Advertisement

ಸಿಇಟಿ ಪರೀಕ್ಷೆಗೆ ಅಗತ್ಯ ಕ್ರಮ: ಡಾ|ಬಗಾದಿ ಗೌತಮ್‌

12:42 PM Jul 24, 2020 | Suhan S |

ಚಿಕ್ಕಮಗಳೂರು: ಜಿಲ್ಲೆಯ ಒಟ್ಟು 6 ಪರೀಕ್ಷಾ ಕೇಂದ್ರಗಳಲ್ಲಿ ಜು.30 ಮತ್ತು 31 ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ನಡೆಯಲಿದ್ದು ಕೋವಿಡ್‌-19 ಹಿನ್ನೆಲೆ ಜಿಲ್ಲಾಡಳಿತದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ತಿಳಿಸಿದರು.

Advertisement

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಪೂರ್ವ ಸಿದ್ಧತೆಯ ಕುರಿತು ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಜು.30 ಮತ್ತು 31 ರಂದು ಎರಡು ದಿನಗಳ ಕಾಲ 6 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 2,592 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದ್ದು ಚಿಕ್ಕಮಗಳೂರು ನಗರದ ಬೇಲೂರು ರಸ್ತೆಯಲ್ಲಿನ ಪಪೂ ಕಾಲೇಜು, ಎಂ.ಇ.ಎಸ್‌. ಕಾಲೇಜು, ಬಸವನಹಳ್ಳಿಯ ಕಾಲೇಜು, ಮೌಂಟೇನ್‌ ವ್ಯೂ ಕಾಲೇಜು ಹಾಗೂ ಕಡೂರು ಪಟ್ಟಣದ ಬಾಲಕಿಯರ ಪಪೂ ಕಾಲೇಜು, ಹಾಗೂ ಬಾಲಕರ ಪಪೂ ಕಾಲೇಜಗಳನ್ನು ಪರೀಕ್ಷಾ ಕೇಂದ್ರಗಳನ್ನಾಗಿ ನಿಗ ಪಡಿಸಲಾಗಿದೆ ಎಂದರು.

ಕೋವಿಡ್‌-19 ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಈಗಾಗಲೇ ಪರೀಕ್ಷಾ ಕೊಠಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಪರೀಕ್ಷಾ ಹಿಂದಿನ ದಿನ ನಗರಸಭಾ ವತಿಯಿಂದ ಪ್ರತಿ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಸ್ಯಾನಿಟೈಸ್‌ ಮಾಡಲಾಗುವುದು ಹಾಗೂ ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ 24 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಪರೀಕ್ಷೆಗೆ ಹಾಜರಾಗುವ ಪರೀಕ್ಷಾರ್ಥಿಗಳು ತಮ್ಮ ಆರೋಗ್ಯದ ಹಿತದೃಷ್ಟಿಯಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ 2ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗಿ ಥರ್ಮಲ್‌ ಸ್ಕ್ಯಾನಿಂಗ್‌, ಸ್ಯಾನಿಟೈಸ್‌ ಬಳಿಕ ಪರೀಕ್ಷಾ ಕೊಠಡಿಗಳಿಗೆ ತೆರಳುವಂತೆ ಕೊಠಡಿ ಮೇಲ್ವಿಚಾರಕರು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಒಂದು ಹೆಚ್ಚುವರಿ ಪ್ರತ್ಯೇಕ ಕೊಠಡಿ ನಿಗದಿ ಪಡಿಸಲಾಗಿದ್ದು, ರೋಗದ ಲಕ್ಷಣಗಳು ಕಂಡು ಬಂದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಮೂಲಕ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆಗೆ ಅವಕಾಶ ನೀಡಲಾಗಿದೆ. ಪಾಸಿಟಿವ್‌ ಪ್ರಕರಣಗಳು ಹಾಗೂ ನಿಯಂತ್ರಿತ ವಲಯಗಳಿಂದ ಬರುವ ವಿದ್ಯಾರ್ಥಿಗಳಿಗೆ ನಗರದ ಮಧುವನ ಲೇಔಟ್‌ನಲ್ಲಿರುವ ಮುಕ್ತ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದರು.

Advertisement

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಸಕಾಲಕ್ಕೆ ಬರಲು ಅನುಕೂಲವಾಗುವಂತೆ ಕೆಎಸ್‌ಆರ್‌ಟಿಸಿ ಪ್ರತಿ ತಾಲೂಕು ಕೇಂದ್ರಗಳಿಂದ ವಿಶೇಷ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು ವಿದ್ಯಾರ್ಥಿಗಳು ಯಾವುದೇ ಆತಂಕ, ಭಯವಿಲ್ಲದೇ ಪರೀಕ್ಷೆಗೆ ಹಾಜರಾಗುವಂತೆ ತಿಳಿಸಿದರು. ಸಭೆಯಲ್ಲಿ ಚಿಕ್ಕಮಗಳೂರು ಮತ್ತು ಕಡೂರು ತಹಶೀಲ್ದಾರ್‌ ಡಾ| ಕೆ.ಜೆ ಕಾಂತರಾಜ್‌, ಜೆ.ಉಮೇಶ್‌ ಕುಮಾರ್‌, ಪಪೂ ಶಿಕ್ಷಣ ಇಲಾಖೆ ಉಪನಿರ್ದೇಶಕ ನಾಗರಾಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಉಮೇಶ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್‌, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೀರೇಶ್‌, ಪರೀಕ್ಷಾ ಕೇಂದ್ರಗಳ ಮುಖ್ಯ ಅಧಿಧೀಕ್ಷಕರು ಹಾಗೂ ವಿವಿಧ ಇಲಾಖೆಗಳ ಅಧಿ ಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next