Advertisement

ರಸ್ತೆ ಅಗಲೀಕರಣಕ್ಕೆ ಸಹಕಾರ ಅಗತ್ಯ: ಬಾಲಚಂದ್ರ

12:21 PM May 18, 2019 | Team Udayavani |

ಮೂಡಲಗಿ: ಕಲ್ಲೋಳಿ ಪಟ್ಟಣದ ಸಾರ್ವಜನಿಕರ ಒತ್ತಾಯ ಮೇರೆಗೆ ಈಗಿರುವ ರಸ್ತೆ ಮಧ್ಯದಿಂದ 15 ಮೀಟರ್‌ ರಸ್ತೆ ಅಗಲೀಕರಣ ಬದಲಾಗಿ 12 ಮೀಟರ್‌ ರಸ್ತೆಯನ್ನು ಅಗಲೀಕರಣ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

Advertisement

ಇಲ್ಲಿಗೆ ಸಮೀಪದ ಕಲ್ಲೋಳಿ ಪಟ್ಟಣದ ಹೊರವಲಯದಲ್ಲಿರುವ ಬಿಜೆಪಿ ಮುಖಂಡ ಈರಪ್ಪ ಕಡಾಡಿ ನಿವಾಸದಲ್ಲಿ ಜರುಗಿದ ಮುಖಂಡರ ಹಾಗೂ ಪಟ್ಟಣ ಪಂಚಾಯತ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಜತ್ತ-ಜಾಂಬೋಟಿ ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರ ಹಾಗೂ ವ್ಯಾಪಾರಸ್ಥರ ಸಹಕಾರ ಅಗತ್ಯವಾಗಿದೆ ಎಂದರು.

ಜತ್ತ-ಜಾಂಬೋಟಿ ರಸ್ತೆ ನಿರ್ಮಾಣಕ್ಕೆ ಈ ಮೊದಲು ಸರ್ಕಾರ 280 ಕೋಟಿ ರೂ. ವೆಚ್ಚ ನಿಗದಿಪಡಿಸಿದೆ. ಕಲ್ಲೋಳಿ ಪಟ್ಟಣದ ಸಾರ್ವಜನಿಕರ ಬೇಡಿಕೆಯಂತೆ ರಸ್ತೆಯ ಮಧ್ಯದ ವಿಭಾಜಕವನ್ನು 12 ಮೀಟರ್‌ ಅಗಲೀಕರಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಈ ರಸ್ತೆ ನಿರ್ಮಾಣದಲ್ಲಿ ಅಂಗಡಿ ಮುಂಗಟ್ಟು ಕಳೆದುಕೊಳ್ಳುವ ಸಣ್ಣಪುಟ್ಟ ವ್ಯಾಪಾರಸ್ಥರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ರಸ್ತೆ ಅಭಿವೃದ್ಧಿಯಿಂದ ಕೆಲವರಿಗೆ ಅನ್ಯಾಯವಾಗಬಹುದು. ಆದರೂ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ರಸ್ತೆಯ ಮಧ್ಯದ ವಿಭಾಜಕ ನಿರ್ಮಾಣಕ್ಕೆ ತಮ್ಮ ಸಹಕಾರ ನೀಡಬೇಕು ಎಂದರು.ಘಟಪ್ರಭಾ ನದಿಗೆ ನೀರು: ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಬೇಸಿಗೆಯ ಬವಣೆಯಿಂದ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಮೇ 24ರಿಂದ ಘಟಪ್ರಭಾ ನದಿಗೆ ನೀರು ಬಿಡಲಾಗುತ್ತಿದೆ. ಈಗಾಗಲೇ ಹಿಡಕಲ್ ಜಲಾಶಯದಲ್ಲಿ 4.15 ಟಿಎಂಸಿ ನೀರು ಸಂಗ್ರಹವಿದೆ. ಘಟಪ್ರಭಾ ನದಿ ಜೊತೆ ಜಿಎಲ್ಬಿಸಿ ಮತ್ತು ಜಿಆರ್‌ಬಿಸಿ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರನ್ನು ಹರಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಉದ್ಭವಿಸಿರುವ ನೀರಿನ ಬಿಕ್ಕಟ್ಟನ್ನು ಪರಿಹರಿಸಲು ಅರಣ್ಯ ಮತ್ತು ಪರಿಸರ ಸಚಿವ ಸತೀಶ ಜಾರಕಿಹೊಳಿ, ಬೆಳಗಾವಿ ಪ್ರಾದೇಶಿಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದರು.

ಸಭೆಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಈರಪ್ಪ ಕಡಾಡಿ, ಕಾಂಗ್ರೆಸ್‌ ಮುಖಂಡ ಬಾಳಪ್ಪ ಬೆಳಕೂಡ, ಹಿರಿಯ ಸಹಕಾರಿ ಭೀಮಪ್ಪ ಕಡಾಡಿ, ಯುವ ಮುಖಂಡರಾದ ಸುಭಾಸ ಕುರಬೇಟ, ರಾವಸಾಬ ಬೆಳಕೂಡ, ಪ್ರಭಾಶುಗರ ನಿರ್ದೇಶಕ ಮಹಾಂತೇಶ ಕಪ್ಪಲಗುದ್ದಿ, ತಾಪಂ ಮಾಜಿ ಸದಸ್ಯ ಅಶೋಕ ಮಕ್ಕಳಗೇರಿ, ತಾಪಂ ಮಾಜಿ ಅಧ್ಯಕ್ಷ ಉಮೇಶ ಬೂದಿಹಾಳ, ಬಸವಂತ ದಾಸನವರ, ವಸಂತ ತಹಶೀಲ್ದಾರ, ಬಸಪ್ಪ ಯಾದಗೂಡ, ಪಟ್ಟಣ ಪಂಚಾಯತಿ ಸದಸ್ಯರು, ಮುಖಂಡರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next