Advertisement

Japan: ಜಪಾನ್‌ನಲ್ಲಿ ಒಂಟಿಯಾಗಿರುವ 37 ಸಾವಿರ ಮಂದಿ ಸಾವು!

06:42 PM Sep 01, 2024 | Team Udayavani |

ಟೋಕಿಯೋ: ವೃದ್ಧರ ಸಂಖ್ಯೆ ಹೆಚ್ಚಾಗಿ, ಯುವಜನರ ಸಂಖ್ಯೆ ಕಡಿಮೆಯಾಗುತ್ತಿರುವ ಸಮಸ್ಯೆ ಎದುರಿಸುತ್ತಿರುವ ಜಪಾನ್‌ನಲ್ಲಿ ಇದೀಗ ವೃದ್ಧರ ಸುರಕ್ಷತೆಯ ವಿಚಾರವೂ ಸವಾಲಾಗಿದೆ.

Advertisement

2024ರ ಮೊದಲಾರ್ಧದಲ್ಲೇ ಮನೆಗಳಲ್ಲಿ ಒಬ್ಬಂಟಿಯಾಗಿರುವ 37 ಸಾವಿರ ಮಂದಿ ಮೃತಪಟ್ಟಿದ್ದು, ಈ ಪೈಕಿ ಶೇ.70 ಮಂದಿ 65 ವರ್ಷದ ಮೇಲ್ಪಟ್ಟವರಾಗಿದ್ದಾರೆ ಎಂದು ಜಪಾನ್‌ನ ನ್ಯಾಷನಲ್‌ ಪೊಲೀಸ್‌ ಏಜೆನ್ಸಿ ವರದಿ ನೀಡಿದೆ.

ಅದರಲ್ಲಿ 4 ಸಾವಿರದಷ್ಟು ಮಂದಿ ಮೃತಪಟ್ಟ ಒಂದು ತಿಂಗಳ ಬಳಿಕ ಅವರು ಸತ್ತ ಮಾಹಿತಿ ದೊರೆತಿದೆ. ಜತೆಗೆ ಕಾಣೆಯಾಗಿ ಒಂದು ವರ್ಷವಾದ ಬಳಿಕ 130 ಮೃತದೇಹಗಳು ದೊರೆತಿದೆ ಎಂದು ವರದಿ ಹೇಳಿದೆ.

ನ್ಯಾಷನಲ್‌ ಪೊಲೀಸ್‌ ಏಜೆನ್ಸಿಯ ಮಾಹಿತಿಯ ಪ್ರಕಾರ ಒಂಟಿಯಾಗಿ ಬದುಕುತ್ತಿದ್ದ ಸುಮಾರು 37,227 ಮಂದಿಯ ಮೃತದೇಹ ಮನೆಯಲ್ಲಿ ದೊರೆತಿದೆ. ಅವರಲ್ಲಿ ಶೇ.70ರಷ್ಟು ಮಂದಿ 65ರ ವಯಸ್ಸು ದಾಟಿದವರು ಎನ್ನಲಾಗಿದೆ. ಶೇ.40ರಷ್ಟು ಮಂದಿಯ ದೇಹ ಅವರು ಸತ್ತ ಒಂದು ದಿನದಲ್ಲೇ ದೊರೆತಿದೆ. ಆದರೆ 3,939 ಮಂದಿಯ ಮೃತದೇಹ ಅವರು ಸತ್ತು ಒಂದು ತಿಂಗಳು ಕಳೆದ ಬಳಿಕ ದೊರೆತಿದೆ. 130 ಮಂದಿ ನಾಪತ್ತೆಯಾಗಿದ್ದಾರೆ ಎಂದುಕೊಂಡ ಒಂದು ವರ್ಷದ ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಅದರಲ್ಲಿ 85 ವರ್ಷ ಮೇಲ್ಪಟ್ಟವರ 7,498 ಶವಗಳು, 75-79 ವರ್ಷದವರ 5,920 ಶವಗಳು ದೊರೆತಿವೆ.

ಹೆಚ್ಚುತ್ತಲೇ ಇದೆ ಒಬ್ಬಂಟಿಗರ ಸಂಖ್ಯೆ:

Advertisement

ಈ ವರ್ಷದ ಆರಂಭದಲ್ಲಿ ರಾಷ್ಟ್ರೀಯ ಜನಸಂಖ್ಯಾ ಹಾಗೂ ಸಾಮಾಜಿಕ ಭದ್ರತಾ ಸಂಶೋಧನಾ ಸಂಸ್ಥೆ ನಡೆಸಿದ್ದ ವರದಿಯ ಪ್ರಕಾರ ದೇಶದಲ್ಲಿ ಒಂಟಿಯಾಗಿ ಬದುಕುತ್ತಿರುವ ಹಿರಿಯ ನಾಗರಿಕರ ಸಂಖ್ಯೆ(65 ವರ್ಷ ಮೇಲ್ಪಟ್ಟು) 2050ರ ವೇಳೆಗೆ 1.8 ಕೋಟಿಯಷ್ಟು ತಲುಪಲಿದೆ. ಅದೇ ವರ್ಷ ದೇಶದಲ್ಲಿ ಒಂಟಿಯಾಗಿ ಬದುಕುವವರ ಒಟ್ಟು ಜನರ ಸಂಖ್ಯೆ 2.33 ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಜಪಾನ್‌ನಲ್ಲಿ ಪ್ರತಿ 10 ಮಂದಿಯ ಪೈಕಿ ಒಬ್ಬರು 80 ವರ್ಷದವರಿದ್ದು, ಗ್ರಾಮೀಣ ಭಾಗದಲ್ಲಂತೂ ವೃದ್ಧರ ಸಂಖ್ಯೆ ತೀವ್ರ ಹೆಚ್ಚಳವಾಗಿದೆ. ಮನೆಯ ಕಿರಿಯರು ಕೂಡ ಕೆಲಸಗಳನ್ನು ಅರಸಿ ಪಟ್ಟಣಗಳತ್ತ ಹೊರಟ ಹಿನ್ನೆಲೆಯಲ್ಲಿ ವೃದ್ಧರು ಒಬ್ಬಂಟಿಯಾಗಿದ್ದಾರೆ. ಹಬ್ಬ ಆಚರಣೆಗಳ ಸಿದ್ಧತೆಯನ್ನೂ ವೃದ್ಧರು ಮಾಡಲು ಸಾಧ್ಯವಾಗದ ಕಾರಣಕ್ಕೆ ಇತ್ತೀಚೆಗಷ್ಟೇ (ಫೆ.17) ಸಾವಿರ ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದ ಜಪಾನ್‌ ಸಾಂಪ್ರದಾಯಿಕ ಸೊಮಿನ್‌ಸೈ ಹಬ್ಬವನ್ನೂ ಅಂತ್ಯಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next