ವಾಡಿ: ಸುಳ್ಳುಗಳನ್ನೆ ಸಾರುವ ಸರಕಾರದ ಪ್ರಾಯೋಜಿತ ಮಾಧ್ಯಮಗಳಿಂದ ಜನರ ಕೂಗನ್ನು ದಮನ ಮಾಡಲಾಗುತ್ತಿದೆ. ಸತ್ಯ ಹೇಳುವ ಮೂಲಕ ಜನರ ದನಿಯಾಗಬಲ್ಲ ದಿಟ್ಟ ಮಾಧ್ಯಮಗಳ ಅಗತ್ಯವಿದೆ ಎಂದು ಪ್ರಗತಿಪರ ಚಿಂತಕ ಕಾಶೀನಾಥ ಹಿಂದಿನಕೇರಿ ಹೇಳಿದರು.
ಸಂಚಲನ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಮರವಾಡಿ ಗ್ರಾಮದ ಕೊಟಗಾರ ತೋಟದಲ್ಲಿ ಏರ್ಪಡಿಸಲಾಗಿದ್ದ ಪುಸ್ತಕ ಓದು ಸಂವಾದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರವೀಶ ಕುಮಾರ ಅವರ ದಿ ಫ್ರೀ ವಾಯ್ಸ ಎನ್ನುವ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವ ಹರ್ಷಕುಮಾರ ಕುಗ್ವೆ ಅವರ ಮಾತಿಗೆ ಏನು ಕಡಿಮೆ? ಪುಸ್ತಕದ ಸಾರಾಂಶ ಮಂಡಿಸಿ ಅವರು ಮಾತನಾಡಿದರು.
ಪುಸ್ತಕದ ಕಥಾವಸ್ತುವಿನಲ್ಲಿ ಇಂದಿನ ಮಾಧ್ಯಮಗಳ ಹೊಣೆಗೇಡಿತನದ ಮೇಲೆ ಬೆಳಕು ಚೆಲ್ಲಲಾಗಿದೆ. ಬಹುತೇಕ ಮಾಧ್ಯಮಗಳು ಸರಕಾರದ ಖಾಸಗಿ ಸೈನ್ಯದಂತೆ ಕೆಲಸ ಮಾಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಪ್ರಜಾಪ್ರಭುತ್ವದ ಕಾವಲು ನಾಯಿ ಎಂದು ಕರೆಯಿಸಿಕೊಳ್ಳುವ ಮಾಧ್ಯಮ ರಂಗ ಆಳುವ ಸರಕಾರಗಳ ಸಾಕು ನಾಯಿಗಳಾಗಿರುವುದು ವ್ಯವಸ್ಥೆಯ ದುರಂತ. ಅಧಿಕಾರದಲ್ಲಿದ್ದವರ ಪರವಾಗಿ ತುತ್ತೂರಿ ಊದುವ ಮಾಧ್ಯಮಗಳಿಂದ ಜನರು ದಾರಿತಪ್ಪುವ ಆತಂಕವಿದೆ ಎಂದು ಹೇಳಿದರು.
ಜೀವ ಬೆದರಿಕೆ ಎದುರಿಸಿ ಸತ್ಯ ಬರೆಯಲು ಪತ್ರಕರ್ತರು ಎದೆಗಾರಿಕೆ ತೋರಿಸಬೇಕಾದ ಪ್ರಸಂಗ ಸೃಷ್ಟಿಯಾಗಿದೆ. ಪತ್ರಕರ್ತರು ಮತ್ತು ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಕಸಿದುಕೊಳ್ಳಲಾಗುತ್ತಿದೆ. ಧರ್ಮಾಂಧರು, ಮತಾಂಧರು, ಭ್ರಷ್ಟ ರಾಜಕಾರಣಿಗಳು ಪತ್ರಕರ್ತರ ಮೇಲೆ ದಾಳಿ ಮಾಡುವ ಕ್ರೌರ್ಯ ಬೆಳೆಸಿಕೊಂಡಿದ್ದರಿಂದ ಗೌರಿ ಲಂಕೇಶ, ಎಂ.ಎಂ. ಕಲಬುರಗಿ ಅವರಂತ ಸಮಾಜಮುಖ ಬರಹಗಾರರು ಹಂತಕರ ಗುಂಡೇಟಿಕೆ ಬಲಿಯಾಗಬೇಕಾಯಿತು. ಪ್ರಜಾತಂತ್ರ ವ್ಯವಸ್ಥೆ ಆಧಾರಸ್ತಂಬಗಳಾದ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಹಾಗೂ ಪತ್ರಿಕಾರಂಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೌಡ್ಯ ಪೋಷಿಸುವ ಮಾಧ್ಯಮಗಳಿಂದ ಪ್ರಜಾಪ್ರಭುತ್ವದ ತಳಪಾಯ ಶಿಥಿಲಗೊಳ್ಳುತ್ತಿದೆ. ಭ್ರಷ್ಟ ರಾಜಕಾರಣದ ವಿರುದ್ಧ ಜನರು ದಂಗೆ ಏಳುವ ಕಾಲ ದೂರವಿಲ್ಲ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕ ಮಲ್ಲೇಶ ನಾಟೀಕಾರ, ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗುತ್ತಿರುವ ವಿದ್ಯಾರ್ಥಿ ಯುವಜನರಲ್ಲಿ ಸಾಹಿತ್ಯ ಓದುವ ಹವ್ಯಾಸ ಬೆಳೆಸಬೇಕಾದ ಅಗತ್ಯವಿದೆ. ವಿಚಾರ ಜ್ಞಾನ ಬೆಳೆಯಲು ಓದು ಹವ್ಯಾಸ ಬಹುಮುಖ್ಯವಾಗಿದ್ದು, ಸಂಚಲನ ಸಾಹಿತ್ಯ ವೇದಿಕೆಯಿಂದ ಪ್ರತಿ ತಿಂಗಳು ಪುಸ್ತಕ ಸಂವಾದ ನಡೆಸಲಾಗುತ್ತಿದೆ ಎಂದರು.
ಸಂಚಲನ ಸಾಹಿತ್ಯ ವೇದಿಕೆ ಅಧ್ಯಕ್ಷ ಮಡಿವಾಳಪ್ಪ ಹೇರೂರ ಅಧ್ಯಕ್ಷತೆ ವಹಿಸಿದ್ದರು. ವಾಡಿ ವೀರಶೈವ ಸಮಾಜದ ಹಿರಿಯ ಮುಖಂಡ ಭೀಮಶಾ ಜಿರೊಳ್ಳಿ ಅತಿಥಿಗಳಾಗಿದ್ದರು. ಸಂಚಲನ ವೇದಿಕೆ ವೀರಣ್ಣ ಯಾರಿ, ವಿಕ್ರಮ ನಿಂಬರ್ಗಾ, ದೇವಿಂದ್ರ ಕರದಳ್ಳಿ, ಸಿದ್ದರಾಜ ಮಲಕಂಡಿ, ಸಿದ್ದಯ್ಯಶಾಸ್ತ್ರೀ ನಂದೂರಮಠ, ರಾಯಪ್ಪ ಕೊಟಗಾರ, ಮಲ್ಲಿಕಪಾಶಾ ಮೌಜನ್, ಶ್ರವಣಕುಮಾರ ಮೌಸಲಗಿ, ರಘುವೀರ ಪವಾರ, ಗುಂಡಪ್ಪ ಭಂಕೂರ, ಕರುಣೇಶ ಕೆಲ್ಲೂರ, ಶೆಂಕ್ರೆಪ್ಪ ಜುಮಲಾಪುರ, ಶ್ರೀಕಾಂತ ಬಿರಾಳ ಪಾಲ್ಗೊಂಡಿದ್ದರು. ಚಂದ್ರು ಕರ್ಣಿಕ ನಿರೂಪಿಸಿದರು. ರವಿಕುಮಾರ ಕೋಳಕೂರ ವಂದಿಸಿದರು.