲುವುದು ಜಾಸ್ತಿಯಾಗಿದೆ, ಗುಣಮಟ್ಟ ಸುಧಾರಿಸಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳ ಲಾಗುತ್ತಿದೆ. ಹಾಗಾಗಿ ಭಾರತೀಯ ಕ್ರೀಡೆಗೆ ಭವ್ಯ ಭವಿಷ್ಯವನ್ನು ಖಂಡಿತ ನಿರೀಕ್ಷಿಸಬಹುದು.

Advertisement

ಪ್ರಸ್ತುತ ಕಾಲೇಜು ಹಂತದ ಕ್ರೀಡಾಪಟುಗಳ ಪ್ರತಿಭೆಯನ್ನು ಹೊರತರಲು ಕೇಂದ್ರ ಸರಕಾರ ಖೇಲೋ ಇಂಡಿಯಾ ವಿಶ್ವವಿದ್ಯಾಲಯ ಕ್ರೀಡಾಕೂಟಗಳಿಗೆ ಚಾಲನೆ ನೀಡಿದೆ. ಇದು ಒಳ್ಳೆಯ ಕ್ರಮ. ಆದರೆ ಇಲ್ಲಿ ಗಮನಿಸ ಬೇಕಾಗಿರುವ ವಿಷಯಗಳಿವೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಗಿದ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಪದಕ ಗೆದ್ದ ಶೇ. 50ಕ್ಕೂ ಅಧಿಕ ಕ್ರೀಡಾಪಟುಗಳು ಗ್ರಾಮೀಣ ಭಾಗದವರು. ಹಾಗಾಗಿ ಗ್ರಾಮೀಣ ಪ್ರತಿಭೆಗಳನ್ನು ಪ್ರೋತ್ಸಾಹಿಸಲು, ಬೆಳೆಸಲು ಅವರಿಗೆಂದೇ ಖೇಲೋ ಇಂಡಿಯಾದಂತಹ ಕ್ರೀಡಾಕೂಟ ಆರಂಭಿಸಬೇಕು. ಆಗ ಪ್ರತಿಭೆಗಳ ಗಣಿಯಾಗಿರುವ ಗ್ರಾಮೀಣ ಪ್ರದೇಶದಿಂದ ಅದ್ಭುತಗಳನ್ನು ಹೊರತೆಗೆಯಲು ಸಾಧ್ಯ.

ಶಾಲಾಹಂತದಲ್ಲೇ ತರಬೇತಿ ಅಗತ್ಯ: ವಿದೇಶಗಳಲ್ಲಿ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಮಕ್ಕಳನ್ನು ಶಾಲಾ ಹಂತದಲ್ಲೇ ಗುರುತಿಸಲಾಗುತ್ತದೆ. ಅವರಿಗೆ ಮಾಮೂಲಿ ಶಿಕ್ಷಣವನ್ನು ಅಗತ್ಯವಿರುವಷ್ಟು ಮಾತ್ರ ನೀಡಿ, ಉಳಿದಂತೆ ಪೂರ್ಣವಾಗಿ ಕ್ರೀಡೆಯಲ್ಲಿ ತೊಡಗಿಸ ಲಾಗುತ್ತದೆ. ಆದ್ದರಿಂದಲೇ ಅಲ್ಲಿ ಪದಕ ಗಳ ಸಂಖ್ಯೆ ಜಾಸ್ತಿಯಿರುತ್ತದೆ. ಅಂತಹ ಪ್ರಯೋಗವನ್ನು ಭಾರತದಲ್ಲೂ ಮಾಡ ಬೇಕು. ಅರ್ಥಾತ್‌ ಖೇಲೋ ಇಂಡಿಯಾ ವನ್ನು ಶಾಲಾಹಂತಕ್ಕೂ ತರಬೇಕು. ಮಕ್ಕಳನ್ನು ಈ ಹಂತದಲ್ಲೇ ಪಳಗಿಸಬೇಕು.

ಕೋಚ್‌ಗಳಿಗೂ ತರಬೇತಿ ಬೇಕು: ಎಲ್ಲಕ್ಕಿಂತ ಅತೀ ಮುಖ್ಯವಾಗಿರುವುದು ಕೋಚ್‌ಗಳಿಗೂ ಆಗಾಗ ಅತ್ಯಾಧುನಿಕ ತರಬೇತಿ ನೀಡುವುದು. ಕಾಲಕಾಲಕ್ಕೆ ತಂತ್ರ ಜ್ಞಾನ ಬದಲಾಗುತ್ತಿರುತ್ತದೆ, ತರಬೇತಿ ವಿಧಾನವೂ ಬದಲಾಗುತ್ತಿರುತ್ತದೆ. ಅದನ್ನು ಕೋಚ್‌ಗಳಿಗೆ ಆ ಕೂಡಲೇ ಕಲಿಸಬೇಕು. ಹೊಸತನ್ನು ಪರಿಚಯಿಸಬೇಕು. ಅವರು ಹೊಸ ವಿಧಾನಗಳಿಗೆ ತತ್‌ಕ್ಷಣ ಬದಲಾವಣೆ ಗೊಂಡಲ್ಲಿ ಸಹಜವಾಗಿ ಕ್ರೀಡಾಪಟುಗಳ ಗುಣಮಟ್ಟ ಸುಧಾರಿಸುತ್ತದೆ.
ಕೋಚ್‌ಗಳೂ ಹೊಣೆ ಹೊರಬೇಕು: ಪ್ರಸ್ತುತ ಕ್ರೀಡಾಪಟುಗಳ ಮೇಲೆ ಉದ್ದೀಪನ ಔಷಧ ಸೇವಿಸುವುದಕ್ಕೆ ಎಷ್ಟೇ ನಿರ್ಬಂಧಗಳಿದ್ದರೂ ಸೇವನೆ ಯಂತೂ ನಡೆದೇ ಇದೆ. ಅದರಿಂದ ಕ್ರೀಡಾಪಟುಗಳ ಭವಿಷ್ಯವೇ ಹಾಳಾಗು ತ್ತಿದೆ. ಕೆಲವೊಮ್ಮೆ ಕ್ರೀಡಾಪಟುಗಳು ಉದ್ದೀಪನ ತೆಗೆದುಕೊಳ್ಳುವುದರಲ್ಲಿ ಪರೋಕ್ಷವಾಗಿ ಕೋಚ್‌ಗಳ ನೆರವೂ ಇರುತ್ತದೆ ಅಥವಾ ತಿದ್ದಿ ಹೇಳುವುದರಲ್ಲಿ ಸೋತಿರುತ್ತಾರೆ. ಹಾಗಾಗಿ ಕೋಚ್‌ಗಳಿಗೆ ಈ ವಿಚಾರವನ್ನು ಮನದಟ್ಟು ಮಾಡಬೇಕು. ಕ್ರೀಡಾಪಟುವೊಬ್ಬ ಉದ್ದೀಪನ ತೆಗೆದುಕೊಂಡಿದ್ದು ಸಾಬೀತಾದರೆ, ಇಂತಹ ಕೋಚ್‌ವೊಬ್ಬರ ಶಿಷ್ಯ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಬೇಕು.

ಆಯ್ಕೆಯಲ್ಲಿ ಸುಧಾರಣೆ ಬೇಕು: ಕ್ರೀಡಾಪಟುಗಳ ಆಯ್ಕೆಯಲ್ಲಿ ನಾವು ಸುಧಾರಣೆ ಕಾಣುತ್ತಾ ಇದ್ದೇವೆ. ಅದೇ ಕಾರಣಕ್ಕೆ ಪದಕ ವಿಜೇತರ ಸಂಖ್ಯೆ ಏರುತ್ತಿರು ವುದು. ಅದು ಇನ್ನೂ ಹೆಚ್ಚಬೇಕು. ಪ್ರತಿಭಾವಂತರಿಗೆ ಮಾತ್ರ ಯಾವುದೇ ಕೂಟಗಳಿಗೆ ಆದ್ಯತೆ ನೀಡಬೇಕು. ಉತ್ತರ, ದಕ್ಷಿಣ, ಆ ರಾಜ್ಯ, ಈ ರಾಜ್ಯ, ಅವರ ಸಂಬಂಧಿ, ಇವರ ಸಂಬಂಧಿ ಎನ್ನುವುದನ್ನೆಲ್ಲ ಬದಿಗಿಟ್ಟು ಕೇವಲ ಪ್ರತಿಭೆ, ಸಾಮರ್ಥ್ಯಕ್ಕೆ ಮಾತ್ರ ಪ್ರಾಮುಖ್ಯ ಕೊಡಬೇಕು. ಆಗ ತನ್ನಿಂತಾನೇ ವ್ಯವಸ್ಥೆ ಬದಲಾಗುತ್ತದೆ.

Advertisement

-ಕೆ.ವೈ. ವೆಂಕಟೇಶ್‌,
ಪದ್ಮಶ್ರೀ ಪುರಸ್ಕೃತ ದಿವ್ಯಾಂಗ ಕ್ರೀಡಾಪಟು

Advertisement

Udayavani is now on Telegram. Click here to join our channel and stay updated with the latest news.

Next