Advertisement
ತಾಲೂಕಿನ ಹೊಸೂರನಿಂದ ಕಲಬುರಗಿ ವರೆಗೆ ರಾಜ್ಯ ಹೆದ್ದಾರಿ, ಮಹಾರಾಷ್ಟ್ರ ಗಡಿಯಿಂದ ಅಫಜಲಪುರ ಮಾರ್ಗವಾಗಿ ಕಲಬುರಗಿ ವರೆಗೆ ರಾಷ್ಟ್ರೀಯ ಹದ್ದಾರಿ ಜಾಲವಿದೆ. ಉಳಿದ ಅನೇಕ ಕಡೆಗಳಲ್ಲಿ ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿಗಳಿವೆ. ಅವುಗಳು ನಿರ್ಮಾಣವಾಗಿ ಅನೇಕ ವರ್ಷಗಳೇ ಕಳೆದಿವೆ. ಈಗ ಅವು ಕಿತ್ತುಕೊಂಡು ಹೋಗಿ ಮೊಳಕಾಲುದ್ದ ಹೊಂಡಗಳು ಬಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ತಂದಿವೆ. ಹೆದ್ದಾರಿಗಳನ್ನು ಸರಿ ಮಾಡಬೇಕಿರುವ ಹೆದ್ದಾರಿ ಪ್ರಾಧಿಕಾರದವರು ಮತ್ತು ಇನ್ನಿತರ ಸಂಬಂಧಪಟ್ಟ ಇಲಾಖೆಯವರು ಸಮಸ್ಯೆ ಕಂಡು ಮೌನಕ್ಕೆ ಜಾರಿದ್ದಾರೆ. ಇವರು ಮೌನಕ್ಕೆ ಜಾರಿದ್ದರಿಂದ ನಿತ್ಯ ಒಂದಿಲ್ಲೊಂದು ರಸ್ತೆ ಅಪಘಾತಗಳು ಸಂಭವಿಸಿ ಜೀವ ಹಾನಿ ಸಂಭವಿಸುತ್ತಿವೆ.
Related Articles
Advertisement
ಹದಗೆಟ್ಟ ಹೆದ್ದಾರಿಗಳು, ರಸ್ತೆಗಳಿಂದಾಗಿ ಜನಸಾಮಾನ್ಯರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಹಾಳಾದ ರಸ್ತೆಗಳಲ್ಲಿ ವಾಹನ ಸವಾರಿ ಮಾಡುವುದು ದುಸ್ತರವಾಗಿದೆ. ನಿತ್ಯ ಒಂದಿಲ್ಲೊಂದು ಅಪಘಾತಗಳು ಸಂಭವಿಸಿ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ವಾಹನ ಚಾಲಕರು ಅಫಜಲಪುರದ ರಸ್ತೆಗಳೆಂದರೆ ಭಯಗೊಳ್ಳುವಂತ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಜನಸಾಮಾನ್ಯರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಜಿಲ್ಲೆಗೆ ಬಂದಿದ್ದಾಗ ತಾಲೂಕಿನಲ್ಲಿರುವ ಹೆದ್ದಾರಿಗಳ ದುರಸ್ತಿಗೆ ಅನುದಾನ ನೀಡುವಂತೆ ಮನವಿ ಮಾಡಿಕೊಳ್ಳ ಲಾಗಿದೆ. ಅನುದಾನ ಬಂದ ಬಳಿಕ ಆದಷ್ಟು ಬೇಗ ಹೆದ್ದಾರಿಗಳನ್ನು ದುರಸ್ತಿ ಮಾಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುತ್ತದೆ. -ಎಂ.ವೈ. ಪಾಟೀಲ, ಶಾಸಕ
ಹೆದ್ದಾರಿಗಳು ಕೇವಲ ಹೆಸರಿಗಷ್ಟೇ ಇವೆ. ಇವು ಗ್ರಾಮೀಣ ರಸ್ತೆಗಳಿಗಿಂತ ಕಡೆಯಾಗಿವೆ. ಎಲ್ಲಿ ನೋಡಿದರೂ ಹೊಂಡಗಳು ತುಂಬಿದ ಹೆದ್ದಾರಿಯಲ್ಲಿ ಹಗಲಿನಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ರಾತ್ರಿ ಸಂದರ್ಭದಲ್ಲಿ ಸಂಚರಿಸೋದರಿಂದ ಯಮಲೋಕದ ಬಾಗಿಲು ಬಡಿದು ಬಂದಂತಾಗುತ್ತಿದೆ. ಸಂಬಂಧಪಟ್ಟವರು ಕೂಡಲೇ ಹೆದ್ದಾರಿಗಳ ದುರಸ್ತಿ ಮಾಡಿಸಬೇಕು. -ಜೆ.ಎಂ. ಕೊರಬು, ಸಮಾಜ ಸೇವಕ
-ಮಲ್ಲಿಕಾರ್ಜುನ ಹಿರೇಮಠ