Advertisement

“ಅಗ್ನಿಪಥ’ದಲ್ಲಿ ಯಾವುದೇ ಬದಲಾವಣೆ ಮಾಡಲ್ಲ: ಲೆ.ಜ.ಅನಿಲ್‌ ಪುರಿ ಸ್ಪಷ್ಟನೆ

08:26 AM Jun 22, 2022 | Team Udayavani |

ನವದೆಹಲಿ: ಸೇನಾ ನೇಮಕಾತಿಗೆ ಸಂಬಂಧಿಸಿದ ಅಗ್ನಿಪಥ ಯೋಜನೆಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ. ಸೇನೆಯಲ್ಲಿರುವ ಸಾಂಪ್ರದಾಯಿಕ ರೆಜಿಮೆಂಟಲ್‌ ವ್ಯವಸ್ಥೆ ಮುಂದುವರಿಯಲಿದೆ ಎಂದು ಸೇನಾ ವ್ಯವಹಾರಗಳ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಲೆ.ಜ.ಅನಿಲ್‌ ಪುರಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

Advertisement

ಅಗ್ನಿಪಥಕ್ಕೆ ಸಂಬಂಧಿಸಿ ಸುಳ್ಳು ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.

ನೇಮಕಗೊಳ್ಳುವ ಶೇ.75ರಷ್ಟು ಮಂದಿಗೆ 4 ವರ್ಷಗಳ ಸೇವಾವಧಿ ನೀಡುವ ಕುರಿತು ಮೂರೂ ಪಡೆಗಳ ನಡುವೆ ದೀರ್ಘ‌ಕಾಲದಿಂದಲೂ ಚರ್ಚೆ ನಡೆಸುತ್ತಾ ಬರಲಾಗಿದೆ. ಇದೊಂದು ಅತ್ಯಗತ್ಯ ಸುಧಾರಣೆ. 1989ರಿಂದಲೂ ಈ ಕುರಿತು ಸಮಾಲೋಚನೆ ನಡೆದಿದೆ. ಯೋಜನೆ ಬಗ್ಗೆ ನಿರ್ಧಾರ ಕೈಗೊಳ್ಳುವಲ್ಲಿ ಸಂಬಂಧಪಟ್ಟ ಎಲ್ಲರೂ ಭಾಗಿಯಾಗಿದ್ದರು ಎಂದೂ ಲೆ.ಜ.ಪುರಿ ಹೇಳಿದ್ದಾರೆ.

2023ರ ಜುಲೈ ವೇಳೆಗೆ ಅಗ್ನಿವೀರರ ಮೊದಲ ಬ್ಯಾಚ್‌ ಅನ್ನು ನಿಯೋಜಿಸಲಾಗುತ್ತದೆ. “ಅಗ್ನಿವೀರ್‌ ವಾಯು’ ಯೋಜನೆ ಮೂಲಕ ವಾಯುಪಡೆಗೆ ಯೋಧರನ್ನು ನೇಮಕ ಮಾಡಲಾಗುತ್ತದೆ ಎಂದು ಏರ್‌ ಮಾರ್ಷಲ್‌ ಎಸ್‌.ಕೆ. ಝಾ ಹೇಳಿದ್ದಾರೆ. ಪಾರದರ್ಶಕ ಆಯ್ಕೆ ಪ್ರಕ್ರಿಯೆಯ ಮೂಲಕವೇ ಅಗ್ನಿವೀರರನ್ನು ನೇಮಕ ಮಾಡಲಾಗುತ್ತದೆ ಎಂದೂ ತಿಳಿಸಿದ್ದಾರೆ.

ಸುಪ್ರೀಂಗೆ ಕೇವಿಯಟ್‌:
ಈ ನಡುವೆ, ಮಂಗಳವಾರ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಕೇವಿಯಟ್‌ ಅರ್ಜಿ ಸಲ್ಲಿಸಿದೆ. ಅಗ್ನಿಪಥ ಯೋಜನೆ ಕುರಿತ ಅರ್ಜಿಗಳಿಗೆ ಸಂಬಂಧಿಸಿ ಯಾವುದೇ ಆದೇಶ ಹೊರಡಿಸುವ ಮುನ್ನ ಸರ್ಕಾರದ ವಾದವನ್ನು ಆಲಿಸಬೇಕು ಎಂದೂ ಮನವಿ ಮಾಡಿದೆ. ಇದೇ ವೇಳೆ, ನಿವೃತ್ತ ಅಗ್ನಿವೀರರಿಗೆ ಮರ್ಚೆಂಟ್‌ ನೌಕೆಯಲ್ಲಿ ಹುದ್ದೆ ನೀಡುವ ಸಂಬಂಧ ಮಂಗಳವಾರ ನೌಕಾಪಡೆ ಮತ್ತು ಬಂದರು ನಿರ್ದೇಶನಾಲಯ ಒಪ್ಪಂದ ಮಾಡಿಕೊಂಡಿವೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next