Advertisement

ದೌರ್ಜನ್ಯದ ವಿರುದ್ದ ಸಂಘರ್ಷದ ಆಂದೋಲನ ಅಗತ್ಯ: ಪಾಟ್ಕರ್‌

04:46 PM Jan 15, 2022 | Shwetha M |

ವಿಜಯಪುರ: 22ನೇ ಶತಮಾನದ ಈ ಸಂದರ್ಭದಲ್ಲೂ ಮೂಲ ಸೌಲಭ್ಯಕ್ಕಾಗಿ ಹೋರಾಡುವ ದುಸ್ಥಿತಿ ಇದೆ. ಮಹಿಳೆಯರು ತಮ್ಮ ಹಕ್ಕುಗಳ ಸಂರಕ್ಷಣೆ ಜೊತೆಗೆ ತಮ್ಮ ಮೇಲಾಗುವ ದೌರ್ಜನ್ಯದ ವಿರುದ್ಧ ಸಂಘರ್ಷದ ಆಂದೋಲನ ರೂಪಿಸಬೇಕು ಎಂದು ಖ್ಯಾತ ಪರಿಸರವಾದಿ ಮೇಧಾ ಪಾಟ್ಕರ್‌ ಕರೆ ನೀಡಿದರು.

Advertisement

ನಗರದ ಎಎಸ್‌ಪಿ ವಾಣಿಜ್ಯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಮಹಿಳೆ ಎಲ್ಲ ರಂಗಗಳಲ್ಲೂ ತನ್ನ ಸಾಮರ್ಥ್ಯ ಸಾಬೀತುಪಡಿಸಿ ಸಾಧನೆ ಮಾಡಿದ್ದರೂ ಮಹಿಳೆಯ ಮೇಲಿನ ದೌರ್ಜನ್ಯ ನಿಂತಿಲ್ಲ ಎಂದು ವಿಷಾದಿಸಿದರು.

ಯಾವುದೇ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯದ ಸಂದರ್ಭದಲ್ಲಿ ಸಮಾಜದ ಎಲ್ಲ ಮಹಿಳೆಯರೂ ಒಗ್ಗೂಡಿ ಹೋರಾಟಕ್ಕೆ ಇಳಿಯಬೇಕು. ಸಂಘರ್ಷದ ಮೂಲಕ ಮಹಿಳಾ ಸಂರಕ್ಷಣೆಯ ಆಂದೋಲನ ರೂಪಿಸಬೇಕು ಎಂದು ಸಲಹೆ ನೀಡಿದರು.

ನಾಲ್ಕು ಗೋಡೆಯ ಮಧ್ಯದಲ್ಲಿ ಜೀವಿಸು ಮಹಿಳೆಗೆ ತನ್ನ ಸ್ವಾಭಿಮಾನದ ಜೀವನ ನಡೆಸಲು ಸಮಾಜದ ಮುಖ್ಯವಾಹಿನಿಗೆ ಬರುವುದು ಅಗತ್ಯವಾಗಿದೆ. ತನ್ನ ಹಕ್ಕುಗಳ ಸಂರಕ್ಷಣೆ ಹಾಗೂ ವ್ಯಕ್ತಿಗತ ಅಭ್ಯುದಯಕ್ಕಾಗಿ ಮಹಿಳೆ ಶಿಕ್ಷಣ ಪಡೆಯುವುದೊಂದೇ ದೊಡ್ಡ ಸಾಧನ ಎಂದರು.

ಮಹಿಳೆಯನ್ನು ದೇವತೆ ಎಂದು ಪೂಜಿಸುವ ದೇಶದಲ್ಲೇ ಮಹಿಳೆಯನ್ನು ಇನ್ನಿಲ್ಲದ ರೀತಿಯಲ್ಲಿ ಅಪಮಾನಿಸಲಾಗುತ್ತಿದೆ. ಆಕೆಯ ಮೇಲೆ ನಿರಂತರ ಒಂದಲ್ಲ ಒಂದು ರೀತಿಯಲ್ಲಿ ದೌರ್ಜನ್ಯ, ಶೋಷಣೆ ಮಾಡಲಾಗುತ್ತದೆ. ಇಂಥ ಸಂದರ್ಭಲ್ಲಿ ಮಹಿಳೆ ತನ್ನನ್ನು ರಕ್ಷಿಸಿಕೊಳ್ಳಲು ಸಂಘಟಿತ ಹೋರಾಟಕ್ಕೆ ಇಳಿಯುವುದು ಇಂದಿನ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

Advertisement

ಕೃಷಿ-ಕೂಲಿ ಕಾರ್ಮಿಕರು, ರೈತ ಮಹಿಳೆಯರು ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿಯಾದಲ್ಲಿ ಮಾತ್ರವೇ ದೇಶದ ನೈಜ ಅಭಿವೃದ್ಧಿ, ಪ್ರಗತಿ ಸಾಧ್ಯ. ಹೀಗಾಗಿ ಮಹಿಳೆ ಸಹಯೋಗ ಇಲ್ಲದೇ ಸಮಾಜದಲ್ಲಿ ಏನೂ ನಡೆಯುವುದಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಪ್ರೊ| ಎಸ್‌.ಜಿ. ರೊಡಗಿ, ಮೇಧಾ ಪಾಟ್ಕರ ಆಧುನಿಕ ಸಮಾಜದ ಮಹಿಳೆಯರಿಗೆ ಮಾದರಿಯಾಗಿದ್ದು, ಪರಿಸರ ಸಂರಕ್ಷಣೆ ವಿಷಯದಲ್ಲಿ ದೇಶದಲ್ಲಿ ಅವರು ಕಟ್ಟಿದ ಆಂದೋಲನ ವಿಶ್ವಕ್ಕೆ ಅನುಕರಣೀಯ ರೀತಿಯಲ್ಲಿದೆ ಎಂದರು.

ಬಿ.ಎಲ್‌.ಡಿ.ಇ, ಸಂಸ್ಥೆಯ ನಿರ್ದೇಶಕ ಸಂ. ಗು. ಸಜ್ಜನ, ಆಡಳಿತಾಧಿಕಾರಿ ಡಾ| ಕೆ.ಜಿ. ಪೂಜಾರಿ, ವಿದ್ಯಾ ದೇಶಪಾಂಡೆ ವೇದಿಕೆ ಮೇಲಿದ್ದರು. ಮಹಿಳಾ ವೇದಿಕೆ ಮುಖ್ಯಸ್ಥೆ ಡಾ| ಮಹಾನಂದಾ ಪಾಟೀಲ ಪರಿಚಯಿಸಿದರು. ಡಾ| ಎಸ್‌.ಟಿ. ಮೆರವಡೆ ನಿರೂಪಿಸಿದರು. ಡಾ| ಭಕ್ತಿ ಮಹಿಂದ್ರಕರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next