Advertisement

11 ಲಕ್ಷ ಮಂದಿ ಇನ್ನೂ ಲಸಿಕೆಯಿಂದ ದೂರ

10:24 AM Nov 25, 2021 | Team Udayavani |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 11 ಲಕ್ಷ ಮಂದಿ ಕೊರೊನಾ ಲಸಿಕೆ ಒಂದೂ ಡೋಸ್‌ ಕೂಡಾ ಪಡೆದಿಲ್ಲ! ಲಸಿಕೆಯಿಂದ ದೂರ ಉಳಿದವರ ಮನೆಗಳಿಗೆ ತೆರಳಿ ಲಸಿಕೆ ನೀಡಲು ಬಿಬಿಎಂಪಿ ಮುಂದಾ ಗಿದ್ದು, 80ಕ್ಕೂ ಬೈಕ್‌ ಮತ್ತು 16 ಕಾರುಗಳು ಲಸಿಕೆ ವಾಹನಗಳಾಗಿ ನಗರವನ್ನು ಸುತ್ತಲಿವೆ. ಕರಡು ಮತದಾರರ ಪಟ್ಟಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಲಸಿಕೆ ವ್ಯಾಪ್ತಿಗೆ ಬರುವವರ ಸಂಖ್ಯೆ 91.7 ಲಕ್ಷ ಇದೆ.

Advertisement

ಸದ್ಯ 80.7 ಲಕ್ಷ ಮಂದಿ ಮಾತ್ರ ಲಸಿಕೆ ಪಡೆದಿದ್ದು, 11.3 ಲಕ್ಷ ಮಂದಿ ಕೊರೊನಾ ಲಸಿಕೆಯಿಂದ ದೂರ ಉಳಿದಿದ್ದಾರೆ. ಪ್ರಮುಖವಾಗಿ ಬಿಬಿಎಂಪಿ ಪಶ್ಚಿಮ ವಲಯದಲ್ಲಿ 3.8 ಲಕ್ಷ ಮಂದಿ, ರಾಜರಾಜೇಶ್ವರಿ ನಗರ 2.6 ಲಕ್ಷ ಮಂದಿ, ಪೂರ್ವ ವಲಯ 1.8 ಲಕ್ಷ, ದಕ್ಷಿಣ 1.5 ಲಕ್ಷ ಮಂದಿ, ದಾಸರಹಳ್ಳಿ 1.3 ಲಕ್ಷ ಮಂದಿ ಒಂದೂ ಡೋಸ್‌ ಲಸಿಕೆ ಪಡೆದಿಲ್ಲ. ‌

ಇಂಥವರ ಪತ್ತೆಗೆ ಕಳೆದ 10 ದಿನಗಳಿಂದ ನಗರ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ, ಆಯಾ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಆರೋಗ್ಯ ಇಲಾಖೆಯ ಎಲ್ಲಾ ಸಿಬ್ಬಂದಿಯು ಪ್ರತಿ ವಾರ್ಡ್ ನಲ್ಲಿ ಬರುವ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆದಿರುವ ಬಗ್ಗೆ ಖಾತರಿಪಡಿಸಿಕೊಂಡು ಲಸಿಕೆ ಪಡೆಯದವರಿಗೆ ಲಸಿಕೆ ನೀಡುತ್ತಿದ್ದಾರೆ. ಈ ಕಾರ್ಯಕ್ಕೆ ಲಸಿಕೆ ವಾಹನಗಳು ಸೇರ್ಪಡೆಯಾಗಲಿವೆ. ಬಿಬಿಎಂಪಿ ಕೇರ್‌ ಇಂಡಿಯಾ ಸಹಯೋಗದಲ್ಲಿ ಲಸಿಕೆ ವಾಹನ ಆರಂಭಿಸಿದೆ.

ಇದನ್ನೂ ಓದಿ:- ಅಂಬೇವಾಡಿ-ಮೌಳಂಗಿ ರಸ್ತೆ ದುರಸ್ತಿಗೆ ಆಗ್ರಹ

ಪ್ರತಿ ವಲಯಕ್ಕೆ 8 ದ್ವಿಚಕ್ರ ವಾಹನಗಳು ಹಾಗೂ 2 ಮೊಬೈಲ್‌(ನಾಲ್ಕು ಚಕ್ರ ವಾಹನ) ಸೇರಿದಂತೆ ಒಟ್ಟು 80 ದ್ವಿಚಕ್ರ ವಾಹನ ಹಾಗೂ 16 ಮೊಬೈಲ್‌ (ನಾಲ್ಕು ಚಕ್ರ ವಾಹನ) ವಾಹನಗಳು ಬ್ಲಾಕ್‌ ಮತ್ತು ಲೇನ್‌ ಮಟ್ಟದಲ್ಲಿ ಲಸಿಕೆ ನೀಡಲು ಹೋಗುವ ಆರೋಗ್ಯ ಸಿಬ್ಬಂದಿಯ ಜೊತೆ ಕಾರ್ಯನಿರ್ವಹಿಸಲಿವೆ.

Advertisement

70 ವಾರ್ಡ್‌ ಭೇಟಿ: ಲಸಿಕೆ ಪಡೆಯದವರ ಪತ್ತೆ ಕಾರ್ಯದಲ್ಲಿ ಈವರೆಗೂ ಸುಮಾರು 70 ವಾರ್ಡ್‌ಗಳಲ್ಲಿ ಆರೋಗ್ಯ ತಂಡವು ಭೇಟಿ ನೀಡಿದ್ದು, ಮೊದಲ ಮತ್ತು ಎರಡನೇ ಡೋಸ್‌ ಸೇರಿ ಸುಮಾರು 35,000 ಮಂದಿಗೆ ಲಸಿಕೆ ನೀಡಲಾಗಿದೆ. ಇದೇ ವೇಳೆ ಮತದಾರರ ಪಟ್ಟಿ ಅನುಸಾರ ಮನೆಯಲ್ಲಿ 18 ವರ್ಷ ಮೇಲ್ಪಟ್ಟ ವರು ಲಸಿಕೆ ಪಡೆದಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಲಸಿಕೆ ಪಡೆಯದವರಿಗೆ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದರು.

ಎರಡನೇ ಡೋಸ್‌ಗೂ ಆದ್ಯತೆ: ಈವರೆಗೂ 56.4 ಲಕ್ಷ ಮಂದಿ ಮಾತ್ರ ಮೊದಲ ಮತ್ತು ಎರಡೂ ಡೋಸ್‌ ಲಸಿಕೆಯನ್ನು ಪೂರ್ಣ ಗೊಳಿಸಿದ್ದಾರೆ. ಮೊದಲನೇ ಡೋಸ್‌ ಲಸಿಕೆ ಪಡೆದು ಎರಡನೇ ಡೋಸ್‌ ಲಸಿಕೆ ಪಡೆಯ ದಿರುವವರ ಪಟ್ಟಿಯನ್ನು ಕೋವಿನ್‌ ಪೋರ್ಟಲ್‌ ನಿಂದ ಪಡೆದುಕೊಂಡು, ಎರಡನೇ ಡೋಸ್‌ ಲಸಿಕೆ ಪಡೆಯದವರಿಗೆ ದೂರವಾಣಿ ಮೂಲಕ ಕರೆ ಮಾಡಿ ಎರಡನೇ ಡೋಸ್‌ ಲಸಿಕೆ ಪಡೆಯಲು ತಿಳಿಸಲಾಗುತ್ತಿದೆ ಎಂದು ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದರು.

1.37 ಕೋಟಿ ಡೋಸ್‌ ಲಸಿಕೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ ಒಟ್ಟು 1,37,40,715 ಡೋಸ್‌ ಲಸಿಕೆ ನೀಡಲಾಗಿದ್ದು, 80,62,163 ಮೊದಲ ಡೋಸ್‌(ಶೇ. 88 ರಷ್ಟು), 56,41,455 ಎರಡನೇ ಡೋಸ್‌(ಶೇ. 62 ರಷ್ಟು) ಲಸಿಕೆಯನ್ನು ನೀಡಲಾಗಿದೆ. ನಗರದ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಯಲಹಂಕದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನ ಮತ್ತು ಮಲ್ಲೇಶ್ವರದ ಕಬ್ಬಡಿ ಆಟದ ಮೈದಾನದಲ್ಲಿ ಬೃಹತ್‌ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ವಾಕ್‌ ಇನ್‌ ಹಾಗೂ ಡ್ರೆ„ವ್‌ ಇನ್‌ ಮೂಲಕ ವಾಹನಗಳಲ್ಲೇ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ.

“ಚುನಾವಣಾ ಮತದಾರ ಪಟ್ಟಿ ಬಳಸಿ ಕೊರೊನಾ ಲಸಿಕೆ ಪಡೆಯದವರ ಪತ್ತೆ ಮಾಡಿ ಲಸಿಕೆ ನೀಡಲು ಕ್ರಮವಹಿಸಲಾಗುತ್ತಿದೆ. ಲಸಿಕೆ ದಾಸ್ತಾನು ಇದ್ದು, ಬಿಬಿಎಂಪಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿಯೂ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ತೆರಳಿ ಮೊದಲ ಮತ್ತು ಎರಡನೇ ಡೋಸ್‌ ಪಡೆಯಬೇಕು.”

  • ಡಾ.ತ್ರಿಲೋಕ್‌ ಚಂದ್ರ, ವಿಶೇಷ ಆಯುಕ್ತರು, ಬಿಬಿಎಂಪಿ ಆರೋಗ್ಯ ವಿಭಾಗ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next