ವಾಷಿಂಗ್ಟನ್: ರಾಜಕೀಯ, ಸಾಂಸ್ಕೃತಿಕ ಪ್ರಕ್ಷುಬ್ಧಗಳ ನಡುವೆಯೂ ಶ್ರೀಲಂಕಾ ಜತೆ ಸುಸ್ಥಿರ ಸಂಬಂಧವನ್ನು ಹೊಂದುವುದಾಗಿ ಅಮೆರಿಕ ತಿಳಿಸಿದೆ. ಶ್ರೀಲಂಕದ ಮೇಲೆ ಚೀನದ ಪ್ರಭಾವ ಗಟ್ಟಿ ಆಗುತ್ತಿರುವುದರ ನಡುವೆಯೇ ಅಮೆರಿಕ ಈ ಕ್ರಮಕ್ಕೆ ಮುಂದಾಗಿರುವುದಾಗಿ ಯುಎಸ್ ಇಂಡೊ-ಪೆಸಿಫಿಕ್ ಕಮಾಂಡ್ ಮುಖ್ಯಸ್ಥ ಆ್ಯಡಂ ಫಿಲಿಪ್ಸ್ ಡೇವಿಡ್ಸನ್ ತಿಳಿಸಿದ್ದಾರೆ. ಶ್ರೀಲಂಕದಲ್ಲಿ ಅಮೆರಿಕ ಸೇನೆ ನೆರವನ್ನು ಮುಂದುವರಿಸಲು ಸದನದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಹಂಬಂತೋಟಾ ಬಂದರನ್ನು 99 ವರ್ಷಗಳ ಕಾಲ ಚೀನಕ್ಕೆ ಗುತ್ತಿಗೆ ನೀಡಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಆ್ಯಡಂ ಫಿಲಿಪ್ಸ್ ಡೇವಿಡ್ಸನ್ ಹೇಳಿದ್ದಾರೆ. ಶ್ರೀಲಂಕಾದ ನೌಕಾಪಡೆ ಹೆಚ್ಚಿನ ತರಬೇತಿ ಪಡೆದಿದೆ. ಉಭಯ ನೌಕಾಪಡೆಗಳ ನಡುವೆ ಬಾಂಧವ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.