ಮೈಸೂರು: ವಿಜ್ಞಾನ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ನಡೆಸುವ ಮೂಲಕ ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ವಿ.ಮಹದೇವಪ್ಪ ಹೇಳಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನದಲ್ಲಿ ಮಾತನಾಡಿದರು.
ವಿಜ್ಞಾನ ಎಂಬುದು ಕಥೆ ಬರೆಯುವ ಅಥವಾ ಬುರುಡೆ ಬಿಡುವ ಕ್ಷೇತ್ರವಲ್ಲ. ಹೀಗಾಗಿ ವಿಜ್ಞಾನ ಕ್ಷೇತ್ರದಲ್ಲಿ ವ್ಯವಸ್ಥಿತ ಮತ್ತು ಕ್ರಮಬದ್ಧ ಅಧ್ಯಯನ ನಡೆಸಬೇಕಿದ್ದು, ಆಗ ಮಾತ್ರವೇ ಉತ್ತಮ ಫಲಿತಾಂಶ ಲಭಿಸಲು ಸಾಧ್ಯ ಎಂದು ಹೇಳಿದರು.
ಈ ನಿಟ್ಟಿನಲ್ಲಿ ವಿಜ್ಞಾನ ಮನುಷ್ಯನ ವಿಕಾಸ, ಸಮಾಜದ ಏಳಿಗೆಯೊಂದಿಗೆ ಸ್ಥಿರ ಅಭಿವೃದ್ಧಿಗೆ ಹೆಜ್ಜೆ ಹಿಡಲು ದಾರಿದೀಪವಾಗಬೇಕಿದೆ. ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಚಾರಗಳನ್ನು ಹೇಳಿ ಕೊಡುವ ಮೂಲಕ ಅಗತ್ಯ ತರಬೇತಿ ನೀಡಬೇಕಿದೆ ಎಂದರು.
ಇದಕ್ಕೂ ಮುನ್ನ ಸಚಿವ ಎಚ್.ಸಿ.ಮಹದೇವಪ್ಪ, ಸಮ್ಮೇಳನದ ಸಾರಾಂಶಗಳ ಕಿರುಹೊತ್ತಿಗೆ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಸುತ್ತೂರು ಶ್ರೀಗಳು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷ ಡಾ. ಎಸ್.ಕೆ.ಶಿವಕುಮಾರ್, ಜೆಎಸ್‌ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರ ಮಠ, ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಕರಾದ ಪ್ರೊ.ಬಿ.ವಿ.ಸಾಂಬಶಿವಯ್ಯ, ಪ್ರಾಂಶುಪಾಲ ಪ್ರೊ.ಎಂ.ಮಹದೇವಪ್ಪ ಇದ್ದರು.