ಕುಮಟಾ: ಹಿಂದೂ ಶ್ರೀಮಂತ ಭಾಷೆಯಾಗಳಲ್ಲಿ ಕೊಂಕಣಿ ಭಾಷೆಯೂ ಒಂದಾಗಬೇಕು. ಆ ನಿಟ್ಟಿನಲ್ಲಿ ಅತೀ ಹೆಚ್ಚು ಕೊಂಕಣಿ ಭಾಷೆ ಮಾತನಾಡುವ ಪ್ರದೇಶದ ಪ್ರತಿಯೊಂದು ಶಾಲೆಗಳಲ್ಲಿ ಒಬ್ಬ ಕೊಂಕಣಿ ಭಾಷೆ ಶಿಕ್ಷಕರನ್ನು ನೇಮಿಸುವಂತೆ ಮುಂಬರುವ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಕೊಂಕಣಿ ಪರಿಷತ್ ಕುಮಟಾ ಇವರು ಪಟ್ಟಣದ ದೇವರಹಕ್ಕಲ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಕೊಂಕಣಿ ಮಾನ್ಯತಾ ದಿವಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಂದು ಪ್ರದೇಶದ ಭಾಷೆಗನುಗುಣವಾಗಿ ಆಯಾ ಭಾಷೆಯ ಒಂದು ಶಿಕ್ಷಕರನ್ನು ನೇಮಿಸಿದರೆ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಆಸಕ್ತಿ ದೊರೆಯುವುದರ ಜೊತೆ ಶೀಘ್ರ ಮನವರಿಕೆಯಾಗಲು ಅನುಕೂಲವಾಗುತ್ತದೆ. ಮಾತೃ ಭಾಷೆ ಬಗ್ಗೆ ಪ್ರತಿಯೊಬ್ಬನಿಗೂ ಗೌರವ ಹಾಗೂ ಅಭಿಮಾನವಿರಬೇಕು. ನಮ್ಮ ದೇಶದ ಸಾವಿರಾರು ಭಾಷೆಗಳಲ್ಲಿ ಕೊಂಕಣಿ ಭಾಷೆಯೂ ಒಂದು. ಆದರೆ ಕೊಂಕಣಿ ಭಾಷೆ ಇನ್ನೂ ಬೆಳೆಯಬೇಕಿದೆ. ಆ ನಿಟ್ಟಿನಲ್ಲಿ ಕಾಸರಗೋಡು ಚಿನ್ನಾರಂತಹ ಸಾಕಷ್ಟು ಜನರು ಶ್ರಮಿಸುತ್ತಿದ್ದಾರೆ. ಕೊಂಕಣಿ ಭಾಷೆ ಬೆಳೆಯುವ ನಿಟ್ಟಿನಲ್ಲಿ ಯುವಸಮುದಾಯವೂ ಕೈಜೋಡಿಸಬೇಕು ಎಂದ ಅವರು, ನನ್ನಿಂದಾದ ಸಹಾಯವನ್ನು ಪ್ರಾಮಾಣಿಕ ವಾಗಿ ಮಾಡುತ್ತೇನೆ ಎಂದರು.
ಮಿರ್ಜಾನ ಸೇಂಟ್ ಜೋಸೆಫ್ ಚರ್ಚ್‌ನ ಪ್ಯಾರಿಶ್ ಪ್ರೀಸ್ಟ್ ಹಾಗೂ ಫಾ| ಎಗ್ನೆಲ್ ಇನ್ಸಿಟ್ಯೂಟ್ ಆಫ್ ಹೋಟೆಲ್ ಮ್ಯಾನೆಜ್‌ಮೆಂಟ್‌ನ ಪ್ರಾಂಶುಪಾಲ ಫಾ| ವಿಲ್ಸನ್ ಪೌಲ್ ಕಾರ್ಯಕ್ರಮ ಉದ್ಘಾಟಿಸಿ, ಕೊಂಕಣಿ ಭಾಷೆ ಉಳಿವಿಗಾಗಿ ಹೆಚ್ಚೆಚ್ಚು ಸಮಾಜಮುಖೀ ಕಾರ್ಯಕ್ರಮಗಳು ನಡೆಯಬೇಕಿದೆ. ಸಮಾಜಕ್ಕೆ ತಕ್ಕಂತೆ ಬೇರೆ ಬೇರೆ ಭಾಷೆ ಬಳಸಿದರೂ ಮನೆಗಳಲ್ಲಿ ಮಾತೃಭಾಷೆಯನ್ನೇ ಉಪಯೋಗಿಸಿ. ಅದೇರೀತಿ ಕೊಂಕಣಿ ಸಮುದಾಯದ ಯುವಕರು ಭಾಷೆ ಬೆಳವಣಿಗೆಗಾಗಿ ಹೆಚ್ಚೆಚ್ಚು ಶ್ರಮಿಸಿ ಎಂದರು.
ಕೊಂಕಣಿ ಪರಿಷತ್ ಉಪಾಧ್ಯಕ್ಷ ಮುರುಲೀಧರ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಂಕಣಿ ಭಾಷೆ ಮಾನ್ಯತೆಗಾಗಿ ಅನೇಕರು ಶ್ರಮಿಸಿದ್ದಾರೆ. ಪ್ರತಿಯೊಂದು ಭಾಷೆಯೂ ಸಜೀವ. ಆಯಾ ಸಮುದಾಯದ ಜವಾಬ್ದಾರಿ ಮತ್ತು ಕರ್ತವ್ಯ ಮೇಲೆ ಆ ಭಾಷೆ ಶಾಶ್ವತವಾಗಿ ಜೀವಂತವಾಗಿರುತ್ತದೆ. ಪ್ರತಿಯೊಬ್ಬನೂ ತಮ್ಮ ತಮ್ಮ ಮಾತೃ ಭಾಷೆಯ ಬಗ್ಗೆ ಪ್ರೀತಿ, ಗೌರವ ಹೊಂದಿರಬೇಕು. ಸರ್ಕಾರ ಕೊಂಕಣಿ ಅಕಾಡೆಮಿ ಅಧ್ಯಕ್ಷರನ್ನಾಗಿ ಉತ್ತರ ಕನ್ನಡದ ವ್ಯಕ್ತಿಯನ್ನೇ ನೇಮಿಸಬೇಕು. ಅದಲ್ಲದೇ, ಮಾನ್ಯತೆ ಪಡೆದ ಕೊಂಕಣಿ ಭಾಷೆಯ ಶಿಕ್ಷಕರನ್ನು ಆಯಾ ಭಾಗಕ್ಕೆ ತಕ್ಕಂತೆ ಸರ್ಕಾರ ಇನ್ನೂ ನೇಮಕ ಮಾಡಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಾಗಿದೆ ಎಂದರು.
ಕೊಂಕಣಿ ಪರಿಷತ್ ಕುಮಟಾ ಘಟಕದ ಅಧ್ಯಕ್ಷ ಅರುಣ ಎಸ್. ಉಭಯಕರ ಸ್ವಾಗತಿಸಿದರು. ಚಿದಾನಂದ ಭಂಡಾರಿ ಮತ್ತು ನಿರ್ಮಲಾ ಡಿ. ಪ್ರಭು ಪರಿಚಯಿಸಿದರು. ವಿಠuಲ ನಾಯಕ ವೇದಿಕೆಯಲ್ಲಿದ್ದರು. ಕೊಂಕಣಿ ಭಾಷೆಯ ಸಮಗ್ರ ಪರಿಚಯದ ಪುಸ್ತಕ ಬಿಡುಗಡೆಗೊಳಿಸಲಾಯಿತು. ಕಾನಡಾ ವೃತ್ತ ವಾರ ಪತ್ರಿಕೆಯ ಸಂಪಾದಕ ಶ್ರೀಕಾಂತ ಶಾನಭಾಗರನ್ನು ಸನ್ಮಾನಿಸಲಾಯಿತು. ನಂತರ ಕೊಂಕಣಿ ಪರಿಷತ್ ವತಿಯಿಂದ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮನರಂಜನಾ ಕಾರ್ಯಕ್ರಮ ಜರುಗಿದವು.