Advertisement

ಉತ್ತಮ ದಾಖಲಾತಿ; ಬೇಕಿದೆ ಅಗತ್ಯ ಸೌಲಭ್ಯ

08:59 PM Sep 22, 2021 | Team Udayavani |

ಹೆಬ್ರಿ: 139 ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ  ಹೆಬ್ರಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಈ ಬಾರಿ ದಾಖಲೆ ಪ್ರಮಾಣದ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.

Advertisement

1882ರಲ್ಲಿ ಹುಲ್ಲಿನ ಮಾಡು, ಚಿಕ್ಕ ತರಗತಿ ಕೊಠಡಿ ಓರ್ವ ಶಿಕ್ಷಕರೊಂದಿಗೆ ಆರಂಭಗೊಂಡ ಶಾಲೆಯಲ್ಲಿ ಇಂದು ಕನ್ನಡ ಮಾಧ್ಯಮ ಜತೆ ಆಂಗ್ಲ ಮಾಧ್ಯಮ ತರಗತಿಗಳು ನಡೆಯತ್ತಿದೆ.

ಕಳೆದ ವರ್ಷ ಒಟ್ಟು 305 ವಿದ್ಯಾರ್ಥಿಗಳಿದ್ದರು. ಈ ಬಾರಿ ಒಂದನೇ ತರಗತಿಗೆ 54 ವಿದ್ಯಾರ್ಥಿಗಳು ದಾಖಲಾಗಿದ್ದು   ಒಟ್ಟು 77 ವಿದ್ಯಾರ್ಥಿಗಳು ಇತರ ತರಗತಿಗಳಿಗೆ ಸೇರ್ಪಡೆಗೊಂಡಿದ್ದಾರೆ. 2ರಿಂದ 8ನೇ ತರಗತಿ ತನಕ 328 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಆಂಗ್ಲ ಮಾಧ್ಯಮ ತರಗತಿ:

2011-12ರಲ್ಲಿ 6ನೇ ತರಗತಿಯಿಂದ ಆಂಗ್ಲ ಮಾದ್ಯಮ ಆರಂಭಗೊಂಡಿದ್ದು ಕಳೆದ 3 ವರ್ಷಗಳ ಹಿಂದೆ 1ನೇ ತರಗತಿಯಿಂದ ಆಂಗ್ಲಮಾಧ್ಯಮ ಆರಂಭಗೊಂಡಿದೆ.  ಸರಕಾರಿ ಶಾಲೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗಬಾರದು ಎಂಬ ನಿಟ್ಟಿನಲ್ಲಿ  ಹೆತ್ತವರ ನೆರವಿನಿಂದ ಇಲ್ಲಿ ಎಲ್‌ಕೆಜಿ ತರಗತಿಗಳು ಆರಂಭಿಸಲಾಗಿದ್ದು 37 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

Advertisement

ಶಿಕ್ಷಕರ ಕೊರತೆ:

ಶಾಲೆಯಲ್ಲಿ ಪ್ರಸ್ತುತ 10 ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ನಿಯಮ ಪ್ರಕಾರ  13 ಜನ ಶಿಕ್ಷಕರ ಅಗತ್ಯವಿದ್ದು 3 ಜನ ಶಿಕ್ಷಕರ  ಕೊರತೆ ಇದೆ.

ಕಡಿಮೆಯಾಗದ  ವಿದ್ಯಾರ್ಥಿ ಸಂಖ್ಯೆ:

ಈ ಹಿಂದೆ ಬಂಗಾರುಗುಡ್ಡೆ, ಇಂದಿರಾ ನಗರ, ಕನ್ಯಾನ, ಗಾಂಧಿ ನಗರ, ಕುಚ್ಚಾರು, ಮುದ್ರಾಡಿ, ಶಿವಪುರ, ವಂಡಾರಬೆಟ್ಟು, ಕೊಂಡೆಜೆಡ್ಡು, ಸೊಳ್ಳೆ ಕಟ್ಟೆ, ನಾಡಾ³ಲು, ಮಂಡಾಡಿಜೆಡ್ಡು, ಸೀತಾನದಿ, ಸೋಮೇಶ್ವರ ಸುತ್ತಮುತ್ತಲಿನ ಗ್ರಾಮದ  ಮಕ್ಕಳು ಇದೇ ಶಾಲೆಗೆ ಬರುತ್ತಿದ್ದು 800 ವಿದ್ಯಾರ್ಥಿಗಳನ್ನು ಹೊಂದಿ ಹಿರಿಯ ಶಾಲೆ ಎಂಬ ಹೆಗ್ಗಳಿಕೆ ಇತ್ತು. ಇಂದು ಈ ಶಾಲೆಯ ವ್ಯಾಪ್ತಿಯಲ್ಲಿ  16 ಸರಕಾರಿ,  2 ಖಾಸಗಿ ಶಾಲೆಗಳಿದ್ದರೂ 382 ವಿದ್ಯಾರ್ಥಿಗಳನ್ನು ಹೊಂದಿರುವುದು ದಾಖಲಾಗಿದೆ.

ಮೂಲ ಸೌಕರ್ಯ ಕೊರತೆ  :

ಸುಮಾರು 2.95 ಎಕ್ರೆ ಜಾಗದಲ್ಲಿ ಹೆಬ್ರಿಯ ಹೃದಯ ಭಾಗದಲ್ಲಿರುವ ಶಾಲೆಗೆ ಆವರಣ ಗೋಡೆ ಸರಿಯಾಗಿಲ್ಲದೆ ಭದ್ರತೆ ಇಲ್ಲ.  ಶಾಲೆಗೆ ಗೇಟ್‌ ಇಲ್ಲದೆ ಇರುವುದರಿಂದ ಅನೈತಿಕ ಚಟುವಟಿಕೆಗಳಿಗೆ ತಾಣವಾಗುವ ಭೀತಿಯೂ ಇದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದ‌ರಿಂದ  ಶೌಚಾಲಯ, ತರಗತಿ ಕೊಠಡಿಗಳ ಕೊರತೆ ಎದುರಾಗಿದೆ.

ನೂತನ ಕಟ್ಟಡದ ಆವಶ್ಯಕತೆ:

139 ವರ್ಷಗಳ ಇತಿಹಾಸವಿರುವ ಶಾಲೆಗೆ ನೂತನ ಕಟ್ಟಡದ ಆವಶ್ಯಕತೆ ಇದೆ. ಈಗಾಗಲೇ ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿ ಕಾಣುತ್ತಿದ್ದು ಮುಂದೆಯು ಈ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ಮುತುವರ್ಜಿ ವಹಿಸಿದಾಗ ಉತ್ತಮ ವಾತಾವರಣವನ್ನು ನಿರ್ಮಿಸಲು ಸಾಧ್ಯವಿದೆ. ಸರಕಾರಿ ಶಾಲೆಗಳ ಪೈಕಿ ಅತೀ ಹೆಚ್ಚು  ವಿದ್ಯಾರ್ಥಿಗಳನ್ನು ಹೊಂದಿದ  ಈ  ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಪ್ರತೀ ವರ್ಷ ಹೆಚ್ಚುತ್ತಿದೆ.ಚಂಪಕಾ ಕೆ.,  ಮುಖ್ಯ ಶಿಕ್ಷಕಿ

ಆವರಣ ಗೋಡೆ ಅಗತ್ಯ:

ಶಾಲೆಯು ಪೇಟೆಯ ಮಧ್ಯ ಇರುವುದರಿಂದ  ಭದ್ರತೆಯ ಕಾರಣದಿಂದ  ಆವರಣ ಗೋಡೆಯ ಆವಶ್ಯಕತೆ ಇದೆ. ಇಲ್ಲಿ  ಕಲಿತ ಸಾವಿರಾರು ವಿದ್ಯಾರ್ಥಿಗಳು ಉತ್ತಮ ಸ್ಥಾನದಲ್ಲಿದ್ದಾರೆ. ಅವರು ಈ ಶಾಲೆಯ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದರೆ ಮಾದರಿ ಶಾಲೆಯಾಗಿ ರೂಪುಗೊಳ್ಳಲು ಸಾಧ್ಯವಿದೆ.ತಿಪ್ಪೇಸ್ವಾಮಿ,  ಎಸ್‌ಡಿಎಂಸಿ ಅಧ್ಯಕ್ಷರು

-ಹೆಬ್ರಿ ಉದಯಕುಮಾರ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next